Karthik Samaga: ಹೀಗಿದೆ ನೋಡಿ ಕಿರುತೆರೆಯ 'ಭಗವಂತನ' ನಟನಾ ಪಯಣ
ವೇದಮಂತ್ರ ಪಠಣೆ ಮಾಡಿಕೊಂಡು ಓದಿಗೂ ಗಮನ ಕೊಟ್ಟುಕೊಂಡಿದ್ದ ಪೋರ ಕಾರ್ತಿಕ್ ಸಾಮಗ ಅವರಿಗೆ ಅದ್ಯಾವಾಗ ನಟನೆಯ ಬಗ್ಗೆ ಆಸಕ್ತಿ ಬಂತೋ ತಿಳಿಯಲೇ ಇಲ್ಲ.
ಉಡುಪಿಯ ರಂಗಭೂಮಿಗೆ ಸೇರಿಕೊಂಡು, ಸಂಪ್ರದಾಯಸ್ಥ ತಂದೆ ತಾಯಿಯ ಮಾತಿಗೂ ಅಸ್ತು ಎಂದು, ಓದು ಹಾಗೂ ನಟನೆ ಎರಡಕ್ಕೂ ಗಮನ ಕೊಟ್ಟ ಕಾರ್ತಿಕ್ ಸಾಮಗ ನಟನೆಯನ್ನೇ ತಮ್ಮ ಕ್ಷೇತ್ರವಾಗಿ ಮಾಡಿಕೊಂಡಿದ್ದಾರೆ.
ಉಡುಪಿ ರಂಗಭೂಮಿಯಲ್ಲಿ 25ಕ್ಕೂ ಹೆಚ್ಚು ನಾಟಕಗಳನ್ನು ಮಾಡಿಕೊಂಡು, ಕ್ರಮೇಣ ಧಾರಾವಾಹಿಯತ್ತ ಮುಖ ಮಾಡಿದ ನಟ ಕಾರ್ತಿಕ್ ಸಾಮಗ ನೇರವಾಗಿ ನಟನೆಗೆ ಧುಮುಕದೆ ಟೆಕ್ನಿಕಲ್ ವರ್ಕ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 'ಅಮೃತವರ್ಷಿಣಿ', 'ಪ್ರಿಯದರ್ಶಿನಿ' ಇತ್ಯಾದಿ ಧಾರಾವಾಹಿಗಳಲ್ಲಿ ಬ್ಯಾಕ್ ಸ್ಟೇಜ್ ನಲ್ಲಿ ಕೆಲಸ ಮಾಡುತ್ತ ಅನುಭವ ಪಡೆದರು.
ಚಂದ್ರ, ಇಂದ್ರ ಆಗಿ ಮೋಡಿ
'ಶ್ರೀ ಗುರು ರಾಘವೇಂದ್ರ ವೈಭವ' ಎಂಬ ಧಾರಾವಾಹಿಯಲ್ಲಿ ಚಿಕ್ಕ ಪಾತ್ರ ಮಾಡುವ ಮೂಲಕ ಕಿರುತೆರೆ ನಟನೆಗೆ ಕಾಲಿಟ್ಟರು ಕಾರ್ತಿಕ್ ಸಾಮಗ. ಅವರ ಅಭಿನಯ ಮೆಚ್ಚಿದ ಅರಗಿಣಿ ಧಾರಾವಾಹಿಯ ನಿರ್ದೇಶಕರು ಅವರನ್ನೇ 'ಅರಗಣಿ' ಧಾರಾವಾಹಿಯಲ್ಲಿ ವಿಲನ್ ಪಾತ್ರಕ್ಕೆ ಆಯ್ಕೆ ಮಾಡಿದರು. 'ಅರಗಿಣಿ' ಧಾರಾವಾಹಿ ನಂತರ 'ಅಕ್ಕ' ಧಾರವಾಹಿಯಲ್ಲಿ ಆಕಾಶ್ ಪಾತ್ರ ಮಾಡಿ ಸೈ ಎನಿಸಿಕೊಂಡರು ನಟ ಕಾರ್ತಿಕ್ ಸಾಮಗ.

'ಅಕ್ಕ' ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಚಂದ್ರನ ಪಾತ್ರ ಮಾಡಿ ಅಭಿಮಾನಿಗಳ ಪ್ರೀತಿ ಗೆದ್ದ ಇವರು, ನಂತರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಶನಿ' ಧಾರಾವಾಹಿಯಲ್ಲಿ ಇಂದ್ರನ ಪಾತ್ರ ಮಾಡಿ ಪ್ರೇಕ್ಷಕರಿಗೆ ತಮ್ಮ ಅದ್ಭುತ ಅಭಿನಯದ ಪರಿಚಯ ಮಾಡಿಕೊಟ್ಟರು.
'ಭಗವಂತ'ನಾಗಿ ಕಿರುತೆರೆಗೆ ಎಂಟ್ರಿ
ಇಷ್ಟೇ ಅಲ್ಲದೆ 'ಡೈನಾಮಿಕ್', 'ಮೊದಲ ಮಳೆ', 'ಹೇ ರಾಮ' ಇತ್ಯಾದಿ ಸಿನಿಮಾಗಳಲ್ಲಿ ಲೀಡ್ ಪಾತ್ರ, ಸೆಕೆಂಡ್ ಲೀಡ್ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಶ್ರೀನಗರ ಕಿಟ್ಟಿ ಇತ್ಯಾದಿ ಮಹಾನ್ ನಟರೊಂದಿಗೆ ಅಭಿನಯ ಮಾಡಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಒಟ್ಟಿನಲ್ಲಿ ತಮ್ಮ ಅದ್ಭುತ ಅಭಿನಯದಿಂದ, ಡೆಡಿಕೇಶನ್ ಹಾಗೂ ಕಲಿಯುವ ಹಂಬಲದಿಂದ ನಟನೆಯನ್ನೇ ತಮ್ಮ ಕರ್ಮಭೂಮಿ ಮಾಡಿಕೊಂಡಿರುವ ನಟ ಕಾರ್ತಿಕ್ ಸಾಮಗ ಅವರು ಈಗಾಗಲೇ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಡಬ್ ಮಾಡಿದ್ದಾರೆ.

ನಟನೆಯ ಜೊತೆಗೆ ಭರತನಾಟ್ಯ ಕಲಾವಿದರೂ ಆಗಿರುವ ಕಾರ್ತಿಕ್ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಭೂಮಿಗೆ ಬಂದ ಭಗವಂತ'ದಲ್ಲಿ ಭಗವಂತನಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾರ್ತಿಕ್ ಮರಳಿದ್ದು ವೀಕ್ಷಕರ ಮನ ಸೆಳೆಯುತ್ತಾರಾ ಎಂದು ಕಾದುನೋಡಬೇಕಾಗಿದೆ.


Click it and Unblock the Notifications











