Akshatha Deshpande: ರಿಯಲ್‌ಲೈಫ್ ಅನುಭವ ನೀಡುತ್ತಿರುವ ಪಾತ್ರಕ್ಕೆ ನಟಿ ಫಿದಾ.. ಹೊಸ 'ಕಥೆಯೊಂದು ಶುರುವಾಗಿದೆ'
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಾಯಕಿ ಕೃತಿಯಾಗಿ ಅಭಿನಯಿಸುತ್ತಿರುವ ಅಕ್ಷತಾ ದೇಶಪಾಂಡೆ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಅಂಜಲಿಯಾಗಿ ನಟಿಸಿದ್ದ ಅಕ್ಷತಾ ಸದ್ಯ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯ ಕೃತಿಯಾಗಿ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.
'ಕಥೆಯೊಂದು ಶುರುವಾಗಿದೆ' ಧಾರಾವಾಹಿಯ ಕೃತಿಯ ಪಾತ್ರ ಹಾಗೂ ಅಕ್ಷತಾ ಅವರ ನಿಜ ಜೀವನಕ್ಕೆ ಬಹಳಷ್ಟು ಕನೆಕ್ಷನ್ ಇದೆ. ಧಾರಾವಾಹಿಯಲ್ಲಿ ಕೃತಿಗೆ ಇಬ್ಬರು ಅಕ್ಕ ತಂಗಿಯರಿದ್ದಾರೆ. ಅಂತೆಯೇ ಅಕ್ಷತಾ ಅವರ ನಿಜ ಜೀವನದಲ್ಲಿ ಒಬ್ಬಳು ಅಕ್ಕ ಇದ್ದಾಳೆ. ಹೇಗೆ ಧಾರಾವಾಹಿಯಲ್ಲಿ ಈ ಸಹೋದರಿಯರು ಜವಾಬ್ದಾರಿಗಳನ್ನು ಹಂಚಿಕೊಂಡು ಜೀವನ ನಡೆಸುತ್ತಾರೋ ಹಾಗೆಯೇ ಅಕ್ಷತಾ ಮನೆಯಲ್ಲಿ ಆಕೆ ಹಾಗೂ ಆಕೆಯ ಅಕ್ಕ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ. ಮನೆಯಲ್ಲಿ ಆಕೆಗೂ ಆಕೆಯ ಅಕ್ಕನಿಗೂ ಬಹಳ ಒಳ್ಳೆಯ ಬಾಂಧವ್ಯವಿದೆ.

ಬೆಂಗಾಲಿ ಧಾರಾವಾಹಿ ನೋಡಿದ್ದರು ಕೃತಿ
ಬೆಂಗಾಲಿ ಧಾರಾವಾಹಿ ಒಂದರ ರೀಮೇಕ್ ಕನ್ನಡದ 'ಕಥೆಯೊಂದು ಶುರುವಾಗಿದೆ'. ಧಾರಾವಾಹಿಯಲ್ಲಿ ಈ ಪಾತ್ರ ಸಿಕ್ಕಾಗ ನಟಿ ಅಕ್ಷತಾ ಅವರು ಬೆಂಗಾಲಿ ಧಾರಾವಾಹಿ ಎಪಿಸೋಡ್‌ಗಳನ್ನು ನೋಡಿದ್ದರಂತೆ. ತಮ್ಮ ಪಾತ್ರ ಅದರ ನಡೆ ನುಡಿ ಇತ್ಯಾದಿಗಳನ್ನು ತಿಳಿದುಕೊಳ್ಳಲು ಯಾಕೆ ಸತತವಾಗಿ ಬಹಳಷ್ಟು ಎಪಿಸೋಡ್‌ಗಳನ್ನು ನೋಡಿ ಪಾತ್ರ ಪ್ರವೇಶ ಮಾಡಿದರಂತೆ.
ಇದು ರೀಮೇಕ್ ಧಾರಾವಾಹಿ ಆದ್ದರಿಂದ ಅಕ್ಷತಾ ಬೆಂಗಾಲಿ ಧಾರಾವಾಹಿಯನ್ನು ರೆಫರ್ ಮಾಡಿದ್ದರು. ಮುಖ್ಯವಾಗಿ ಅಕ್ಷತಾ ಆಕೆಯ ಪಾತ್ರವನ್ನು ಹೆಚ್ಚು ಗಮನ ಕೊಟ್ಟು ನೋಡಿದರು. ಹಾಗಾಗಿ ಈಗಂತೂ ಕೃತಿ ಮುಂದೆ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ? ಯಾವ ರೀತಿ ಸ್ಪಂದಿಸುತ್ತಾಳೆ ಎಂಬುದನ್ನು ಮೊದಲೇ ಹೇಳುವಷ್ಟು ಈ ಪಾತ್ರ ಕರಗತವಾಗಿದೆ ಎಂಬುದು ಅಕ್ಷತಾ ಅವರ ಅಂಬೋಣ.

