'ಕಾವ್ಯಾಂಜಲಿ' ನಟಿ ಸುಶ್ಮಿತಾ ಭಟ್‌ಗೆ ಮಮ್ಮುಟ್ಟಿ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದೇಗೆ?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಾಯಕಿ ಅಂಜಲಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆಯ ಹೆಸರು ಸುಶ್ಮಿತಾ ಭಟ್. ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಮೋಡಿ ಮಾಡಿರುವ ಸುಶ್ಮಿತಾ ಭಟ್ ಇದೀಗ ಪರಭಾಷೆಯ ಸಿನಿರಂಗದಲ್ಲಿಯೂ ಮೋಡಿ ಮಾಡಿದ ಬೆಡಗಿ.
ಹೌದು, ಅಂಜಲಿಯಾಗಿ ಕನ್ನಡ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸುಶ್ಮಿತಾ ಭಟ್ ಮಲಯಾಳಂ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಮಲಯಾಳಂ ಸಿನಿಮಾದಲ್ಲಿ ಮೆಗಾಸ್ಟಾರ್ ಆಗಿ ಗುರುತಿಸಿಕೊಂಡಿರುವ ಮಮ್ಮುಟ್ಟಿ ಜೊತೆಗೆ ಸುಶ್ಮಿತಾ ಭಟ್ ತೆರೆ ಹಂಚಿಕೊಂಡಿದ್ದಾರೆ.

'ಡಾಮಿನಿಕ್ ಆ್ಯಂಡ್ ದಿ ಲೇಡೀಸ್ ಪರ್ಸ್' ಎಂಬ ಮಲಯಾಳಂ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ ಕನ್ನಡತಿ ಸುಶ್ಮಿತಾ ಭಟ್. ಗೌತಮ್ ಮೆನನ್ ನಿರ್ದೇಶನದ ಈ ಸಿನಿಮಾ ಈಗಾಗಲೇ ಬಿಡುಗಡೆಯೂ ಆಗಿದ್ದು ಸಕತ್ ಸದ್ದು ಮಾಡುತ್ತಿದೆ. ಅಂದ ಹಾಗೇ ಸುಶ್ಮಿತಾ ಅವರು ಈ ಸಿನಿಮಾಕ್ಕೆ ಆಯ್ಕೆಯಾದ ಸಂಗತಿ ನಿಜಕ್ಕೂ ರೋಚಕ ಎಂದೆನಿಸುತ್ತದೆ.
ಮಲಯಾಳಂ ಕಾಸ್ಟ್ಯೂಮ್ ಡಿಸೈನರ್ ಸಮೀರಾ ಸನೀಶ್ ಅವರು ಸುಶ್ಮಿತಾ ಭಟ್ ಅವರ ಇನ್‌ಸ್ಟಾಗ್ರಾಂ ಪ್ರೋಫೈಲ್ ಅನ್ನು ಫಾಲೋ ಮಾಡುತ್ತಿದ್ದರಂತೆ. ಒಂದು ದಿನ ಸಮೀರಾ ಅವರು ಸುಶ್ಮಿತಾ ಅವರಿಗೆ ಕಾಲ್ ಮಾಡಿ ಆಡಿಶನ್ ನೀಡುವಂತೆ ಕರೆ ನೀಡಿದರಂತೆ. ಮುಂದೆ ಆಡಿಶನ್‌ಗೆ ಹೋದ ಸುಶ್ಮಿತಾ ಭಟ್ ಸಿನಿಮಾಕ್ಕೆ ಆಯ್ಕೆಯೂ ಆದರು.

