Kaveri Kannada Medium: ಎದುರಾಗಿದೆ ಕಾವೇರಿಗೆ ಸವಾಲು.. ಪ್ರಮೋದಾ ದೇವಿಯ ಆಸೆ ಈಡೇರುವುದು ಹೇಗೆ..?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗೆ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿ ಆರಂಭವಾಗಿದೆ. ಈ ಧಾರಾವಾಹಿ ಮೂಲಕ ಹಿರಿಯ ನಟಿ ಮಹಾಲಕ್ಷ್ಮಿ ಕಮ್ ಬ್ಯಾಕ್ ಆಗಿದ್ದಾರೆ. ಪ್ರಮೋದಾ ದೇವಿ ಎಂಬ ಪಾತ್ರ ಮಾಡುತ್ತಿದ್ದಾರೆ. ಹಳ್ಳಿಯಲ್ಲಿರುವ ಕಾವೇರಿ ಮೇಲೆ ಒಂದು ರೀತಿಯಾದ ಬಾಂಧವ್ಯವಿದೆ. ಆದರೆ, ಅದನ್ನು ನೇರವಾಗಿ ಹೇಳುವುದಕ್ಕೆ ಆಗುತ್ತಿಲ್ಲ.
ಹೆಸರೇ ಸೂಚಿಸುವಂತೆ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿ ಇದೊಂದು ಇಂಗ್ಲಿಷ್ ಮೀಡಿಯಂ ಹಾಗೂ ಕನ್ನಡ ಮೀಡಿಯಂ ನಡುವೆ ನಡೆಯುತ್ತಿರುವ ಯುದ್ಧ. ಖಾಸಗಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರಿ ಶಾಲೆಗಳ ಅವನತಿಯಾಗುತ್ತಿದೆ. ಇವತ್ತಿನ ಸ್ಥಿತಿ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಕಷ್ಟಪಟ್ಟು, ಹಣ ಖರ್ಚು ಮಾಡಿ ಖಾಸಗಿ ಶಾಲೆಗಳಿಗೆ ಸೇರಿಸುವ ಸ್ಥಿತಿ ಇದೆ.

ಪಂಚಾಯ್ತಿಯಲ್ಲಿ ನಿಂತ ಕಾವೇರಿ
ಊರಿನಲ್ಲಿ ಇರುವುದು ಒಂದೇ ಸರ್ಕಾರಿ ಶಾಲೆ. ಕನ್ನಡ ಮೀಡಿಯಂಗೆ ಹೋಗುವ ಮಕ್ಕಳ ಸಂಖ್ಯೆ ಏನು ಕಡಿಮೆ ಇಲ್ಲ. ಆದರೆ, ಶಾಲೆ ನಡೆಸುವುದಕ್ಕೆ ಬರುವ ಅನುದಾನವನ್ನೇ ಅಗಸ್ತ್ಯ ನಿಲ್ಲಿಸಿದ್ದಾನೆ. ಶಾಲೆಯ ವಿಚಾರ ಈಗ ಪಂಚಾಯತಿಗೆ ಬಂದಿದೆ. ಊರಿನವರೆಲ್ಲಾ ಪಂಚಾಯತಿ ಮುಂದೆ ಕೂತಿದ್ದಾರೆ. ಎಲ್ಲರ ಚಿತ್ತ ಇರುವುದು ಕಾವೇರಿಯ ಕಡೆಗೆ ಇದೆ.
ಶಾಲೆ ಉಳಿಸಲು ಕಾವೇರಿ ಒಪ್ಪಲೇಬೇಕು
ಕನ್ನಡ ಮೀಡಿಯಂ ಶಾಲೆಗೆ ಅನುದಾನ ಬೇಕಾದಲ್ಲಿ ಕಾವೇರಿಯ ಮುಂದೆ ಸವಾಲು ಎದುರಾಗಿದೆ. ನಗರದಲ್ಲಿರುವ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮೂರು ತಿಂಗಳುಗಳ ಕಾಲ ಟೀಚರ್ ಆಗಿ ಕೆಲಸಕ್ಕೆ ಸೇರಬೇಕಾಗಿದೆ. ಇಲ್ಲವಾದಲ್ಲಿ ಕನ್ನಡ ಮೀಡಿಯಂ ಶಾಲೆಗೆ ಅನುದಾನ ಸಿಗುವುದಿಲ್ಲ. ಮಕ್ಕಳೆಲ್ಲಾ ಟೀಚರ್ ಕಾವೇರಿಯನ್ನು ಮನವಿ ಮಾಡುತ್ತಿದ್ದಾರೆ. ಊರಿನವರೆಲ್ಲಾ ಕಾವೇರಿ ಬಳಿ ಶಾಲೆ ಉಳಿಸುವಂತೆ ಕೇಳುತ್ತಿದ್ದಾರೆ. ಕಾವೇರಿಗೆ ಒಂದು ಕಡೆ ಆತಂಕವೂ ಇದೆ. ಕನ್ನಡ ಮೀಡಿಯಂನಲ್ಲಿ ಪಾಠ ಮಾಡಿದ ನಾನು ಇಂಗ್ಲಿಷ್ ಮೀಡಿಯಂಗೆ ಹೋಗುವುದು ಹೇಗೆ ಎಂಬ ಆತಂಕವೂ ಕಾಡುತ್ತಿದೆ.

