ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿ ಹಿರಿಹಿರಿ ಹಿಗ್ಗಿದ ಕಿರುತೆರೆ ನಟಿ ಅಂಕಿತಾ ಜಯರಾಮ್
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿ ಕಿರುತೆರೆ ನಟಿ ಅಂಕಿತಾ ಜಯರಾಮ್ ಇತ್ತೀಚೆಗೆ ಗಮನ ಸೆಳೆದಿದ್ದರು. ನಟನೆಯ ನಡುವೆಯೂ 97% ಅಂಕ ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದರು. ಆಕೆಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಇದೀಗ ಒಲಿಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿ ಅಂಕಿತಾ ಸಂಭ್ರಮಿಸಿದ್ದಾರೆ.
ಸುಮಧುರ ಗ್ರೂಪ್ ಬೆಂಗಳೂರಿನ ಮೊಟ್ಟಮೊದಲ ರೆಸಿಡೆನ್ಸಿಯಲ್ ಬ್ರಾಂಡೆಡ್ ಕ್ಲಬ್‌ಹೌಸ್ ಅನ್ನು ವೈಟ್‌ಫೀಲ್ಡ್‌ನ ಫೋಲಿಯಂನಲ್ಲಿ ಆರಂಭಿಸಿದೆ. ಇತ್ತೀಚೆಗೆ ಕ್ಲಬ್ ಹೌಸ್ ಉದ್ಘಾಟನೆ ಸಮಾರಂಭ ನಡೀತು. ಸೈನಾ ನೆಹ್ವಾಲ್ ಜೊತೆಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆ ಮತ್ತು ಸೌರವ್ ಘೋಸಲ್ ಸ್ಕ್ವಾಷ್‌ನ ಸಂಸ್ಥಾಪಕಿ ಸೌರವ್ ಘೋಸಲ್, ಭಾರತದ ಏಕೈಕ ಮಹಿಳಾ UFC ಹೋರಾಟಗಾರ್ತಿ ಹಾಗೂ UFC FIT ಯ ಬ್ರಾಂಡ್ ಪಾಲುದಾರ ಪೂಜಾ ತೋಮರ್ ಸೇರಿದಂತೆ ಭಾರತದ ಪ್ರಸಿದ್ಧ ಕ್ರೀಡಾ ಐಕಾನ್‌ಗಳು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಬಾಲನಟಿ ಅಂಕಿತಾ ಜಯರಾಮ್ ಕೂಡ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ್ದರು. ಬ್ಯಾಡ್ಮಿಂಟನ್ ಪ್ರೊಸ್ ಅಕಾಡೆಮಿ ಆಡಿಟೋರಿಯಂ ಅನ್ನು ಸೈನಾ ಉದ್ಘಾಟಿಸಿದರು. ಬಳಿಕ ಅಲ್ಲಿದ್ದವರ ಜೊತೆ ಕೆಲವೊತ್ತು ಬ್ಯಾಡ್ಮಿಂಟನ್ ಹಾಡಿದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ಸಖತ್ ವೈರಲ್ ಆಗುತ್ತಿದೆ.
"ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ವಿಶ್ವದ ನಂ.1 ಶ್ರೇಯಾಂಕ World No.1 ಆದ ಮೊದಲ ಭಾರತೀಯ ಮಹಿಳೆ, ರಾಜೀವ್ ಗಾಂಧಿ ಖೇಲ್ ರತ್ನ ಪದ್ಮಶ್ರೀ, ಪದ್ಮಭೂಷಣ, ಅರ್ಜುನಪ್ರಶಸ್ತಿ ವಿಜೇತ ಸೈನಾ ನೆಹ್ವಾಲ್ ಜೊತೆ ನಮ್ಮನೇ ಯುವರಾಣಿ ಅಂಕಿತಾ ಜಯರಾಮ್.. ಬೆಂಗಳೂರಿನಲ್ಲಿ ನಡೆದ ಕ್ಲಬ್ ಹೌಸ್ ಉದ್ಘಾಟನಾ ಸಮಾರಂಭದಲ್ಲಿ ಸೈನಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಮಾರಂಭಕ್ಕೆ ಅಂಕಿತಾಗೆ ಆಹ್ವಾನ ನೀಡಿದ ಪ್ರಾಯೋಜಕರಿಗೆ ತುಂಬು ಹೃದಯದ ಧನ್ಯವಾದಗಳು" ಎಂದು ಅಂಕಿತಾ ತಂದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚಿಕ್ಕಂದಿನಿಂದ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದ ಅಂಕಿತಾ ಮುಂದೆ ಅವರೊಟ್ಟಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗಿದ್ದ 'ಜನನಿ' ಎಂಬ ಧಾರಾವಾಹಿಯಲ್ಲಿ ಅಂಕಿತಾ ಮೊದಲು ನಟಿಸಿದ್ದರು. ಬಳಿಕ ಜೀ ಕನ್ನಡ ವಾಹಿನಿಯ 'ಭೂಮಿಗೆ ಬಂದ ಭಗವಂತ', ಕಲರ್ಸ್ ಕನ್ನಡ ವಾಹಿನಿಯ 'ಯಜಮಾನ', ಈಗ ಮತ್ತೆ ಜೀ ಕನ್ನಡದ 'ಕರ್ಣ' ಧಾರಾವಾಹಿಯಲ್ಲಿ ಆಕೆ ನಟಿಸುತ್ತಿದ್ದಾರೆ. ಸದ್ಯ ರೀನಾ ಪಾತ್ರದ ಮೂಲಕ ಮೋಡಿ ಮಾಡಿದ್ದಾರೆ.
ಕಿರುತೆರೆ ಧಾರಾವಾಹಿ ಮಾತ್ರವಲ್ಲ ಶ್ರೀಮುರಳಿ ನಟನೆಯ 'ಭರಾಟೆ' ಚಿತ್ರದಲ್ಲಿ ಅಂಕಿತಾಗೆ ಒಳ್ಳೆ ಅವಕಾಶ ಸಿಕ್ಕಿತ್ತು. ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ', ದರ್ಶನ್ ಅಭಿನಯದ 'ಕ್ರಾಂತಿ', ಶಿವಣ್ಣನ 'ವೇದ' ಸಿನಿಮಾ ಸೇರಿ 30ಕ್ಕೂ ಅಧಿಕ ಚಿತ್ರಗಳಲ್ಲಿ ಅಂಕಿತಾ ಮಿಂಚಿದ್ದಾರೆ. ಓದಿನ ಜೊತೆ ಜೊತೆಗೆ ನಟನೆಯನ್ನು ಮುಂದುವರೆಸುವುದಾಗಿ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದರು.
ಚಿಕ್ಕಂದಿನಿಂದ ಓದಿನಲ್ಲಿ ಮುಂದಿರುವ ಅಂಕಿತಾ ಎಸ್‌ಎಸ್‌ಎಲ್‌ಸಿಯಲ್ಲಿ 95% ಅಂಕ ಗಳಿಸಿದ್ದರು. ಪಿಯುಸಿ ಫಲಿತಾಂಶದ ಬಳಿಕ ಬಿಬಿಎ ಅಥವಾ ಬಿಸಿಎ ಡಿಗ್ರಿ ಓದಬೇಕು ಎಂದುಕೊಂಡಿದ್ದೇನೆ. ಮುಂದೆ ಯಾವುದಾದರೂ ಪರೀಕ್ಷೆ ಬರೆಯುವ ಆಲೋಚನೆಯಿದೆ" ಎಂದು ಕನಸನ್ನು ಬಿಚ್ಚಿಟ್ಟಿದ್ದರು.


Click it and Unblock the Notifications