ಕಂಟೆಂಟ್ ಇರುವಂತಹ ಕಥೆಗಳಲ್ಲಿ ನಟಿಸುವುದೆಂದರೆ ಸುಶ್ಮಿತಾ ಭಟ್ ಅವರಿಗೆ ತುಂಬಾ ಇಷ್ಟ. ಅದರಲ್ಲೂ ನೈಜತೆಗೆ ಹತ್ತಿರ ಇರುವಂತಹ ಪಾತ್ರಗಳತ್ತ ಅವರ ಮೊದಲ ಆದ್ಯತೆ. ಮಾತ್ರವಲ್ಲ ಸುಶ್ಮಿತಾ ಅವರು ನಟಿಸುವ ಪಾತ್ರಕ್ಕೂ ಕೂಡಾ ಹೆಚ್ಚಿನ ಪ್ರಾಮುಖ್ಯತೆ ಇರಬೇಕು ಎಂಬುದು ಕೂಡಾ ಆಕೆಯ ಅಂಬೋಣ. ಇದರ ಜೊತೆಗೆ ಮಮ್ಮುಟ್ಟಿ ಅವರ ಜೊತೆಗೆ ನಟಿಸುವುದಕ್ಕೆ ಅವಕಾಶ ಸಿಕ್ಕಾಗ ಸುಶ್ಮಿತಾ ಭಟ್ ಅವರಿಗೆ ಎಷ್ಟು ಸಂತೋಷವಾಗಿತ್ತೋ, ಅಷ್ಟೇ ಭಯವೂ ಕೂಡಾ ಆಗಿತ್ತಂತೆ. ಅವರಿಂದ ಕಲಿಯುವುದು ಕೂಡಾ ಬೇಕಾಷ್ಟಿದೆ ಎಂದು ಆಕೆ ಹೇಳಿದ್ದಾರೆ.
ಉದಯ ವಾಹಿನಿಯ 'ಕಾವ್ಯಾಂಜಲಿ' ಧಾರಾವಾಹಿಯ ಅಂಜಲಿಯಾಗಿ ಕಿರುತೆರೆಗೆ ಕಾಲಿಟ್ಟಿದ್ದ ಸುಶ್ಮಿತಾ ಭಟ್ ಅವರು ಮುಂದೆ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದರು. ಮುಂದೆ 'ಆನಂದರಾಗ' ಧಾರಾವಾಹಿಯಲ್ಲಿ ಒಂದೆರಡು ಸಂಚಿಕೆಗಳಲ್ಲಿ ನಟಿಸಿದ ಈಕೆ ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿರುವ ಬೆಡಗಿ. ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡಿ ಅಪ್ ಲೋಡ್ ಮಾಡಿರುವ ಈಕೆ ರೆಟ್ರೋ ಸ್ಟೈಲ್ ಮೂಲಕ ಕಾಣಿಸಿಕೊಂಡಿದ್ದೇ ಹೆಚ್ಚು.
ಇನ್ನು 'ಚೌ ಚೌ ಬಾತ್' ಹಾಗೂ 'ಕಲ್ಜಿಗ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಸುಶ್ಮಿತಾ ಭಟ್ ಇಂಜಿನಿಯರಿಂಗ್ ಪದವೀಧರೆ ಹೌದು. ಇಂಜಿನಿಯರಿಂಗ್ ವಿದ್ಯಾಭ್ಯಾಸದ ಬಳಿಕ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ ನಟನೆಗೆ ಬಂದುದು ತೀರಾ ಆಕಸ್ಮಿಕ.
ಅಚಾನಕ್ ಆಗಿ ದೊರೆತ ಅವಕಾಶದಿಂದ ಕಿರುತೆರೆಗೆ ಕಾಲಿಟ್ಟ ಈಕೆ ಇಂದು ಸ್ಯಾಂಡಲ್‌ವುಡ್ ಜೊತೆಗೆ ಮಾಲಿವುಡ್‌ನಲ್ಲೂ ಮಿಂಚಿದ್ದಾರೆ. ಇದೀಗ ತಮಿಳು ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿರುವ ಈಕೆ ಮುಂದೊಂದು ದಿನ ತಮಿಳು, ತೆಲುಗು ಸಿನಿಮಾದಲ್ಲಿ ನಟಿಸಿದರೆ ಆಶ್ಚರ್ಯವಿಲ್ಲ.


Click it and Unblock the Notifications