ಪ್ರಮೋದಾ ದೇವಿಗೆ ಇರುವ ಆಸೆಯೇ ಬೇರೆ
ಪ್ರಮೋದಾ ದೇವಿಗೂ ಕಾವೇರಿಗೂ ಯಾವುದೋ ಸಂಬಂಧವಿರುವುದಂತು ಸತ್ಯ. ಆದರೆ ಆ ಸಂಬಂಧವನ್ನು ಅನಾವರಣ ಮಾಡುವುದಕ್ಕೆ ಆಗಲ್ಲ. ಹೀಗಾಗಿ ಹೇಗಾದರೂ ಮಾಡಿ, ಕಾವೇರಿ ನಗರಕ್ಕೆ ಬರಲಿ ಎಂದೇ ಪ್ರಮೋದಾ ದೇವಿ ಬಯಸುತ್ತಿದ್ದಾರೆ. ಈಗ ಊರಿನವರೆಲ್ಲ ಹೇಳಿದ್ದು, ಮಕ್ಕಳ ಮನವಿ ಎಲ್ಲಾ ಕೇಳಿ ಕಾವೇರಿ ಧೈರ್ಯ ಮಾಡಿದ್ದಾಳೆ. ಶಾಲೆ ಉಳಿಕೊಳ್ಳಲು ನಾನು ನಿಮ್ಮ ಶಾಲೆಗೆ ಬಂದು ಟೀಚರ್ ಆಗಿ ಕೆಲಸ ಮಾಡುತ್ತೇನೆ ಎಂದಿದ್ದಾಳೆ. ಇದು ಅಗಸ್ತ್ಯನಿಗೆ ಶಾಕ್ ಆಗಿದೆ. ಅಲ್ಲಿಯೂ ಅದರಲ್ಲೂ ಅಜ್ಜಿಯ ಮುಂದೆಯೂ ಸವಾಲು ಹಾಕಿದ್ದಾನೆ. ಬರುತ್ತೀನಿ ಎಂದ ತಕ್ಷಣ ಕರೆದುಕೊಂಡು ಬಿಡುವುದಿಲ್ಲ. ಅದಕ್ಕೆಂದೆ ಸಂದರ್ಶನವಿದೆ ಎಂದು ಹೇಳಿದ್ದಾನೆ.
ಸವಾಲು ಮೀರಿ ಅಜ್ಜಿ ಆಸೆ ಈಡೇರಿಸುತ್ತಾಳಾ?
ಕಾವೇರಿಯ ಕಾನ್ಫಿಡೆನ್ಸ್ ಯಾವ ಮಟ್ಟಕ್ಕೆ ಇದೆ ಅನ್ನೋದು ಅಗಸ್ತ್ಯ ಹಾಗೂ ಅವನ ಅಕ್ಕನಿಗೆ ಗೊತ್ತಿದೆ. ಇಂಟರ್‌ವ್ಯೂನಲ್ಲಿ ಆಕೆ ಪಾಸ್ ಆಗಿಯೇ ಬಿಡುತ್ತಾಳೆ ಎಂಬ ಭಯವೂ ಇದೆ. ಅದಕ್ಕೆಂದೇ ಮೊದಲೇ ಪ್ಲ್ಯಾನ್ ರೆಡಿ ಮಾಡುತ್ತಿದ್ದಾರೆ. ಅವಳಿಗೆ ಉತ್ತರಿಸುವುದಕ್ಕೆ ಆಗದ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಬೇಕು ಎಂದಿದ್ದಾನೆ. ಅದಕ್ಕೆಂದೇ ಒಂದು ಟೀಂ ರೆಡಿ ಮಾಡಿದ್ದಾರೆ. ಪ್ಲ್ಯಾನ್ ಪ್ರಕಾರವೇ ಕಾವೇರಿಯನ್ನು ಲಾಕ್ ಮಾಡಿದ್ದಾರೆ. ಆದರೆ ಇದರಲ್ಲಿ ಕಾವೇರಿ ಗೆಲ್ಲಲೇಬೇಕಾಗಿದೆ.


Click it and Unblock the Notifications











