ಶುರುವಾಯ್ತು ಅಗಸ್ತ್ಯ- ಕಾವೇರಿ ಡುಯೆಟ್; ಗೊಂಬೆಗಳಂತೆ ನಿಂತು ಬಿಟ್ಟರು ಶಾಲಾ ಸಿಬ್ಬಂದಿ
ಕಾವೇರಿಯ ಜೊತೆಗೆ ಲಿಫ್ಟ್‌ನಲ್ಲಿ ಸಿಕ್ಕಿಬಿದ್ದಿದ್ದ ಅಗಸ್ತ್ಯ, ಈಗ ತನ್ನೊಳಗೆ ತಾನಿಲ್ಲ ಎಂದು ಹಾಡುವ ಹಂತಕ್ಕೆ ತಲುಪಿದ್ದಾನೆ. ಲಿಫ್ಟ್‌ನಲ್ಲಿ ಸರಿಯಾದ ಸಮಯಕ್ಕೆ ಪವರ್ ಕೂಡ ಹೋಗಿದೆ. ಕಾವೇರಿಗೆ ಅದೇ ಸಮಯಕ್ಕೆ ಉಸಿರು ಕಟ್ಟಿದ ವಾತಾವರಣ. ಪ್ರಜ್ಞೆ ತಪ್ಪಿ ಬಿದ್ದೆ ಬಿಟ್ಟಳು. ಪಕ್ಕದಲ್ಲಿಯೇ ಇದ್ದ ಅಗಸ್ತ್ಯ ಕೈ ಉಜ್ಜಿದ, ಕಾಲು ಉಜ್ಜಿದ. ಆದರೂ ಪ್ರಯೋಜನವಾಗಲಿಲ್ಲ. ಕಾವೇರಿ ಎಚ್ಚರಗೊಳ್ಳಲಿಲ್ಲ. ಕಡೆಗೆ ಅಗಸ್ತ್ಯನಿಗೆ ಹೊಳೆದಿದ್ದು ಲಿಪ್ ಟು ಲಿಪ್ ಉಸಿರು ಕೊಡುವುದು.
ಪ್ರಮೋದಾ ದೇವಿ ಎಂದರೆ ಅಗಸ್ತ್ಯನಿಗೆ ಪ್ರಾಣ. ಅಜ್ಜಿಯ ವಿಶ್ವಾಸ ಮತ್ತೆ ಗಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾನೆ. ಆ ಮನವಿಯ ಮೇರೆಗೆ ಕಾವೇರಿಯನ್ನು ಅಗಸ್ತ್ಯ ಮದುವೆಯಾಗಿದ್ದಾನೆ. ಬಲವಂತಕ್ಕೆ ಮದುವೆಯಾದರೂ ಸಹ, ಈಗೀಗ ಪ್ರೀತಿ ಚಿಗುರೊಡೆಯುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.

ಸಿಹಿ ಘಟನೆ ನೆನೆಯುತ್ತಾ ನಿಂತ ಅಗಸ್ತ್ಯ
ಅಗಸ್ತ್ಯ ಮೊದಲೆಲ್ಲಾ ಈ ರೀತಿ ಇದ್ದವನೇ ಅಲ್ಲ. ಯಾವಾಗಲೂ ಮುಖದ ಮೇಲೆ ಕೆಂಡದ ಉಂಡೆಯೇ ಕಾಣುತ್ತಿತ್ತು. ಆದರೆ, ಈಗ ಕೊಂಚ ಬೇರೆ ಕಡೆಗೆ ಮನಸ್ಸು ವಾಲುತ್ತಿದೆ. ತಾಳಿ ಕಟ್ಟಿದ ಹೆಂಡತಿಯ ಕಡೆಗೆ ಕಾಳಜಿ ಶುರುವಾಗಿದೆ. ಅದರಲ್ಲೂ ಸಿಹಿ ಮುತ್ತಿನ ಕ್ಷಣವನ್ನು ನೆನೆದು ನೆನೆದು ನಾಚುತ್ತಿದ್ದಾನೆ. ಲಿಫ್ಟ್‌ನಲ್ಲಿ ಆಗಿದ್ದನ್ನು ನೆನದು ಮೌನಿಯಾಗುತ್ತಿದ್ದಾನೆ.
