ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಕನ್ನಡದ ನಟ ಇವರೇ; ಹಿನ್ನೆಲೆಯೇನು?
ಕನ್ನಡ ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಹೆಚ್ಚಿನ ಕಲಾವಿದರುಗಳು ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಮಾಮೂಲಿ ಸಂಗತಿ. ಇನ್ನು ಕೆಲವು ನಟ-ನಟಿಯರು ಪರಭಾಷೆಯ ಕಿರುತೆರೆಗೆ ಕಾಲಿಟ್ಟು ಅಲ್ಲಿ ತಮ್ಮ ನಟನಾ ಛಾಪನ್ನು ಪಸರಿಸುತ್ತಾರೆ. ಆ ಸಾಲಿಗೆ ಸೇರಿದ ನಟನ ಹೆಸರು ಪವನ್ ರವೀಂದ್ರ.
ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ದೀರ್ಘ ಸುಮಂಗಲಿ ಭವ' ಧಾರಾವಾಹಿಯಲ್ಲಿ ಆರ್ಮಿ ಆಫೀಸರ್ ಇಂದ್ರ ಆಗಿ ನಟಿಸುತ್ತಿರುವ ಪವನ್ ರವೀಂದ್ರ ಕಿರುತೆರೆಗೆ ಕಾಲಿಟ್ಟಿದ್ದು 'ಜಾನಕಿ ರಾಘವ' ಧಾರಾವಾಹಿಯ ಮೂಲಕ. ವಿನು ಬಳಂಜ ನಿರ್ದೇಶನದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜಾನಕಿ ರಾಘವ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ನಟನೆಗೆ ಕಾಲಿಟ್ಟ ಪವನ್ ರವೀಂದ್ರ ನಂತರ ನಟಿಸಿದ್ದು 'ಏಟು ಎದಿರೇಟು' ಧಾರಾವಾಹಿಯಲ್ಲಿ.

ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಏಟು ಎದಿರೇಟು' ಧಾರಾವಾಹಿಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪವನ್ ರವೀಂದ್ರ ಮುಂದೆ ಬದಲಾದುದು ಚಿರಂತ್ ಆಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕ ಚಿರಂತ್ ಆಗಿ ಬಣ್ಣ ಹಚ್ಚಿದ್ದ ಪವನ್ ರವೀಂದ್ರ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡರು.
'ರಂಗನಾಯಕಿ' ಧಾರಾವಾಹಿಯ ನಂತರ ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಪವನ್ ರವೀಂದ್ರ ನಂತರ 'ಕಾವ್ಯಾಂಜಲಿ' ಧಾರಾವಾಹಿಯ ಸುಶಾಂತ್ ಆಗಿ ಕಿರುತೆರೆಗೆ ಮರಳಿದ್ದರು. ತದ ನಂತರ ಕನ್ನಡ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಂಡಿರದ ಪವನ್ ರವೀಂದ್ರ ಸದ್ಯ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

ಹೌದು, 'ಮೌನರಾಗಂ' ತೆಲುಗು ಧಾರಾವಾಹಿಯ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸಿದ್ದ ಪವನ್ ರವೀಂದ್ರ ನಂತರ ನಟಿಸಿದ್ದು ತೆಲುಗಿನ 'ವೈದೇಹಿ ಪರಿಣಯಂ' ಧಾರಾವಾಹಿಯಲ್ಲಿ. ತಮ್ಮ ನಟನೆಯ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನ ಸೆಳೆದ ಪವನ್ ರವೀಂದ್ರ ನಂತರ ಸೀದಾ ಹಾರಿದ್ದು ತಮಿಳು ಕಿರುತೆರೆಗೆ.
ತಮಿಳಿನ 'ಮಿ. ಮಾನೈವಿ' ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸಿರುವ ಪವನ್ ರವೀಂದ್ರ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ 'ದೀರ್ಘ ಸುಮಂಗಲಿಭವ' ಧಾರಾವಾಹಿಯಲ್ಲಿ ನಾಯಕನಾಗಿ ಕಮಾಲ್ ಮಾಡುತ್ತಿರುವ ಪವನ್ ರಾಜ್ಯಮಟ್ಟದ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡವರು.
ಪವನ್ ರವೀಂದ್ರ ಅವರನ್ನು ನೋಡಿದ ಕೆಲವರು ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಸಲಹೆಯನ್ನು ನೀಡಿದ್ದರು. ಬಂದ ಸಲಹೆಯನ್ನು ತಿರಸ್ಕರಿಸಿದ ಪವನ್ ರವೀಂದ್ರ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.ಮಾಡೆಲಿಂಗ್ ಲೋಕದಲ್ಲಿ ಮಿಂಚುವ ಮೊದಲೇ ನಟನೆಯ ನಂಟು ಬೆಳೆಸಿಕೊಳ್ಳುವ ಸುವರ್ಣಾವಕಾಶ ಪವನ್ ರವೀಂದ್ರ ಅವರಿಗೆ ದೊರಕಿತು. "ಜಾನಕಿ ರಾಘವ" ಧಾರಾವಾಹಿಯ ರಾಘವನಾಗಿ ಕಿರುತೆರೆ ಪಯಣ ಶುರು ಮಾಡಿದ್ದ ಪವನ್ ರವೀಂದ್ರ ವಿನು ಬಳಂಜ ನಿರ್ದೇಶನದ ಧಾರಾವಾಹಿಯ ಮೂಲಕ ನನ್ನ ಕಿರುತೆರೆ ಪಯಣ ಶುರುವಾಗುತ್ತಿರುವುದು ಪುಣ್ಯವೇ ಸರಿ. ನಟನೆ, ನೃತ್ಯದ ಗಂಧಗಾಳಿ ಇಲ್ಲದ ನಾನು ಇದೀಗ ಕಿರುತೆರೆಯಿಂದ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡೆ ಎಂದು ಅವರು ಆ ಸಮಯದಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಕಿರುತೆರೆಗೆ ಕಾಲಿಟ್ಟಾಗ ನಟನೆಯೆಂದರೆ ಏನು ಎಂಬುದೇ ನನಗೆ ತಿಳಿದಿರಲಿಲ್ಲ. ಕಿರುತೆರೆಗೆ ಕಾಲಿಟ್ಟ ಬಳಿಕವೇ ಎಲ್ಲವನ್ನೂ ಹಂತಹಂತವಾಗಿ ತಿಳಿದುಕೊಂಡೆ. ನಟನೆ ಎಂದರೇನು, ನಟನಾಗಲು ಬೇಕಾಗುವ ರೀತಿ ನೀತಿಗಳೇನು ಎಂಬುದೆಲ್ಲಾ ನನಗೆ ಮತ್ತೆಯೇ ತಿಳಿದದ್ದು ಎಂದು ಈ ಹಿಂದೆ ಹೇಳಿಕೊಂಡಿದ್ದರು ಪವನ್ ರವೀಂದ್ರ. ಒಟ್ಟಿನಲ್ಲಿ ಕನ್ನಡ ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟು ಇಂದು ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಪವನ್ ರವೀಂದ್ರ ಮತ್ತೆ ಕನ್ನಡ ಕಿರುತೆರೆಗೆ ಕಾಲಿಡುತ್ತಾರಾ ಎಂಬುದು ತಿಳಿಯಬೇಕಿದೆ.


Click it and Unblock the Notifications











