ಕಥೆಯೊಂದು ಶುರುವಾಗಿದೆ: ಗಂಡನಿಗಾಗಿ ಅತ್ತೆಗೆ ಸವಾಲು ಹಾಕಿದ ಕೃತಿ..!
ಯುವರಾಜ್ ಬಹದ್ದೂರ್ ಇತ್ತಿಚೆಗೆ ಸಿಕ್ಕಾಪಟ್ಟೆ ಬದಲಾಗುತ್ತಿದ್ದಾರೆ. ಕೃತಿಯನ್ನು ಕಂಡರೆ ನಿಗಿ ನಿಗಿ ಕೆಂಡಕಾರುತ್ತಿದ್ದ ಯುವರಾಜ್, ಈಗ ಕಂಪ್ಲೀಟ್ ಸಾಫ್ಟ್ ಆಗಿ ಬಿಟ್ಟಿದ್ದಾನೆ. ಕೃತಿಯನ್ನು ಕಾಳಜಿ ಮಾಡುತ್ತಾನೆ, ಕೃತಿಯ ಮೇಲೆ ಪ್ರೀತಿ ತೋರುತ್ತಾನೆ, ಕೃತಿಯನ್ನು ಹೆಂಡತಿಯಂತೆ ನೋಡಿಕೊಳ್ಳುತ್ತಾನೆ. ಇದೆಲ್ಲ ಮನೆಯವರಿಗೆ ಖುಷಿ ತಂದಿದೆಯಾದರೂ, ಒಂಥರ ಶಾಕ್ ಕೂಡ ಆಗುತ್ತಿದೆ.
ಕೃತಿಯೇ ಮೋಸ ಮಾಡಿದ್ದಾಳೆ. ಕೃತಿಯ ಮನೆಯವರು ಮೋಸ ಮಾಡಿದ್ದಾರೆ ಎಂದೇ ವಾದಿಸುವ ಯುವ, ಅವರ ಮನೆಯವರ್ಯಾರು ನಮ್ಮ ಮನೆಯ ಬಾಗಿಲಿಗೆ ಹೆಜ್ಜೆ ಇಡುವುದು ಬೇಡ ಎಂದೇ ಷರತ್ತು ಹಾಕಿದ್ದಾನೆ. ಆದ್ರೆ ಕೃತಿಯ ತವರು ಮನೆಗೆ ಹೆಂಡತಿಯನ್ನು ಕರೆದುಕೊಂಡು ಹೊರಟಿದ್ದಾನೆ. ಇದು ನಾಟಕವೇ ಆದರೂ ಯಾವ ಕಾರಣಕ್ಕೆ ಎಂಬುದು ತಿಳಿಯಬೇಕಿದೆ.

ಶಿವರಾತ್ರಿಯಿಂದ ಹೊಸ ಬದುಕು..!
ಯುವ ಮತ್ತು ಕೃತಿಯ ಬಾಳಲ್ಲಿ ಶಿವರಾತ್ರಿಯಿಂದ ಶಿವನ ಕೃಪೆ ದೊರೆತಂತೆ ಕಾಣುತ್ತಿದೆ. ಸದಾ ಕುತ್ತಾಡುತ್ತಿದ್ದ ಜೋಡಿ ಈಗ ಪ್ರೇಮ ಪಕ್ಷಿಗಳಂತೆ ಆಗಿದ್ದಾರೆ. ಯುವ, ಕೃತಿಯನ್ನು ಕಾಳಜಿ ಮಾಡುವುದೇನು, ದೇವಸ್ಥಾನದಲ್ಲಿ ಪೂಜೆ ಮಾಡುವುದೇನು, ಸುಸಗಯಾದ ಹೆಂಡತಿಯನ್ನು ಮನೆಗೆ ಕರೆದುಕೊಂಡು ಬಂದು ಹಾರೈಕೆ ಮಾಡುವುದೆಂದರೆ ಏನು. ಇದೆಲ್ಲವನ್ನು ಕಂಡು ಬಹದ್ದೂರ್ ಮನೆಯ ಮಂದಿ ಫುಲ್ ಖುಷಿಯಾಗಿದ್ದಾರೆ. ನಮ್ಮ ಯುವ ಬದಲಾದನೆಂದು ಸಂತಸ ಪಡುತ್ತಿದ್ದಾರೆ.

