ಕರಿಮಣಿ ಧಾರಾವಾಹಿಯಲ್ಲಿ ನಟಿ ಸ್ಪಂದನಾ ಸೋಮಣ್ಣ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗ ಎರಡು ಹೊಸ ಧಾರಾವಾಹಿಗಳು ಶುರುವಾಗಲು ಸಜ್ಜಾಗಿವೆ. ಆದರೆ, ಯಾವ ಎರಡು ಧಾರಾವಾಹಿಗಳು ಮುಕ್ತಾಯಗೊಳ್ಳುತ್ತವೆ ಎನ್ನುವುದು ಗೊತ್ತಿಲ್ಲ.
ಬಿಗ್ ಬಾಸ್ ಕನ್ನಡ ಸೀಸನ್- 10 ಮುಕ್ತಾಯವಾಗಿದ್ದು, ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿತ್ತು. ಈಗ ಈ ಸಮಯಕ್ಕೆ ಎರಡು ಹೊಸ ಧಾರಾವಾಹಿಗಳು ಪ್ರಸಾರವಾಗಬಹುದು ಎಂದು ಗೆಸ್ ಮಾಡಲಾಗಿದೆ.
ಹೊಸ ಧಾರಾವಾಹಿಗಳಿಗೆ ಪ್ರೈಮ್ ಟೈಂ ಸಿಗುತ್ತಾ ಇಲ್ಲ ರಾತ್ರಿ 9.30 ಹಾಗೂ 10 ಗಂಟೆಗೆ ಎರಡು ಧಾರಾವಾಹಿಗಳಿಗೆ ಸ್ಲಾಟ್ ಫಿಕ್ಸ್ ಆಗಿದೆಯಾ? ಎಂಬುದು ಗೊತ್ತಿಲ್ಲ.

ಹೊಸ ಎರಡು ಧಾರಾವಾಹಿಗಳು
ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಶ್ರೀಗೌರಿ' ಧಾರಾವಾಹಿಯ ಪ್ರೊಮೋವನ್ನು ರಿಲೀಸ್ ಮಾಡಿದ್ದು, ಇಂದಿನಿಂದ ರಾತ್ರಿ 8.30ಕ್ಕೆ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗಲಿದೆ. ಇನ್ನು 'ಕರಿಮಣಿ' ಎಂಬ ಮತ್ತೊಂದು ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲು ಸಜ್ಜಾಗಿದೆ. ಆದರೆ ಯಾವ ಸ್ಲಾಟ್‌ನಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ, ಧಾರಾವಾಹಿಯ ಪ್ರೊಮೋವನ್ನು ಮೊದಲ ಬಾರಿಗೆ ರಿಲೀಸ್ ಮಾಡಿದ್ದು, ವೀಕ್ಷಕರಿಗೆ ಇಷ್ಟವಾಗಿದೆ.
ನಾಯಕ-ನಾಯಕಿ ನಡುವೆ ಬಿರುಕು
ಈ ಧಾರಾವಾಹಿಯಲ್ಲಿ ಎರಡು ಮನಸ್ಸುಗಳನ್ನು ಒಂದು ಮಾಡುವ ಈ 'ಕರಿಮಣಿ' ಧಾರಾವಾಹಿಯಲ್ಲಿ ನಾಯಕಿ ಹಾಗೂ ನಾಯಕ ಇಬ್ಬರ ಆಲೋಚನೆಗಳು ಡಿಫರೆಂಟ್ ಆಗಿದ್ದು, ಹೇಗೆ ಒಂದಾಗುತ್ತಾರೆ ಎಂಬ ಕುತೂಹಲವಿದೆ. ಯಾಕೆಂದರೆ ಪ್ರೊಮೋದಲ್ಲೇ ನಾಯಕಿ ಸಾಹಿತ್ಯಳ ಮದುವೆ ನಡೆಯುತ್ತಿದ್ದು, ನಾಯಕ ಕರ್ಣ ಈ ಮದುವೆಯನ್ನು ತಡೆಯಬೇಕು ಎಂದು ಹೊರಟಿದ್ದಾನೆ. ಮನೆಗೆ ಹೆಣ್ಣು ಮಗಳ ಪ್ರಾಮುಖ್ಯತೆ ಎಷ್ಟಿರುತ್ತದೆ ಎಂಬುದು ತಿಳಿದಿರುವ ಕರ್ಣ, ಸಾಹಿತ್ಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದು, ಆಕೆ ಕೆಟ್ಟವಳು ಅವಳು ಮದುವೆಯಾಗಿ ಯಾರ ಮನೆಗೂ ಅನ್ಯಾಯವಾಗಬಾರದು ಎಂದಿದ್ದಾನೆ. ಸಾಹಿತ್ಯ ಮತ್ತು ಕರ್ಣ ಇಬ್ಬರ ಸಂಬಂಧವೇನು..? ಇವರಿಬ್ಬರು ಕಥೆ ಏನು ಎಂಬುದು ಧಾರಾವಾಹಿ ಪ್ರಾರಂಭವಾದ ನಂತರವೇ ತಿಳಿಯಬೇಕಿದೆ.

