ಸದ್ದಿಲ್ಲದೇ ನಡೆದೇ ಹೋಯ್ತಾ ಬಿಗ್ ಬಾಸ್ ಜೋಡಿಯ ಮದುವೆ ? ವೈರಲ್ ಫೋಟೊಗಳ ಅಸಲಿಯತ್ತೇನು ?
ಚಿತ್ರರಂಗದ ತಾರೆಯರ ವೈಯಕ್ತಿಕ ಬದುಕಿನ ಮೇಲೆ ಹಲವರ ನಿಗಾ ಇರುತ್ತೆ. ಕಣ್ತಪ್ಪಿಸಿ ಇಲ್ಲಿ ಏನೂ ಮಾಡಲು ಸಾಧ್ಯ ಇಲ್ಲ. ಯಾವುದನ್ನು ಕೂಡ ಹಲವು ದಿನಗಳವರೆಗೆ ಮುಚ್ಚಿಡಲು ಕೂಡ ಆಗುವುದಿಲ್ಲ. ಅದರಲ್ಲಿಯೂ ಈ ಡಿಜಿಟಲ್ ಯುಗದಲ್ಲಿ ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಮನರಂಜನೆಯ ಸರಕಾಗಿದೆ. ಪ್ರತಿ ಕ್ಷಣ ಕ್ಯಾಮರಾ ಇವರ ಹಿಂದೆಯೇ ಇರುತ್ತೆ. ಪ್ರತಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಖಯಾಲಿ ಹಲವು ಸ್ಟಾರ್ ಗಳಿಗಿರುತ್ತೆ.
ಇದರಿಂದಾಗಿ ರಹಸ್ಯ ರಹಸ್ಯವಾಗಿ ಉಳಿಯುವುದಿಲ್ಲ. ಬದಲಿಗೆ ಚರ್ಚೆಗೆ ಗ್ರಾಸವಾಗುತ್ತೆ. ಉದಾಹರಣೆಗೆ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಅವರ ಲವ್ & ಮ್ಯಾರೇಜ್ ಸ್ಟೋರಿಯನ್ನೇ ತೆಗೆದುಕೊಳ್ಳಿ. ಹೌದು, ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್.. ಹಿಂದಿ ಕಿರುತೆರೆಯ ಖ್ಯಾತ ಸ್ಟಾರ್ಸ್.

''ಕಿತನಿ ಮೊಹಬ್ಬತ್ ಹೈ' ' ಧಾರಾವಾಹಿಯ ಮೂಲಕ 2009ರಲ್ಲಿ ಕಿರುತೆರೆಯನ್ನು ಪ್ರವೇಶ ಮಾಡಿದ ಕರಣ್ ಕುಂದ್ರಾ ಆ ನಂತರ ''ಯೇ ಕಹಾನ್ ಆ ಗಯೇ ಹಮ್''..''ದಿಲ್ ಹೀ ತೋ ಹೈ''.. ''ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದರು. ''MTV ರೋಡೀಸ್''..''ಲವ್ ಸ್ಕೂಲ್''..''ಟೆಂಪ್ಟೇಶನ್ ಐಲ್ಯಾಂಡ್ ಇಂಡಿಯಾ''.. ಅಂತಹ ಶೋಗಳಿಗೆ ನಿರೂಪಕನಾಗಿ ಕೆಲಸ ಮಾಡಿದರು.
ಇನ್ನು ತೇಜಸ್ವಿ ಪ್ರಕಾಶ್ ಅವರಿಗೆ ''ಸ್ವರಾಗಿಣಿ'' ಬೇಕಿದ್ದ ಬ್ರೇಕ್ ನೀಡಿತು. ''ಪೆಹ್ರೆದಾರ್ ಪಿಯಾ ಕಿ''..''ರಿಶ್ತಾ ಲಿಖೇಂಗೆ ಹಮ್ ನಯಾ''.. ಧಾರಾವಾಹಿಯಲ್ಲಿ ಕಾಣಿಸಿಕೊಂಡ ತೇಜಸ್ವಿ ಪ್ರಕಾಶ್ ಅವರ ಬದುಕನ್ನು ''ನಾಗಿನ್ 6'' ಧಾರಾವಾಹಿ ಸಂಪೂರ್ಣ ಬದಲಿಸಿತು. ''ಖತ್ರೋನ್ ಕೆ ಖಿಲಾಡಿ 10'' ರಲ್ಲಿ ಕೂಡ ಕಾಣಿಸಿಕೊಂಡಿದ್ದರು ತೇಜಸ್ವಿ ಪ್ರಕಾಶ್.
ಇಂಥಾ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ 2021ರಲ್ಲಿ ''ಬಿಗ್ ಬಾಸ್'' ಮನೆಗೆ ಹೋಗಿದ್ದರು. ಇದೇ ಸಮಯದಲ್ಲಿ ಇಬ್ಬರು ನಡುವೆ ಪ್ರೇಮಾಂಕುರವಾಗಿತ್ತು.''ಬಿಗ್ ಬಾಸ್''ನ ಈ 15ನೇ ಸೀಸನ್‌ನಲ್ಲಿ ತೇಜಸ್ವಿ ಪ್ರಕಾಶ್ ಟ್ರೋಫಿ ಮುಡಿಗೇರಿಸಿಕೊಂಡರೆ ಕರಣ್ ಕುಂದ್ರಾ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.