ಪ್ರಶ್ನೆಗಳು ಬಂದಾಗ ಗೊಂದಲದಲ್ಲಿರುವ ಅಗಸ್ತ್ಯ
ಶಾಲೆಯ ಏಳಿಗೆ ಬಗ್ಗೆ, ಅಭಿವೃದ್ಧಿ ಬಗ್ಗೆ ಮೀಟಿಂಗ್ ಶುರುವಾಗಿದೆ. ಆ ಮೀಟಿಂಗ್‌ನಲ್ಲಿ ಕನ್ನಡಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಇನ್ನೊಬ್ಬರು ಕನ್ನಡ ಟೀಚರ್ ಬೇಕು ಎಂಬ ಮನವಿಯ ಬಗ್ಗೆ ಚರ್ಚೆಯಾಗುತ್ತಿದೆ. ಅಗಸ್ತ್ಯ ಆರಂಭದಲ್ಲಿ ಆಗೊಂದು ಈಗೊಂದು ಎಂಬಂತೆ ಮಾತನಾಡುತ್ತಿದ್ದಾನೆ. ಕಾವೇರಿಯ ಹೆಸರು ಬಂದೊಡನೆ, ಅವಳನ್ನೇ ನೋಡುತ್ತಾ ನಿಂತಿದ್ದಾನೆ. ಮತ್ತೆ ಎಚ್ಚರಗೊಳಿಸಿದಾಗ ಹ ಹೌದು.. ಕಾವೇರಿ ನಿಮ್ಮಂತ ಟೀಚರ್ ಒಬ್ಬರನ್ನ ನೋಡಿ ಬಿಡಿ ಎಂದು ಮತ್ತೆ ನಿಂತು ಬಿಟ್ಟಿದ್ದಾನೆ.
ಅಗಸ್ತ್ಯನ ನಡವಳಿಕೆಗೆ ಮನೆಯವರು ಶಾಕ್
ಮೊದಲೇ ಅಗಸ್ತ್ಯನ ಅಕ್ಕ ಅನಿಕಾಗೆ ಕಾವೇರಿ ಕಂಡರೆ ಆಗುವುದಿಲ್ಲ. ಕಾವೇರಿ ಬಗ್ಗೆ ಸಾಫ್ಟ್ ಆಗಿ ಯಾರಾದರೂ ಮಾತನಾಡಿದರು ಅದನ್ನು ಸಹಿಸಿಕೊಳ್ಳುವುದಿಲ್ಲ. ಈಗ ಅಗಸ್ತ್ಯನ ನಡವಳಿಕೆಗೆ ಸುಮ್ಮನೆ ಇರುತ್ತಾಳಾ..? ಈ ಕಡೆ ಅಗಸ್ತ್ಯ ಒಂದೇ ಸಮನೆ ಕಾವೇರಿಯನ್ನು ದಿಟ್ಟಿಸಿ ನೋಡುತ್ತಿದ್ದರೆ, ಅತ್ತ ಕಾವೇರಿ ಕೂಡ ಅಗಸ್ತ್ಯನನ್ನು ದಿಟ್ಟಿಸಿ, ನಗು ಮುಖದಲ್ಲಿ ನೋಡುತ್ತಾ ನಿಂತಿದ್ದಾಳೆ. ಇದು ಅನಿಕಾಗೆ ಶಾಕಿಂಗ್ ಎನಿಸಿದೆ. ಅಗಸ್ತ್ಯನ ಈ ಬದಲಾವಣೆಯನ್ನು ಅನಿಕಾಳಿಂದ ಸಹಿಸುವುದಕ್ಕೆ ಆಗುತ್ತಿಲ್ಲ. ಅದರ ಜೊತೆಗೆ ಶಾಲೆಯಲ್ಲಿ ಕಾವೇರಿಯ ಸಹೋದ್ಯೋಗಿಗೂ ಕೋಪ ಹೆಚ್ಚಾಗಿದೆ.
ಕಾವೇರಿ ನಗುವಿಗೆ ಖುಷಿ ಪಟ್ಟ ನೆಟ್ಟಿಗರು
ಅಗಸ್ತ್ಯ ಬೇರೆ ಫುಲ್ ರೊಮ್ಯಾಂಟಿಕ್ ಮೂಡಿನಲ್ಲಿ ತೇಲುತ್ತಿದ್ದಾರೆ. ಅಗಸ್ತ್ಯನ ಮಾತುಗಳು ಕಿವಿಗೆ ಬಿದ್ದೊಡನೆ ಕಾವೇರಿ ಅಲ್ಲಿಯೇ ಕಳೆದು ಹೋಗುತ್ತಿದ್ದಾಳೆ. ಇಬ್ಬರು ಈಗ ತಮ್ಮದೇ ಲೋಕದಲ್ಲಿ ತೇಲುತ್ತಿದ್ದಾರೆ. ಕನಸಿಗೆ ಜಾರಿದ ಅಗಸ್ತ್ಯ ಹಾಗೂ ಕಾವೇರಿ, ತಮ್ಮ ಸುತ್ತಮುತ್ತ ಇದ್ದವರನ್ನು Pause ಮಾಡಿದ್ದಾರೆ. ಇಷ್ಟವಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ. ಅಳುವ ಕಾವೇರಿಯನ್ನೇ ನೋಡಿದ್ದಾಯಿತು. ಹೀಗೆ ಸದಾ ಖುಷಿಯಾಗಿರಿ ಎಂದು ಹರಸಿದ್ದಾರೆ.


Click it and Unblock the Notifications











