ಈ ಕ್ರಿಕೆಟ್ ಆಟಗಾರ ಕಿರುತೆರೆ, ಸಿನಿಮಾದಲ್ಲೂ ಮಿಂಚಿಂಗ್; ಯಾರೀ ಪ್ರತಿಭೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಗಳ ಪೈಕಿ 'ಬೃಂದಾವನ'ವೂ ಒಂದು. 'ಬೃಂದಾವನ' ಧಾರಾವಾಹಿಯಲ್ಲಿ ನಾಯಕ ಆಕಾಶ್ ಸ್ನೇಹಿತ ಚಿಕ್ಕೋಡಿ ಆಗಿ ನಟಿಸುತ್ತಿರುವ ಹುಡುಗನ ಹೆಸರು ಕಾರ್ತಿಕ್ ವೈಭವ್. ಪೋಷಕ ಪಾತ್ರವಾದರೂ ಅತ್ಯದ್ಭುತವಾಗಿ ಅಭಿನಯಿಸುತ್ತಿರುವ ಕಾರ್ತಿಕ್ ವೈಭವ್ ರಂಗಭೂಮಿ ಕಲಾವಿದರೂ ಹೌದು.
ಸುಮಾರು ನೂರಕ್ಕೂ ಹೆಚ್ಚು ಬೀದಿ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಾರ್ತಿಕ್ ವೈಭವ್ ಅವರ ಕಿರುತೆರೆ ಪಯಣಕ್ಕೆ ಮುನ್ನುಡಿ ಬರೆದುದು 'ಮತ್ತೆ ಮಾಯಾಮೃಗ' ಧಾರಾವಾಹಿ. ಸಿರಿಕನ್ನಡ ವಾಹಿನಿಯಲ್ಲಿ ಟಿ.ಎನ್.ಸೀತಾರಾಮ್ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಸಚ್ಚಿ ಆಗಿ ಕಾಣಿಸಿಕೊಂಡರು. ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದ ಕಾರ್ತಿಕ್ ಅವರಿಗೆ ಸಚಿನ್ ಪಾತ್ರ ಜನಪ್ರಿಯತೆ ನೀಡಿತ್ತು.

ತದ ನಂತರ 'ಯಡಿಯೂರು ಶ್ರೀಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ ಕಾರ್ತಿಕ್ ವೈಭವ್ ಇದೀಗ ಚಿಕ್ಕೋಡಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. "ಬೃಂದಾವನ ಧಾರಾವಾಹಿಯಲ್ಲಿ ನಾನು ಚಿಕ್ಕೋಡಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಅಂದ ಹೀಗೆ ಇದು ಪೋಷಕ ಪಾತ್ರವಾದರೂ ಅದಕ್ಕೆ ನಾಯಕನ ಪಾತ್ರದಷ್ಟೇ ಪ್ರಾಮುಖ್ಯತೆ ಇದೆ. ವೀಕ್ಷಕರು ಕೂಡಾ ಚಿಕ್ಕೋಡಿ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ನಾಯಕನಾಗಿಯೂ ನನಗೆ ಕಾಣಿಸಬಹುದಿತ್ತು ಎಂಬ ಕಮೆಂಟ್ ಗಳು ಕೂಡಾ ಕೇಳಿ ಬಂದಿತ್ತು" ಎಂದು ಕಾರ್ತಿಕ್ ವೈಭವ್ ಅವರು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ.
"ನನಗೆ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ನೋಡುವ ಹುಚ್ಚು ಇತ್ತು. ಸಾಕಷ್ಟು ಸಿನಿಮಾಗಳನ್ನು ನೋಡುತ್ತಿದ್ದೆ. ಆಕಸ್ಮಿಕವಾಗಿ ಕೋಮಲ್ ಅಭಿನಯದ ಪ್ಯಾರ್‌ಗೆ ಆಗ್ಬಿಟೈತೆ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು. ಆಗ ನಾನು ಹತ್ತನೇ ಕ್ಲಾಸ್‌ನಲ್ಲಿದ್ದೆ. ನಂತರ ನಾನು ನಟನಾಗಬೇಕು ಎಂಬುದು ನನ್ನ ಸಬ್ ಕಾನ್ಶಿಯಸ್ ಡಿಸಿಷನ್. ನಟನಾಗಬೇಕು ಎಂಬ ಕಾರಣದಿಂದ ಸೆಕೆಂಡ್ ಪಿಯುಸಿ ಮುಗಿದ ಕೂಡಲೇ ನಾನು ಆ್ಯಕ್ಟಿಂಗ್ ಸ್ಕೂಲ್‌ಗೆ ಸೇರಿದೆ. ಅಲ್ಲಿ ಪಳಗಿದ ನಂತರ ರಂಗಭೂಮಿಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡೆ " ಎಂದು ತಾವು ನಟನಾ ಪಯಣದ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಕಾರ್ತಿಕ್ ವೈಭವ್.
ಇನ್ನು ಕಾರ್ತಿಕ್ ಅವರು ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದಾರೆ. 'ನವೋದಯ ಡೇಸ್' ಸಿನಿಮಾದಲ್ಲಿ ಎರಡನೇ ನಾಯಕನಾಗಿ ನಟಿಸಿದ ಇವರು ಮುಂದೆ 'ಕ್ಷಿಪ್ರ' ಹಾಗೂ 'ಸ್ಟೇಟ್ ಮೆಂಟ್ 8/11'ನಲ್ಲಿ ಎರಡನೇ ನಾಯಕನಾಗಿ ನಟಿಸಿದರು. ತದ ನಂತರ 'ತಾರಕಾಸುರ', 'ನಾನು ನನ್ನ ಜಾನು', ಸಿನಿಮಾಗಳಲ್ಲಿ ಟ್ರ್ಯಾಕ್ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಕಾರ್ತಿಕ್ ವೈಭವ್ 'ಪ್ಯಾರ್ ಗೆ ಆಗ್ಬಿಟೈತೆ', 'ಸುರಾರಿ', 'ಮಿಸ್ಟ್ರಿ' ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ.

