ತೆಲುಗು ಕಿರುತೆರೆಯಲ್ಲೂ 'ಕಾಂತಾರ' ಕಿಚ್ಚು: KGF- 2 ರೇಟಿಂಗ್ ಮೀರಿಸಿ ದಾಖಲೆ
'ಕಾಂತಾರ' ಸಿನಿಮಾ ಆರ್ಭಟ ಇನ್ನು ಕಮ್ಮಿ ಆಗಿಲ್ಲ. ಸಿನಿಮಾ ಥಿಯೇಟರ್‌ಗೆ ಬಂದು ಹೋಗಿದ್ದರೂ, ಓಟಿಟಿಗೆ ಬಂದರೂ ಟಿವಿಯಲ್ಲೂ ಸಖತ್ ಸದ್ದು ಮಾಡ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ 15.8 ಟಿವಿಆರ್ ಸಾಧಿಸಿ ಸಿನಿಮಾ ಧೂಳೆಬ್ಬಿಸಿತ್ತು. ಕನ್ನಡ ನಂತರ ತೆಲುಗು ಕಿರುತೆರೆಯಲ್ಲೂ ಭಾರೀ ರೇಟಿಂಗ್ ಗಿಟ್ಟಿಸಿ ದಾಖಲೆ ಬರೆದಿದೆ.
ಸೆಪ್ಟೆಂಬರ್ 30ಕ್ಕೆ ಕನ್ನಡದಲ್ಲಿ ತೆರೆಗಪ್ಪಳಿಸಿದ್ದ 'ಕಾಂತಾರ' ನೋಡ ನೋಡುತ್ತಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಪರಭಾಷಿಕರು ಮುಗಿಬಿದ್ದು ಒತ್ತಡ ಹಾಕಿ ಸಿನಿಮಾ ಡಬ್ ಮಾಡಿಸಿಕೊಂಡು ನೋಡಿದ್ದರು. ರಿಷಬ್ ಶೆಟ್ಟಿ ನಿರ್ದೇಶನ, ನಟನೆಗೆ ಹಿಂದಿ, ತಮಿಳು, ತೆಲುಗು ಪ್ರೇಕ್ಷಕರು ಬಹುಪರಾಕ್ ಹೇಳಿದ್ದರು. ಅಂದಾಜು 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಶ್ ಶೇಕ್ ಮಾಡಿತ್ತು. ಈ ಸಿನಿಮಾ ಮೂಲಕ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಆಗಿಬಿಟ್ಟರು.
ಥಿಯೇಟರ್ ನಂತರ ಓಟಿಟಿಯಲ್ಲೂ ಸಿನಿಮಾ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಕೆಲ ದಿನಗಳ ಹಿಂದೆಯಷ್ಟೇ ಸ್ಟಾರ್ ಸುವರ್ಣ ಕನ್ನಡ ವಾಹಿನಿಯಲ್ಲಿ ಪ್ರೀಮಿಯರ್ ಆಗಿದ್ದ ಸಿನಿಮಾ ಒಳ್ಳೆ ರೇಟಿಂಗ್ ಪಡೆದಿತ್ತು. ಇದೀಗ ತೆಲುಗು ಕಿರುತೆರೆಯಲ್ಲೂ 'ಕಾಂತಾರ' ಜೋರಾಗಿ ಸದ್ದು ಮಾಡಿದೆ.

'ಕಾಂತಾರ' ಚಿತ್ರಕ್ಕೆ 12.35 TVR
ಸ್ಟಾರ್ ಮಾ ವಾಹಿನಿಯಲ್ಲಿ ಜನವರಿ 22ಕ್ಕೆ 'ಕಾಂತಾರ' ತೆಲುಗು ವರ್ಷನ್ ಮೊದಲ ಬಾರಿಗೆ ಪ್ರೀಮಿಯರ್ ಆಗಿತ್ತು. ಸಿನಿಮಾ ಕ್ರೇಜ್‌ಗೆ ತಕ್ಕಂತೆ ಜನ ಮುಗಿಬಿದ್ದು ಸಿನಿಮಾ ನೋಡಿದ್ದರು. ಪರಿಣಾಮ ಸಿನಿಮಾ ಭರ್ಜರಿ ರೇಟಿಂಗ್ ಪಡೆದುಕೊಂಡಿದೆ. ಬರೀ ಅರ್ಬನ್ ಮಾರ್ಕೆಟ್‌ನಲ್ಲಿ 12.35 TVR ಸಾಧಿಸಿ ಎಲ್ಲರ ಹುಬ್ಬೇರಿಸಿದೆ. ಡಬ್ಬಿಂಗ್ ಸಿನಿಮಾವೊಂದಕ್ಕೆ ಈ ಪಾಟಿ ರೇಟಿಂಗ್ ಸಿಕ್ಕಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ. ಡಬ್ಬಿಂಗ್ ಸಿನಿಮಾಗಳಲ್ಲಿ 'ಕಾಂತಾರ' ಅತಿ ಹೆಚ್ಚು ರೇಟಿಂಗ್ ಪಡೆದ ಟಾಪ್ ಸಿನಿಮಾಗಳ ಲಿಸ್ಟ್‌ನಲ್ಲಿದೆ.

