ಕೌನ್ ಬನೇಗ ಕರೋಡ್‌ಪತಿ: 3.40 ಲಕ್ಷ ಗೆದ್ದು ಕೇಸ್ ಹಾಕಿಸಿಕೊಂಡ ಸ್ಪರ್ಧಿ!
ಹಿಂದಿಯ ಜನಪ್ರಿಯ ಟಿವಿ ಶೋ 'ಕೌನ್ ಬನೇಗಾ ಕರೋಡ್‌ಪತಿ' ಇದೀಗ ಮತ್ತೆ ಬಂದಿದೆ. ಅಮಿತಾಬ್ ಬಚ್ಚನ್ ನಡೆಸಿಕೊಡುವ ಈ ಜನಪ್ರಿಯ ಶೋ 13ನೇ ಸೀಸನ್‌ಗೆ ಕಾಲಿಟ್ಟಿದ್ದು ಕಳೆದ ವಾರವಷ್ಟೆ ಶೋ ಪ್ರಸಾರವಾಗುತ್ತಿದೆ.
ಅಮಿತಾಬ್ ಬಚ್ಚನ್ ಎದುರು ಹಾಟ್‌ಸೀಟ್‌ನಲ್ಲಿ ಕುಳಿತುಕೊಳ್ಳಬೇಕು ಕೋಟಿ ಹಣ ಗೆಲ್ಲಬೇಕೆಂದು ದೇಶದ ಕೋಟ್ಯಂತರ ಜನರು ಯತ್ನಿಸುತ್ತಾರೆ ಆದರೆ ಆ ಅವಕಾಶ ಸಿಗುವುದು ಕೆಲವರಿಗಷ್ಟೆ. ಶೋಗೆ ಬಂದು 'ಫಾಸ್ಟೆಸ್ಟ್ ಫಿಂಗರ್ ಫಸ್ಟ್'ನಲ್ಲಿ ಆಯ್ಕೆ ಆಗದೇ ಹೊರಗೆ ಹೋದವರು ಹಲವಾರು ಮಂದಿ ಇದ್ದಾರೆ.
ಇಂಥಹಾ ಕಠಿಣ ಸವಾಲುಗಳನ್ನೆಲ್ಲಾ ಪಾರು ಮಾಡಿ ಅಮಿತಾಬ್ ಬಚ್ಚನ್ ಮುಂದೆ ಕೂತು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ 3.40 ಲಕ್ಷ ಗೆದ್ದ ವ್ಯಕ್ತಿಯೊಬ್ಬ ಶೋನಿಂದಾಗಿಯೇ ದೂರು ಎದುರಿಸುವಂತಾಗಿದೆ.

ದೇಶ ಬಂಧು ಪಾಂಡೆ ಎಂಬ ರೈಲ್ವೆ ನೌಕರರೊಬ್ಬರು ಕೆಲವು ದಿನಗಳ ಹಿಂದೆಯಷ್ಟೆ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋಟಾದಲ್ಲಿ 16 ವರ್ಷದಿಂದ ವಾಸಿಸುತ್ತಿರುವ ಹಲವು ವರ್ಷಗಳಿಂದ ರೈಲ್ವೆಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿರುವ ದೇಶ ಬಂಧು ಪಾಂಡೆ ಸ್ವಪ್ರಯತ್ನದಿಂದ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದರು.
ಅಮಿತಾಬ್ ಬಚ್ಚನ್ ಅವರನ್ನು ಕಾಣುವ ಅದಮ್ಯ ಕನಸನ್ನು ಹೊಂದಿದ್ದ ದೇಶ ಬಂಧು ಪಾಂಡೆ ಪಾಸ್ಟೆಸ್ಟ್ ಫಿಂಗರ್ ಫಸ್ಟ್ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಹಾಟ್‌ಸೀಟ್‌ಗೆ ಬಂದು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ 3.40 ಲಕ್ಷ ಹಣ ಗೆದ್ದರು. 6.40 ಲಕ್ಷದ ಸ್ಪರ್ಧೆಗೆ ತಪ್ಪು ಉತ್ತರ ಹೇಳಿ 3.20 ಲಕ್ಷ ಹಣವನ್ನು ಮನೆಗೆ ಕೊಂಡೊಯ್ದರು. ಆದರೆ ಶೋನಿಂದ ಹೊರಗೆ ಹೋಗುತ್ತಲೆ ದೇಶ ಬಂಧು ಪಾಂಡೆ ಕೆಲಸ ಮಾಡುತ್ತಿದ್ದ ರೈಲ್ವೆ ಇಲಾಖೆ ಪಾಂಡೆ ವಿರುದ್ಧ ಇಲಾಖೆಯಲ್ಲಿ ಆಂತರಿಕ ದೂರೊಂದನ್ನು ದಾಖಲಿಸಿದೆ.