'ಸ್ವೀಚ್_ಕೇಸ್_ಎನ್' ಸಿನಿಮಾದಲ್ಲಿ ಖಳನಾಯಕನಾಗಿ ಕಾರ್ತಿಕ್ ಅಭಿನಯಿಸಿದ್ದು ಅದು ರಿಲೀಸ್ ಆಗಬೇಕಿದೆ. ಇದರ ಜೊತೆಗೆ ತೆಲುಗಿನ 'ಲವ್ ರೆಡ್ಡಿ' ಸಿನಿಮಾದಲ್ಲಿ ಟ್ರ್ಯಾಕ್ ರೋಲ್‌ನಲ್ಲೊ ಕಾರ್ತಿಕ್ ನಟಿಸಿದ್ದು ಅದು ಬಿಡುಗಡೆ ಕಾಣಬೇಕಿದೆ. ನಟನೆಯ ಹೊರತಾಗಿ ಕಾರ್ತಿಕ್ ವೈಭವ್ ಅವರು ಡಬ್ಬಿಂಗ್ ಆರ್ಟಿಸ್ಟ್ ಎನ್ನುವ ಸಂಗತಿ ಹಲವರಿಗೆ ತಿಳಿದಿರಲಿಕ್ಕಿಲ್ಲ. 'ಸಾಹೋ', 'ಮಿರ್ಜಾಪುರ್', 'ಗನ್ಸ್ ಆ್ಯಂಡ್ ಗುಲಾಬ್ಸ್', 'ಆರ್ಚಿಸ್', 'ಕ್ಯಾಂಡಿ ಕೇನ್ ಲೇನ್', 'ಐ ಪಿ ಮ್ಯಾನ್' ಎನ್ನುವ ಸಿನಿಮಾಗಳಿಗೆ ಕಾರ್ತಿಕ್ ವೈಭವ್ ಡಬ್ ಮಾಡಿದ್ದಾರೆ.
'ಬ್ಯಾರಿಸ್ಟರ್ ಬಾಬು' ಎನ್ನುವ ಧಾರಾವಾಹಿಯು ಕನ್ನಡಕ್ಕೆ ಡಬ್ ಆಗಿ 'ಚಿಕ್ಕೆ ಜಮಾನಿ' ಹೆಸರಿನಲ್ಲಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಅದರಲ್ಲಿ ನಾಯಕ ಅನಿರುದ್ಧ್ ಗೆ ಧ್ವನಿ ನೀಡಿದ್ದು ಕೂಡಾ ಇದೇ ಕಾರ್ತಿಕ್ ವೈಭವ್. ಮಾತ್ರವಲ್ಲದೇ ಆ ಸಮಯದಲ್ಲಿ ತಮ್ಮ ಧ್ವನಿಯ ಮೂಲಕ ಕಾರ್ತಿಕ್ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.
ಮುಖ್ಯವಾದ ವಿಚಾರವೆಂದರೆ ಕಾರ್ತಿಕ್ ವೈಭವ್ ಅವರು ಅದ್ಭುತ ಕ್ರಿಕೆಟ್ ಆಟಗಾರ ಹೌದು. ಇತ್ತೀಚೆಗಷ್ಟೇ ನಡೆದ ಕೆಸಿಸಿ ಟೂರ್ನಮೆಂಟ್‌ನಲ್ಲಿ ವಿನ್ ಆದ ಗೋಲ್ಡನ್ ಸ್ಡಾರ್ ಗಣೇಶ್ ಅವರ ಗಂಗಾ ವಾರಿಯರ್ಸ್ ಟೀಮ್‌ನಲ್ಲಿ ಕಾರ್ತಿಕ್ ವೈಭವ್ ಇದ್ದರು. ಇದರ ಜೊತೆಗೆ ಉಳಿದ ಟೂರ್ನಮೆಂಟ್‌ಗಳಾದ ಡಾ. ರಾಜ್ ಕಪ್, ಕೆಸಿಸಿ, ಟೆಲಿವಿಷನ್ ಪ್ರಿಮಿಯರ್ ಲೀಗ್ ಹಾಗೂ ಡಬ್ಬಿಂಗ್ ಪ್ರಿಮಿಯರ್ ಲೀಗ್‌ನಲ್ಲಿ ಇವರು ಭಾಗವಹಿಸಿದ್ದಾರೆ.


Click it and Unblock the Notifications