ಜವಾಬ್ದಾರಿ ಎಂಬುದು ತಂದೆ ತಾಯಿ ಹೇಳಿಕೊಟ್ಟ ಪಾಠ
ಇನ್ನು ಪಾತ್ರ ಹಾಗೂ ನಿಜ ಜೀವನದ ಸಾಮ್ಯತೆ ಬಗ್ಗೆ ಮಾತನಾಡಿದ ಅವರು 'ನಾನು ಮೊದಲೇ ಹೇಳಿದ ಹಾಗೆ ನನಗೆ ಒಬ್ಬ ಅಕ್ಕ ಇದ್ದಾಳೆ. ನಾವಿಬ್ಬರೂ ಒಂದೊಳ್ಳೆಯ ಬಾಂಧವ್ಯವನ್ನು ಹಂಚಿಕೊಳ್ಳುತ್ತೇವೆ. ನನಗೆ ಆಕೆ ಎರಡನೇ ತಾಯಿ ಇದ್ದಂತೆ. ಜವಾಬ್ದಾರಿಗಳನ್ನು ಇಬ್ಬರು ಹಂಚಿಕೊಂಡು ಜೀವನ ಮುನ್ನಡೆಸುತ್ತಿದ್ದೇವೆ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದೇ ನಮ್ಮ ಆದ್ಯ ಗುರಿ. ನಾನು ದುಡಿಯಲು ಆರಂಭ ಮಾಡಿದ್ದಾಗಿಂದಲೂ ನನ್ನ ತಂದೆಯ ಬಳಿ ಒಂದೇ ಒಂದು ರೂಪಾಯಿಯನ್ನು ಕೇಳಿಲ್ಲ. ಹೀಗೆ ಜವಾಬ್ದಾರಿಯುತವಾಗಿ ನಮ್ಮ ನಮ್ಮ ಕೆಲಸವನ್ನು ಸರಿಯಾಗಿ ನಡೆಸಿಕೊಂಡು ಹೋಗುವುದನ್ನೇ ನಮ್ಮ ತಂದೆ ತಾಯಿ ನಮಗೆ ಹೇಳಿ ಕೊಟ್ಟಿರುವ ಪಾಠ" ಎಂದಿದ್ದಾರೆ.
"ಸದ್ಯಕ್ಕಂತೂ ಈ ಕೃತಿ ಪಾತ್ರವನ್ನು ನಾನು ಪೂರ್ತಿಯಾಗಿ ಜೀವಿಸುತ್ತಿದ್ದೇನೆ. ನನಗೆ ಇದು ಬಹಳ ಇಷ್ಟವಾದ ಪಾತ್ರ. ಪ್ರೇಕ್ಷಕರು ನನ್ನನ್ನು ಈ ಪಾತ್ರದಲ್ಲಿ ಬಹಳಷ್ಟು ಇಷ್ಟಪಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಎಂದಿಗೂ ಪಾತ್ರಕ್ಕೆ ಸರಿಯಾದ ನ್ಯಾಯ ಒದಗಿಸುವುದೇ ನನ್ನ ಮೊದಲ ಗುರಿಯಾಗಿರುತ್ತದೆ" ಎಂದಿದ್ದಾರೆ.


Click it and Unblock the Notifications