ಶೋಗಾಗಿ ಆಗಸ್ಟ್ 9 ರಿಂದ ಆಗಸ್ಟ್ 13ರ ವರೆಗೆ ದೇಶ ಬಂಧು ಪಾಂಡೆ ಮುಂಬೈನಲ್ಲಿದ್ದರು. ಕೋಟಾದಿಂದ ಹೊರಡಬೇಕಾದರೆ ತಮ್ಮ ಹಿರಿಯ ಅಧಿಕಾರಿಗಳಿಗೆ ರಜೆ ಪತ್ರ ನೀಡಿ ಬಂದಿದ್ದರು. ಆದರೆ ಅವರ ಹಿರಿಯ ಅಧಿಕಾರಿಗಳು ರಜೆ ನೀಡಿರಲಿಲ್ಲ. ಹಾಗಾಗಿ ಈಗ ಇಲಾಖೆಯ ಹಿರಿಯ ಅಧಿಕಾರಿಗಳು ಪಾಂಡೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಆತನನ್ನು ಶಿಕ್ಷಿಸಬೇಕು ಎಂದು ಇಲಾಖೆಯ ಶಿಸ್ತು ಸಮಿತಿಯನ್ನು ಕೋರಿದ್ದಾರೆ.
ಆದರೆ ಈ ಬಗ್ಗೆ ತೀವ್ರ ವಿರೋಧವನ್ನು ರೈಲ್ವೆ ನೌಕರರ ಸಂಘವು ಎತ್ತಿದ್ದು, ಕೋಟಾದ ರೈಲ್ವೆ ಇಲಾಖೆಯ ಸಿಬ್ಬಂದಿ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು ಶೀಘ್ರವೇ ದೇಶ ಬಂಧು ಪಾಂಡೆ ವಿರುದ್ಧ ಮಾಡಲಾಗಿರುವ ಚಾರ್ಜ್ ಶೀಟ್ ಹಿಂಪಡೆಯಬೇಕು ಮತ್ತು ಅವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ದೇಶ ಬಂಧು ಪಾಂಡೆ ಹಲವು ವರ್ಷಗಳಿಂದ ರೈಲ್ವೆ ಕಚೇರಿ ಸೂಪರಿಂಡೆಂಟ್ ಆಗಿ ಕೋಟದಲ್ಲಿ ಕೆಲಸ ಮಾಡುತ್ತಿದ್ದಾರೆ.
'ಕೌನ್ ಬನೇಗ ಕರೋಡ್‌ಪತಿ' ಕಾರ್ಯಕ್ರಮವು ಕಳೆದ ವಾರದಿಂದ ಪ್ರಸಾರವಾಗುತ್ತಿದ್ದು, ಕಳೆದ ವರ್ಷದಂತಲ್ಲದೆ ಈ ಬಾರಿ ಲೈವ್ ಪ್ರೇಕ್ಷಕರನ್ನು ಮತ್ತೆ ಸೆಟ್‌ಗೆ ಕರೆಸಲಾಗಿದೆ. 'ಆಡಿಯನ್ಸ್ ಪೋಲ್' ಆಯ್ಕೆಯೂ ಇದೆ. ಲಸಿಕೆ ಪಡೆದವರನ್ನಷ್ಟೆ ಶೋಗೆ ವೀಕ್ಷಕರಾಗಿ, ಸ್ಪರ್ಧಿಗಳಾಗಿ ಕರೆಸಿಕೊಳ್ಳಲಾಗುತ್ತಿದೆ. ಇದು 13ನೇ ಸೀಸನ್ ಆಗಿದ್ದು ಸ್ಪರ್ಧಿಗಳು ಏಳು ಕೋಟಿ ಬಹುಮಾನವನ್ನು ಸಹ ಗೆಲ್ಲುವ ಅವಕಾಶ ಇದೆ. ಪ್ರತಿ ಶುಕ್ರವಾರ 'ಶಾಂಧಾರ್ ಶುಕ್ರವಾರ್' ಹೆಸರಿನ ವಿಶೇಷ ಎಪಿಸೋಡ್ ನಡೆಸಲಾಗುತ್ತಿದ್ದು, ಬೇರೆ-ಬೇರೆ ಉದ್ಯಮದ ಸೆಲೆಬ್ರಿಟಿಗಳು ಅತಿಥಿಗಳಾಗಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಈ ಶುಕ್ರವಾರ ಅತಿಥಿ ಸ್ಪರ್ಧಿಯಾಗಿ ದೀಪಿಕಾ ಪಡುಕೋಣೆ ಶೋಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