ಸ್ಪಂದನಾ ನಟಿಸಿದ ಧಾರಾವಾಹಿಗಳು
ಇನ್ನು 'ಕರಿಮಣಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಸ್ಪಂದನಾ ಸೋಮಣ್ಣ ನಟಿಸಿದ್ದಾರೆ. ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೃಹಪ್ರವೇಶ' ಧಾರಾವಾಹಿಯ ನಾಯಕಿಯೇ ಸ್ಪಂದನಾ ಸೋಮಣ್ಣ. 'ನಾನು ನನ್ನ ಕನಸು' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಬಳಿಕ ಪರಭಾಷೆಗೆ ಎಂಟ್ರಿ ಕೊಟ್ಟ ಸ್ಪಂದನಾ ಈಗ ಕಳೆದ ವರ್ಷ ಮತ್ತೆ ಕನ್ನಡ ಕಿರುತೆರೆಗೆ 'ಗೃಹಪ್ರವೇಶ' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದರು. ತೆಲುಗಿನ ಹಲವು ಧಾರಾವಾಹಿಗಳಿಗೆ ಸ್ಪಂದನಾ ಸೋಮಣ್ಣ ಬಣ್ಣ ಹಚ್ಚಿದ್ದಾರೆ. 'ದಿಲ್ ಖುಷ್', 'ಮರೀಚಿ', 'ಶಟ್ ದ ನಾಯ್ಸ್' ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ನಚ್ಚಾವೆ' ಎಂಬ ತೆಲುಗಿನ ವೆಬ್ ಸಿರೀಸ್ ಹಾಗೂ ಹಿಂದಿಯ 'ಸುನ್ ಲೆ ನಾ' ಎಂಬ ಆಲ್ಬಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.
ಮುದ್ದಾಗಿರುವ ನಟಿ ಸ್ಪಂದನಾ
ಸ್ಪಂದನಾ ಸೋಮಣ್ಣ ಮೂಲತಃ ಮೈಸೂರಿನವರಾಗಿದ್ದು, ಮಾಡೆಲ್ ಕೂಡ ಹೌದು. ಧಾರಾವಾಹಿಗಳಲ್ಲಿ ಹೆಚ್ಚು ಲಂಗ ದಾವಣಿ, ಸೀರೆಯಲ್ಲಿ ಕಾಣಿಸಿಕೊಳ್ಳುವ ಸ್ಪಂದನಾ ಸಿಕ್ಕಾಪಟ್ಟೆ ಮಾಡ್ರನ್ ಉಡುಗೆಯನ್ನೂ ಧರಿಸುತ್ತಾರೆ. ಮಾಡ್ರನ್ ಡ್ರೆಸ್‌ಗಳಲ್ಲೂ ಸೂಪರ್ ಆಗಿ ಕಾಣಿಸುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸುವ ಸ್ಪಂದನಾ ಎಲ್ಲಾ ಉಡುಗೆಯಲ್ಲೂ ಮುದ್ದಾಗಿ ಕಾಣಿಸುತ್ತಾರೆ. 'ಕರಿಮಣಿ' ಧಾರಾವಾಹಿ ಸ್ಪಂದನಾ ಅವರಿಗೆ ಒಳ್ಳೆಯ ಬ್ರೇಕ್ ನೀಡಲಿ.


Click it and Unblock the Notifications