ಕೃತಿ ಜೊತೆ ಅತ್ತೆ ಮನೆಗೆ ಹೊರಟ ಯುವ
ಮದುವೆಯಾದ ಮೇಲೆ ಅತ್ತೆ ಮನೆಗೆ ಯುವ ಹೋಗಿಲ್ಲ. ತಾಯಿ ಮನೆಗೆ ಕೃತಿ ಹೋಗುವುದಕ್ಕೂ ಬಿಟ್ಟಿಲ್ಲ. ಅವನ ಮನಸ್ಸಲ್ಲಿ ಇರುವುದೇ ಇಷ್ಟು, ಕೃತಿ ಹೇಳಿದ್ದೆಲ್ಲವನ್ನು ನಂಬುವುದಕ್ಕೆ ಯುವನಿಂದ ಸಾಧ್ಯವಿಲ್ಲ. ಹಾಗಂತ ವರ್ಣಿಕಾ ಸಿಗದ ಹೊರತು ಸತ್ಯ ಏನೆಂಬುದು ತಿಳಿಯಲು ಆಗುವುದಿಲ್ಲ. ಅದಕ್ಕಾಗಿಯೇ ಬದಲಾದವನಂತೆ ನಾಟಕವಾಡುತ್ತಿದ್ದಾನೆ. ಈಗ ಶಾಸ್ತ್ರದ ನೆಪದಲ್ಲಿ ಕೃತಿಯ ತವರು ಮನೆಗೆ ಹೋಗುವುದಕ್ಕೂ ಸಿದ್ಧವಾಗಿದ್ದಾನೆ. ಈ ವಿಚಾರ ಕೃತಿಗೆ ಇನ್ನಿಲ್ಲದ ಸಂತಸವನ್ನು ತಂದಿದೆ. ಪುಷ್ಪಾಗೂ ಈ ವಿಚಾರ ಸಂತಸ ತರಲಿದೆ. ಯಾಕಂದ್ರೆ, ಪುಷ್ಪ ಏನೇ ತಪ್ಪು ಮಾಡಿದ್ದರು ಅದು ತನ್ನ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು. ಆದರೆ ಕೃತಿಯ ಸ್ಥಿತಿ ಹೀಗಾಯಿತಲ್ಲ ಎಂದು ನೋವು ಪಡುತ್ತಿದ್ದ ಪುಷ್ಪಾಗೆ ಅಳಿಯ ಮಗಳು ಮನೆಗೆ ಬಂದರೆ ಅದಕ್ಕಿಂತ ಮತ್ತೊಂದು ಖುಷಿಯಿಲ್ಲ.

ಯುವನ ತಾಯಿಗೆ ಇಷ್ಟವೇ ಇಲ್ಲದ ಕೆಲಸ..!
ಮಗನ ಬದಲಾವಣೆ ಕಂಡು ಶಾಂತಲಾ ಕಂಗಾಲಾಗಿದ್ದಾಳೆ. ಮಗ ಹೆಂಡತಿಯ ಪಾಲಾಗುತ್ತಿದ್ದಾನೆ ಎಂದು ದುಃಖ ಪಡುತ್ತಿದ್ದಾಳೆ. ಕೃತಿಯೇ ನಾಟಕ ಮಾಡುತ್ತಿದ್ದಾಳೆ. ಮಗನನ್ನು ಬದಲಾಯಿಸುತ್ತಿದ್ದಾಳೆ ಎಂಬ ಕೋಪ ಶಾಂತಲಾ ಮನಸ್ಸಲ್ಲಿ ಹುಟ್ಟಿಕೊಂಡಿದೆ. ಅದಕ್ಕೆ ಈಗ ಕೃತಿ ಬಳಿಯಲ್ಲಿ ಬಂದು, ನನ್ನ ಮಗನನ್ನು ನಿನ್ನ ತವರು ಮನೆಗೆ ಕರೆದುಕೊಂಡು ಹೋಗಬೇಡ ಎಂದು ತಾಕೀತು ಮಾಡಿದ್ದಾಳೆ.

ಅತ್ತೆಯ ಮಾತು ಮೀರುತ್ತಾಳಾ..?
ಕೃತಿಗೆ ಸಂಬಂಧಗಳಿಗೆ ಬೆಲೆ ಕೊಡುವುದು ಗೊತ್ತು, ಅವಮಾನ ಮಾಡಿದಾಗ ತಿರುಗಿಸಿ ಉತ್ತರ ನೀಡುವುದು ಗೊತ್ತು. ಅದರಂತೆ ಈಗ ಅತ್ತೆ ಶಾಂತಲಾ ಬಂದು ಏನೇನೋ ಹೇಳುವಾಗ ಸುಮ್ಮನೆ ಇರದೆ, "ನನ್ನ ಮೇಲಿನ ದ್ವೇಷಕ್ಕೆ ನೀವೂ ನಿಮ್ಮ ಸ್ಥಾನವನ್ನು ಮರೆತು ಚಿಕ್ಕವರಾಗುತ್ತಿದ್ದೀರಾ. ನನಗೆ ನನ್ನ ಗಂಡನ ಮಾತೇ ಮುಖ್ಯ. ಅವರ ಜೊತೆಗೆ ನನ್ನ ತವರು ಮನೆಗೆ ಹೋಗುವುದನ್ನು ಯಾರು ತಡೆಯವುದಕ್ಕೆ ಆಗಲ್ಲ" ಅಂತ ಸವಾಲು ಹಾಕಿದ್ದಾಳೆ. ಆದ್ರೆ ಕೃತಿ ಅತ್ತೆ ಮಾತು ಮೀರುವುದು ಕಷ್ಟ. ಅವಳಮನಸ್ಸಿಗೆ ಒಪ್ಪಲ್ಲ. ಯಾಕಂದ್ರೆ ತವರು ಮನೆಯವರ ಜೊತೆಗೆ ಸಂಪರ್ಕದಲ್ಲಿ ಇರುವುದಿಲ್ಲ ಎಂದು ಅತ್ತೆಗೆ ಮಾತು ಕೊಟ್ಟಿರುವುದು.


Click it and Unblock the Notifications











