'ಕಾವೇರಿ ಕನ್ನಡ ಮೀಡಿಯಂ' ಕೊನೆಗೊಂಡಿದ್ದೇಕೆ? ನಾಯಕ ನಟ ರಕ್ಷಿತ್ ಅರಸ್ ಗೋಪಾಲ್ ಏನಂತಾರೆ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ "ಕಾವೇರಿ ಕನ್ನಡ ಮೀಡಿಯಂ" ಕೂಡಾ ಒಂದು. ಕಳೆದ ವಾರವಷ್ಟೇ ಮುಕ್ತಾಯಗೊಂಡ ಈ ಧಾರಾವಾಹಿಯು 2023ರ ಆಗಸ್ಟ್ 28 ರಂದು ಪ್ರಸಾರ ಶುರು ಮಾಡಿತ್ತು. ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆದಿರುವ "ಕಾವೇರಿ ಕನ್ನಡ ಮೀಡಿಯಂ" ಧಾರಾವಾಹಿ ಸ್ವಮೇಕ್ ಧಾರಾವಾಹಿಯಾಗಿದ್ದು ನಾಯಕ ಅಗಸ್ತ್ಯ ನಾಗಿ ರಕ್ಷಿತ್ ಅರಸ್ ಗೋಪಾಲ್ ಹಾಗೂ ನಾಯಕಿ ಕಾವೇರಿಯಾಗಿ ಪ್ರಿಯಾ ಜೆ ಆಚಾರ್ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.
ಪಿಂಗಾರ ಕ್ರಿಯೇಷನ್ಸ್ ನಡಿಯಲ್ಲಿ ಪ್ರೀತಮ್ ಶೆಟ್ಟಿ ನಿರ್ದೇಶನದ ಈ ಧಾರಾವಾಹಿಯು ಯಶಸ್ವಿ ಎರಡು ವರ್ಷ ಪೂರೈಸಿರುವ ಮೊದಲೇ ಮುಕ್ತಾಯಗೊಂಡಿದೆ. ವೀಕ್ಷಕರ ನೆಚ್ಚಿನ ಧಾರಾವಾಹಿ ಇದ್ದಕ್ಕಿದ್ದಂತೆ ಮುಕ್ತಾಯಗೊಂಡ ಬೇಸರ ಒಂದೆಡೆಯಾದರೆ, ಸುಖಾಂತ್ಯದ ಮೂಲಕ ಮುಕ್ತಾಯಗೊಂಡಿರುವ ಖುಷಿ ವೀಕ್ಷಕರಿಗಿದೆ.

"ಕನ್ನಡವನ್ನೇ ಉಸಿರಾಗಿಸಿಕೊಂಡು, ಕನ್ನಡದ ಸೊಗಡನ್ನು ಸಾರಿದ ನಮ್ಮ ಕಾವೇರಿ ಕನ್ನಡ ಮೀಡಿಯಂನ ಕಥೆಗೆ ನೀವು ತೋರಿದ ಪ್ರೀತಿ, ಪ್ರೋತ್ಸಾಹ ಅವಿಸ್ಮರಣೀಯ. ಒಂದರ ಅಂತ್ಯ ಮತ್ತೊಂದರ ಶುಭಾರಂಭದ ಸಂಕೇತ. ಈ ಸುಂದರ ಪಯಣದಲ್ಲಿ ಜೊತೆಗಿದ್ದ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು" ಎಂದು ಸ್ಟಾರ್ ಸುವರ್ಣ ವಾಹಿನಿಯು ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಆ ಮೂಲಕ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದೆ.
ಇನ್ನು ಈ ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯ ಬ್ರಹ್ಮಾವರ್ ಆಗಿ ನಟಿಸಿ ಸೈ ಎನಿಸಿಕೊಂಡಿರುವ ರಕ್ಷಿತ್ ಅರಸ್ ಗೋಪಾಲ್ ಅವರು ಕೂಡಾ ಸೀರಿಯಲ್ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 'ಕಾವೇರಿ ಕನ್ನಡ ಮೀಡಿಯಂ' ತಂಡದ ಜೊತೆಗಿನ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿರುವ ರಕ್ಷಿತ್ ಅರಸ್ ಗೋಪಾಲ್ ವೀಕ್ಷಕರು ನೀಡಿದ ಪ್ರೋತ್ಸಾಹಕ್ಕೆ, ಬೆಂಬಲಕ್ಕೆ ತಮ್ಮ ನುಡಿಗಳ ಮೂಲಕ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