KGF- 2 ಹಿಂದಿಕ್ಕಿ ಕಾಂತಾರ ದಾಖಲೆ
ಕೆಲ ದಿನಗಳ ಹಿಂದೆ ತೆಲುಗು ಜೀ ವಾಹಿನಿಯಲ್ಲಿ KGF- 2 ಸಿನಿಮಾ ಮೊದಲ ಬಾರಿಗೆ ಪ್ರಸಾರ ಆದಾಗ 11.9 ರೇಟಿಂಗ್ ಪಡೆದಿತ್ತು. ಅದಕ್ಕಿಂತ 'ಕಾಂತಾರ' ಸಿನಿಮಾ ಹೆಚ್ಚು ರೇಟಿಂಗ್ ಪಡೆದು ಗಮನ ಸೆಳೆದಿದೆ. ಇನ್ನುಳಿದಂತೆ ಡಬ್ಬಿಂಗ್ ಸಿನಿಮಾಗಳಲ್ಲಿ ಅತಿಹೆಚ್ಚು ಟಿಆರ್‌ಪಿ ಪಡೆದ ಸಿನಿಮಾಗಳಲ್ಲಿ 'ಬಿಚ್ಚಗಾಡು'(18.75) ಮೊದಲ ಸ್ಥಾನದಲ್ಲಿದ್ದರೆ 'ಕಬಾಲಿ' (14.52) 2ನೇ ಸ್ಥಾನ, 'ಕಾಂಚನಾ- 3' (13.10) ಸಿನಿಮಾ 3ನೇ ಸ್ಥಾನದಲ್ಲಿದೆ. ಆದರೆ ಈ 3 ಸಿನಿಮಾಗಳು ಥಿಯೇಟರ್‌ನಿಂದ ನೇರವಾಗಿ ಟಿವಿಗೆ ಬಂದಿತ್ತು. ಆದ ಓಟಿಟಿ ಕಾನ್ಸೆಪ್ಟ್ ಇರಲಿಲ್ಲ.

ಬಾಕ್ಸಾಫೀಸ್‌ನಲ್ಲಿ ದಾಖಲೆ
'ಕಾಂತಾರ' ಸಿನಿಮಾ ಮಾಡಿದ ಕರಾಮತ್ತು ಅಷ್ಟಿಷ್ಟಲ್ಲ. ಒಂದರ್ಥದಲ್ಲಿ KGF- 2 ಸಿನಿಮಾವನ್ನು ಮೀರಿ ಈ ಚಿಕ್ಕ ಸಿನಿಮಾ ಸದ್ದು ಮಾಡಿತ್ತು. ಕರಾವಳಿ ಸಂಸ್ಕೃತಿ, ಆಚರಣೆಗಳನ್ನು ಸೇರಿಸಿ ಮಾಡಿದ್ದ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿತ್ತು. ಪರಭಾಷಿಕರು ಕೂಡ ಸಿನಿಮಾ ನೋಡಿ ಬೆರಗಾಗಿದ್ದರು. ಪಂಜುರ್ಲಿ, ಗುಳಿಗ ದೈವದ ಬಗ್ಗೆ ಕೇಳಿ ತಿಳಿಯಲು ಆರಂಭಿಸಿದರು. ನೂರಾರು ಕೋಟಿ ಹಾಕಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವವರಿಗೂ 'ಕಾಂತಾರ' ಚಮಕ್ ಕೊಟ್ಟಿತ್ತು. ಒಟ್ಟು 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು.

ಶೀಘ್ರದಲ್ಲೇ ಸೀಕ್ವೆಲ್ ಮುಹೂರ್ತ
ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'ಕಾಂತಾರ' ಸೀಕ್ವೆಲ್ ಘೋಷಿಸಿದೆ. ರಿಷಬ್ ಶೆಟ್ಟಿ ಅಂಡ್ ಟೀಂ ಕಥೆ ಹೆಣೆಯುವ ಕೆಲಸ ಆರಂಭಿಸಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷದಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ವಿಜಯ್ ಕಿರಗಂದೂರ್ ಘೋಷಿಸಿದ್ದಾರೆ. ಪ್ರೀಕ್ವೆಲ್‌ಗಿಂತ ಸೀಕ್ವೆಲ್ ಹಲವು ಪಟ್ಟು ದೊಡ್ಡದಾಗಿ ಇರುತ್ತದೆ. ಬಹಳ ಅದ್ಧೂರಿಯಾಗಿ ಸಿನಿಮಾ ಮಾಡಿ ಅಷ್ಟೇ ಚೆನ್ನಾಗಿ ಪ್ರಮೋಷನ್, ರಿಲೀಸ್ ಪ್ಲ್ಯಾನ್ ಕೂಡ ನಡೀತಿದೆ.


Click it and Unblock the Notifications