ಹೀಗೆ ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ಇಬ್ಬರು ಗ್ರಹಸ್ಥಾಶ್ರಮಕ್ಕೆ ಕಾಲಿಡಲು ಮುಂದಾಗಿದ್ದರು. ಆದರೆ.. ತೇಜಸ್ವಿ ಅವರ ತಾಯಿ ಜೊತೆಯಲ್ಲಿ ಇಬ್ಬರು ಇನ್ನೂ ಕೆಲ ದಿನ ಕಾಲ ಕಳೆಯುವಂತೆ ಸಲಹೆ ನೀಡಿದರು. ಪರಸ್ಪರ ಅರ್ಥಮಾಡಿಕೊಳ್ಳಲು ಸಮಯಾವಕಾಶ ತೆಗೆದುಕೊಳ್ಳಿ ಎಂದು ಹೇಳಿದರು. ಒಂದು ವರ್ಷ ಜೊತೆಯಲ್ಲಿ ಓಡಾಡಿ ಆಮೇಲೆ ಮದುವೆ ಯೋಚನೆ ಮಾಡೋಣ ಎಂದು ಹೇಳಿದರು.

ತೇಜಸ್ವಿ ಪ್ರಕಾಶ್ ಅವರ ತಾಯಿಯ ಈ ಸಲಹೆಯ ಮೇರೆಗೆ ಕಳೆದ 5 ವರ್ಷಗಳಿಂದ ಪ್ರೇಮದ ಅಮಲನ್ನೇರಿಸಿಕೊಂಡು ಓಡಾಡುತ್ತಿರುವ ಕರಣ್ ಕುಂದ್ರಾ ಮತ್ತು ತೇಜಸ್ವಿನಿ ಪ್ರಕಾಶ್, ಸದ್ಯ ಸದ್ದು ಗದ್ದಲ ಇಲ್ಲದೇ ಸೈಲೆಂಟಾಗಿ ಮದುವೆಯಾಗಿದ್ದಾರೆ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಹಲವರು ಇಬ್ಬರಿಗೆ ಶುಭಾಶಯ ಕೋರುತ್ತಿದ್ದಾರೆ. ಖಾಯಂ ಆಗುವವರೆಗೂ ಗುಟ್ಟಾಗಿರಲಿ. ಹೊಸ ಜೀವನದ ಅಧ್ಯಾಯಕ್ಕೆ ಕಾಲಿಡುತ್ತಿರುವ ಕರಣ್ ಮತ್ತು ತೇಜಸ್ವಿಗೆ ಅಭಿನಂದನೆಗಳು ಎಂದು ಇಬ್ಬರ ಫೋಟೊ ಹಂಚಿಕೊಂಡು ಶುಭ ಕೋರುತ್ತಿದ್ದಾರೆ.
ಈ ಗುಪ್ತ್ ಮದುವೆಯ ಸುದ್ದಿಯ ನಡುವೆ ಕಳೆದ ವರ್ಷಾಂತ್ಯದಲ್ಲಿ ತೇಜಸ್ವಿ ಪ್ರಕಾಶ್ 2026ರಲ್ಲಿ ಮದುವೆಯಾಗುವ ಮಾತುಗಳನ್ನಾಡಿದ್ದರು. ಇವರ ಆಪ್ತ ಸ್ನೇಹಿತ ಪ್ರಿನ್ಸ್ ನರುಲಾ ಕೂಡ ಕರಣ್ ತಮ್ಮ ಕೆಲಸದ ಬದ್ಧತೆ ಮುಗಿದ ತಕ್ಷಣ ಮದುವೆಯಾಗಲಿದ್ದಾರೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು. ಈ ವಿಡಿಯೋಗಳು ಕೂಡ ಈಗ ವೈರಲ್ ಆಗುತ್ತಿದ್ದು ಹಲವರು ಇವರ ಮದುವೆಯ ಕುರಿತು ಕುರುಹು ಸಿಗಬಹುದೆನ್ನುವ ನಿರೀಕ್ಷೆಯಲ್ಲಿ ಭೂತಗನ್ನಡಿ ಹಿಡಿದು ಓಡಾಡುತ್ತಿದ್ಧಾರೆ. ಹುಡುಕುತ್ತಿದ್ದಾರೆ.
ಸದ್ಯ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಸದ್ದಿಲ್ಲದೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ತೇಜಸ್ವಿ ಪ್ರಕಾಶ್ ಆಗಲಿ ಕರಣ್ ಕುಂದ್ರಾ ಆಗಲಿ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದು ಇಬ್ಬರ ಮೌನವೋ ಅಥವಾ ಸರ್ಪ್ರೈಸ್ ನೀಡುವ ತಯಾರಿಯೋ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಈ ಹಿಂದೆಯೂ ಕೂಡ ಈ ಜೋಡಿಯ ಬಗ್ಗೆ ಅನೇಕ ಬಾರಿ ಸುಳ್ಳು ಮದುವೆ ಸುದ್ದಿಗಳು ಹರಿದಾಡಿದ್ದವು. ಆಗ ಕರಣ್ ಕುಂದ್ರಾ ಅವರು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದರು. ಹೀಗಾಗಿ, ಒಂದು ವರ್ಗ ಅಧಿಕೃತ ಮಾಹಿತಿ ಬರುವವರೆಗೂ ಕಾಯುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications