"ನಾನು ಸಾಗುವ ದಾರಿ ಇನ್ನೂ ತುಂಬಾ ದೂರ ಇದೆ"; 'ಕರಿಮಣಿ' ಧಾರಾವಾಹಿ ನಟ ಹೀಗಂದಿದ್ದೇಕೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾದ 'ಕರಿಮಣಿ' ಧಾರಾವಾಹಿ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದೆ. ಬಹಳ ಬೇಗ ಪ್ರೇಕ್ಷಕರ ಮನೆಗೆದ್ದಿರುವ ಈ ಪಾಪ್ಯುಲರ್ ಧಾರಾವಾಹಿ ಇದೀಗ 100 ಎಪಿಸೋಡ್‌ಗಳನ್ನು ಮುಗಿಸಿರುವ ಸಂಭ್ರಮದಲ್ಲಿದೆ. ಇತ್ತೀಚೆಗಷ್ಟೇ ಈ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡ ಧಾರಾವಾಹಿ ತಂಡ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದೆ.
ಧಾರಾವಾಹಿಯ ಕಥಾ ನಾಯಕ ಕರ್ಣ ಹಾಗೂ ಕಥಾನಾಯಕಿ ಸಾಹಿತ್ಯ 'ಕರಿಮಣಿ' ಧಾರಾವಾಹಿ ಪ್ರೇಕ್ಷಕರ ಮನೆಮನ ಗೆದ್ದಿರುವುದರಲ್ಲಿ ಸಂಶಯವೇ ಇಲ್ಲ. ಕರ್ಣ ಪಾತ್ರಧಾರಿ ನಟ ಅಶ್ವಿನ್ ಅವರು 'ಕರಿಮಣಿ' ಧಾರಾವಾಹಿ ನೂರು ಎಪಿಸೋಡ್‌ಗಳ ಸಂಭ್ರಮದ ಹಿನ್ನೆಲೆಯಲ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬಹು ದೊಡ್ಡ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ.

"ಮೊದಲು, ಕರಿಮಣಿಯ 'ಕರ್ಣ'ನ ಪಾತ್ರದ ಅವಕಾಶ ನನಗೆ ಬಂದಾಗ ಬಹಳ ಖುಷಿಯಿಂದ ಒಪ್ಪಿಕೊಂಡೆ. ಆದರೆ, ನೀವು ನನ್ನನ್ನ ಒಪ್ಪುತ್ತೀರೋ, ಇಲ್ವೊ ಅನ್ನುವ ಭಯ ಮಾತ್ರ ನನಗೆ ಪ್ರತಿದಿನವೂ ಕಾಡುತಿತ್ತು. ಆ ಭಯದಿಂದಲೇ ನಾನು ಪ್ರತಿದಿನ ಶೂಟಿಂಗ್ ಸೆಟ್‌ಗೆ ಹೋಗುತ್ತಿದ್ದೆ. ಆದರೆ, ಸಂಚಿಕೆಗಳು ಕಳೆಯುತ್ತಾ, ನೀವು ನನ್ನನ್ನು ಒಪ್ಪುವುದಷ್ಟೇ ಅಲ್ಲದೆ, ಅಪ್ಪಿಕೊಂಡು ನಿಮ್ಮ ಮನಸ್ಸುಗಳಲ್ಲಿ ನನಗಾಗಿ ಒಂದು ಪುಟ್ಟ ಜಾಗವನ್ನು ಮಾಡಿಕೊಟ್ಟಿದ್ದೀರಿ. ಇದಕ್ಕೆ ನಾನು ಸದಾ ಚಿರಋಣಿ" ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ "ನನ್ನಿಂದ ಏನಾದರೂ ಸಣ್ಣ ಪುಟ್ಟ ತಪ್ಪುಗಳಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿ. ಹಾಗೂ ನಟನೆಯ ಈ ದಾರಿಯಲ್ಲಿ ನಾನು ಸಾಗುವ ದಾರಿ ಇನ್ನೂ ತುಂಬಾ ದೂರ ಇದೆ. ನಿಮ್ಮ ಮನೆ ಮಗನಂತೆ ದಯವಿಟ್ಟು ಕೈ ಹಿಡಿದು ಪ್ರೀತಿಯಿಂದ ನನ್ನನ್ನು ನಡೆಸಿ. Love you all. ಇಂತಿ ನಿಮ್ಮ ಕರ್ಣ (ಅಶ್ವಿನ್)" ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ನಟ ಅಶ್ವಿನ್.

ಇದಕ್ಕೆ ಖುಷಿಪಟ್ಟ ನೆಟ್ಟಿಗರು ಹಾಗೂ ಅಶ್ವಿನ್ ಅವರ ಫಾಲೋವರ್ಸ್ ತಮ್ಮ ಶುಭಾಶಯಗಳನ್ನು ಕೋರಿದ್ದಾರೆ. ಭಯಪಟ್ಟುಕೊಂಡೇ ಸೆಟ್ಟಿಗೆ ಹೋಗುತ್ತಿದ್ದ ನಟ ಅಶ್ವಿನ್ ಅವರು ಇಂದು ಕರ್ಣ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿರುವುದಷ್ಟೇ ಅಲ್ಲದೆ ಒಬ್ಬ ಒಳ್ಳೆ ನಟ ಎಂದು ಗುರುತಿಸಿಕೊಳ್ಳುತ್ತಿರುವುದು ವಿಶೇಷ.


Click it and Unblock the Notifications











