9 ವರ್ಷಗಳ ಬಳಿಕ ಕಿರುತೆರೆಗೆ ಮರಳಿದ ನಟ ಕಾರ್ತಿಕ್ ಅತ್ತಾವರ್; ಯಾವುದು ಆ ಧಾರಾವಾಹಿ?
ವಿನೂತನ ಧಾರಾವಾಹಿಯ ಜೊತೆಗೆ ವಿಭಿನ್ನ ರೀತಿಯ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದೆ ಕಲರ್ಸ್ ಕನ್ನಡ ವಾಹಿನಿ. ಇದೀಗ ಹೊಚ್ಚ ಹೊಸ ಧಾರಾವಾಹಿ 'ಶ್ರೀಗೌರಿ' ಆರಂಭವಾಗಲಿದ್ದು ಅದರ ಪ್ರೋಮೋ ಕೂಡಾ ಈಗಾಗಲೇ ಬಿಡುಗಡೆಯಾಗಿದೆ.
ನಾಯಕಿಯಾಗಿ 'ಕಮಲಿ' ಧಾರಾವಾಹಿಯ ಖ್ಯಾತಿಯ ಅಮೂಲ್ಯ ಗೌಡ ನಟಿಸಲಿದ್ದಾರೆ. ಇನ್ನು ನಾಯಕ ಇರುವ ಪ್ರೋಮೋ ಕೂಡಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಅದರಲ್ಲಿ ಅಪ್ಪು ಪಾತ್ರದಲ್ಲಿ ನಟ ಕಾರ್ತಿಕ್ ಅತ್ತಾವರ್ ಕಾಣಿಸಿಕೊಂಡಿದ್ದಾರೆ.

ಅಂದ ಹಾಗೇ ಒಂಭತ್ತು ವರ್ಷಗಳ ಹಿಂದೆ ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಯಶೋಧೆ' ಧಾರಾವಾಹಿಯ ಮೂಲಕ ಕಾರ್ತಿಕ್ ಅತ್ತಾವರ್ ಕಿರುತೆರೆಗೆ ಕಾಲಿಟ್ಟಿದ್ದರು . ವಿನೋದ್ ವಿ ದೋಂಡಾಳೆ ಅವರ ನಿರ್ದೇಶನದ 'ಯಶೋಧೆ' ಧಾರಾವಾಹಿಯಲ್ಲಿ ಬ್ಯುಸಿನೆಸ್ ಮ್ಯಾನ್ ಆದಿತ್ಯನಾಗಿ ಕಾರ್ತಿಕ್ ಅತ್ತಾವರ್ ಕಾಣಿಸಿಕೊಂಡಿದ್ದರು .
ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ತಿಕ್ ಅತ್ತಾವರ್ ಬಣ್ಣದ ಲೋಕದ ಪಯಣ ಶುರುವಾಗಿದ್ದು ಕೋಸ್ಟಲ್‌ವುಡ್ ಮೂಲಕ. ತುಳುವಿನ 'ರಿಕ್ಷಾ ಡ್ರೈವರ್' ಸಿನಿಮಾದ ಮೂಲಕ ನಟನೆಗೆ ಕಾರ್ತಿಕ್ ಅತ್ತಾವರ್ ಪಾದಾರ್ಪಣೆ ಮಾಡಿದರು. ಆ ಸಿನಿಮಾ ಪ್ರತಿಷ್ಠಿತ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿಗೂ ಪಾತ್ರವಾಗಿತ್ತು.

ವಿನೋದ್ ವಿ ದೋಂಡಾಳೆ ತಮ್ಮ 'ಯಶೋಧೆ' ಧಾರಾವಾಹಿಗೆ ನಾಯಕನ ಪಾತ್ರಕ್ಕೆ ಹುಡುಕಾಟದಲ್ಲಿದ್ದರು. ಆಗ 'ರಿಕ್ಷಾ ಡ್ರೈವರ್' ಸಿನಿಮಾದಲ್ಲಿನ ಕಾರ್ತಿಕ್ ಅವರ ನಟನೆಯನ್ನು ನೋಡಿದ ವಿನೋದ್ ಕಾರ್ತಿಕ್‌ಗೆ ನಟಿಸುವ ಅವಕಾಶ ನೀಡಿದರು. ಅದು ಕೂಡಾ ಮುಖ್ಯ ಪಾತ್ರ. ಮೊದಲ ಧಾರಾವಾಹಿಯಲ್ಲಿಯೇ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಕಾರ್ತಿಕ್ ಅತ್ತಾವರ್ ಕೊಟ್ಟಂತಹ ಪಾತ್ರಕ್ಕೆ ಜೀವ ತುಂಬುವಲ್ಲಿಯೂ ಯಶಸ್ವಿಯಾಗಿದ್ದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2'ರ ಸ್ಪರ್ಧಿಯಾಗಿದ್ದ ಕಾರ್ತಿಕ್ ಅತ್ತಾವರ್ ನೃತ್ಯದ ಮೂಲಕ ತೀರ್ಪುಗಾರರ ಮೆಚ್ಚುಗೆಗೂ ಪಾತ್ರರಾಗಿದ್ದರು. ಮುಂದೆ ಕನ್ನಡ ಸಿನಿಮಾ 'ಅನುಕ್ತ'ದಲ್ಲಿ ನಾಯಕನಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾರ್ತಿಕ್ ಕಾಲಿಟ್ಟರು. ಅದರಲ್ಲಿ ತನಿಖಾಧಿಕಾರಿಯಾಗಿ ಕಾರ್ತಿಕ್ ನಟಿಸಿದ್ದರು. ಸಿನಿಮಾ ಹೇಳುವಂಥ ಯಶಸ್ಸು ಏನು ಗಿಟ್ಟಿಸಿಕೊಳ್ಳದಿದ್ದರೂ ಕಾರ್ತಿಕ್ ಅತ್ತಾವರ್ ಅವರನ್ನು ಸಿನಿಪ್ರಿಯರು ಗುರುತಿಸಿದ್ದರು.
ಹಿಂದಿಯ 'ಅನಮೌಲ್' ಎನ್ನುವ ಕಿರುಚಿತ್ರವನ್ನು ಕಾರ್ತಿಕ್ ನಿರ್ದೇಶಿಸಿದ್ದು ಅದು ಹದಿನೈದು ನಿಮಿಷಗಳ ಸಿನಿಮಾ. ವೃದ್ಧಾಶ್ರಮಕ್ಕೆ ಸಂಬಂಧಿಸಿದ ಕಥೆಯನ್ನು ಹೊಂದಿದ್ದ ಆ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಮುಂದೆ ನಟನೆಯಿಂದ ದೂರವಿದ್ದ ಕಾರ್ತಿಕ್ 'ಶ್ರೀಗೌರಿ' ಮೂಲಕ ಕಿರುತೆರೆಗೆ ಮರಳಿದ್ದು ಮತ್ತೊಮ್ಮೆ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯಲ್ಲಿದ್ದಾರೆ. ಧಾರಾವಾಹಿಯ ಪ್ರೊಮೋ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸೀರಿಯಲ್ ಪ್ರಿಯರು ಧಾರಾವಾಹಿ ಪ್ರಸಾರವಾಗುವುದಕ್ಕೆ ಎದುರು ನೋಡುತ್ತಿದ್ದಾರೆ.


Click it and Unblock the Notifications