"ನನ್ನ ಎಲ್ಲ ವೀಕ್ಷಕ ಮಿತ್ರರಿಗೆ ನನ್ನ ಅನಂತನಂತ ನಮಸ್ಕಾರಗಳು. ಕಾವೇರಿ ಕನ್ನಡ ಮೀಡಿಯಂಗೆ ನೀವು ನಮ್ಮನ್ನು ವಿಜಯದ ಹಾದಿಯಲ್ಲಿ ನಡೆಸಿ ಗೆಲುವಿಗೆ ಪಾತ್ರರಾಗಿದ್ದಿರಿ. ಸಂಚಿಕೆಗಳನ್ನು ನೋಡಿ ನೀವು ನೀಡುತ್ತಿದ್ದ ಪ್ರೀತಿ, ಸಲಹೆಗಳು, ಅಭಿನಂದನೆಗಳು ಅಪಾರ. ಕಾವೇರಿ ಕನ್ನಡ ಮೀಡಿಯಂ 474 ಸಂಚಿಕೆಗಳನ್ನ ಪೂರೈಸಿ ಆನಂದಸಾಗರದಲ್ಲಿ ಸುಖಾಂತ್ಯಗೊಂಡಿದೆ. ಇದಕ್ಕೆ ನಿಜಕ್ಕೂ ನಿಮ್ಮ ಬೆಂಬಲವೇ ಕಾರಣ. ಇದೇ ಆರೈಕೆ, ಆಶೀರ್ವಾದ ನಮ್ಮ ಮೇಲೆ ಸದಾ ಹೀಗೆ ಇರಲಿ ಹಾಗೂ ನನ್ನ ಸಹ ಕಲಾವಿದರಿಗೆ ಮತ್ತು ನಮ್ಮ ತಾಂತ್ರಿಕ ವರ್ಗದವರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಅಗಸ್ಯ ಬ್ರಹ್ಮಾವರ್" ಎಂದು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ ರಕ್ಷಿತ್ ಅರಸ್ ಗೋಪಾಲ್.
ಅಂದ ಹಾಗೇ ಅಗಸ್ತ್ಯ ಬ್ರಹ್ಮಾವರ್ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ರಕ್ಷಿತ್ ಅರಸ್ ಗೋಪಾಲ್ ಅವರಿಗೆ ಸಣ್ಣ ವಯಸ್ಸಿನಿಂದಲೂ ನಟನಾಗಿ ಗುರುತಿಸಿಕೊಳ್ಳುವ ಮಹಾದಾಸೆ ಇತ್ತು. ಅದಕ್ಕಾಗಿ ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆ ಸೇರಿ ತರಬೇತಿಯನ್ನು ಪಡೆದಿದ್ದಲ್ಲದೇ ಒಂದಷ್ಟು ನಾಟಕಗಳಲ್ಲಿ ನಟಿಸಿ ಪರಿಪೂರ್ಣ ನಟನಾಗಿ ರೂಪುಗೊಂಡರು ರಕ್ಷಿತ್ ಅರಸ್ ಗೋಪಾಲ್.
ಪೋಷಕ ಪಾತ್ರಗಳ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು ನಟನೆಯ ಮೂಲಕ ಗುರುತಿಸಿಕೊಂಡಿರುವ ಹ್ಯಾಂಡ್ ಸಮ್ ಹುಡುಗ. 'ಮಹಾದೇವಿ', 'ಮಾಂಗಲ್ಯಂ ತಂತು ನಾನೇನಾ', 'ಯಜಮಾನಿ' ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳ ಮೂಲಕ ಮೋಡಿ ಮಾಡಿದ ರಕ್ಷಿತ್ ಅರಸ್ ಗೋಪಾಲ್ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದು 'ಮತ್ತೆ ವಸಂತ' ಧಾರಾವಾಹಿಯಲ್ಲಿ.
'ಮತ್ತೆ ವಸಂತ' ಧಾರಾವಾಹಿಯಲ್ಲಿ ಈತ ನಾಯಕನಾಗಿ ನಟಿಸಿದ್ದರೂ ಅದು ಅರ್ಧದಿಂದ ಎಂದು ಹೇಳಬಹುದು. ಯಾಕೆಂದರೆ ಈ ಧಾರಾವಾಹಿ ಶುರುವಾದಾಗ ವಿವೇಕ್ ಸಿಂಹ ಅವರು ನಾಯಕನಾಗಿ ನಟಿಸುತ್ತಿದ್ದರು. ಮುಂದೆ ಅವರು ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಾಗ ಆ ಪಾತ್ರಕ್ಕೆ ಆಯ್ಕೆಯಾದವರು ರಕ್ಷಿತ್ ಅರಸ್ ಗೋಪಾಲ್.
ಮುಂದೆ 'ಮುದ್ದು ಮಣಿಗಳು' ಧಾರಾವಾಹಿಯಲ್ಲಿ ನಾಯಕ ಶಿವು ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ರಕ್ಷಿತ್, ನಂತರ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯ ಪಾತ್ರದಲ್ಲಿ ನಟಿಸಿ ವೀಕ್ಷಕರ ಮನ ಸೆಳೆದರು. 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯೂ ಕೂಡಾ ಇದೀಗ ಮುಕ್ತಾಯಗೊಂಡಿದ್ದು, ರಕ್ಷಿತ್ ಅರಸ್ ಗೋಪಾಲ್ ಅವರು ಮತ್ತ್ಯಾವಾಗ ಕಿರುತೆರೆಗೆ ಮರಳುತ್ತಾರೆ ಅನ್ನೋದು ನೋಡಬೇಕಾಗಿದೆ.


Click it and Unblock the Notifications











