ವಿಡಿಯೋ ಕಾಲ್‌ನಲ್ಲಿ ಬೆಂಗಳೂರಿನಲ್ಲಿದ್ದ ಗಂಡನ ಜೊತೆ ಜಗಳ ; ದುರಂತ ಅಂತ್ಯ ಕಂಡ ಕಿರುತೆರೆ ನಟಿ ಸುಭಾಷಿಣಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ.. ಕ್ಷಮೆಯನ್ನು ಕೇಳಿ... ದಾಂಪತ್ಯದ ಬಂಡಿಯನ್ನು ಎಳೆಯುತ್ತಿದ್ದರು.
ಆದರೆ.. ಈಗ ಕಾಲ ಬದಲಾಗಿದೆ.ಬದಲಾದ ಈ ಕಾಲದಲ್ಲಿ.. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಗಾದೆ ಮಾತಿಗೆ ಮಾತ್ರ ಸೀಮಿತವಾಗಿದೆ. ಬದಲಾದ ಈ ಕಾಲದಲ್ಲಿ ಜಗಳ ಬೇರೆಯದ್ದೇ ರೂಪ ಪಡೆಯುತ್ತಿದೆ. ಮಾನಸಿಕ ಖಿನ್ನತೆಗೆ ದೂಡುತ್ತಿರುವ ಈ ಜಗಳ ಆತ್ಮ*ಹತ್ಯೆಗೆ ಕೂಡ ಕಾರಣವಾಗುತ್ತಿದೆ. ಇದಕ್ಕೆ ಸುಭಾಷಿಣಿ ಅವರ ದುರಂತ ಅಂತ್ಯ ಸದ್ಯದ ಉದಾಹರಣೆ.

ಹೌದು, ಸುಭಾಷಿಣಿ.. ತಮಿಳು ನಟಿ. ಮೂಲತಃ ಶ್ರೀಲಂಕಾದವರಾಗಿದ್ದ ಸುಭಾಷಿಣಿ ಬಣ್ಣದ ಮೇಲಿನ ಸೆಳೆತದಿಂದ 2012ರಲ್ಲಿ ಬಿಡುಗಡೆಯಾದ ಶ್ರೀಲಂಕನ್ ತಮಿಳು ಚಿತ್ರ ''ಇನಿ ಅಬಾನ್'' ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಆ ನಂತರ ಭಾರತಕ್ಕೆ ವಲಸೆ ಬಂದ ಸುಭಾಷಿಣಿ ಹಲವಾರು ಕಿರುಚಿತ್ರಗಳು ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು.
2023ರಲ್ಲಿ ''ಬಿಗ್ ಬಾಸ್'' ಖ್ಯಾತಿಯ ಆರಿ ನಟಿಸಿದ್ದ ''ಎಲ್ಲಾ ಮೇಲ ಇರುಕ್ಕಿರವನ್ ಪಾತುಪ್ಪನ್'' ಚಿತ್ರದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ನಡುವೆ ಕಿರುತೆರೆಯಲ್ಲಿಯೂ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದ ಸುಭಾಷಿಣಿ ''ಕಯಲ್'' ಧಾರಾವಾಹಿಯ ಮೂಲಕ ತಮಿಳುನಾಡಿನೆಲ್ಲೆಡೆ ಮನೆ ಮಾತಾಗಿದ್ದರು. ಸನ್ ಟಿವಿಯಲ್ಲಿ ಪ್ರಸಾರವಾದ ನಂಬರ್ 1 ಧಾರಾವಾಹಿ ಇದು.
ಕಿರುತೆರೆಯಲ್ಲಿ ಮತ್ತು ಬೆಳ್ಳಿತೆರೆಯಲ್ಲಿ ಒಂದೊಂದೆ ಮೆಟ್ಟಿಲನ್ನೇರುತ್ತಿದ್ದ ಸುಭಾಷಿಣಿ ಕೆಲ ತಿಂಗಳ ಹಿಂದೆ ಬೆಂಗಳೂರು ಮೂಲದ ಬಿಬಿನ್ ಚಂದ್ರ ಅವರ ಜೊತೆ ಮದುವೆಯಾಗಿದ್ದರು. ಮದುವೆ ನಂತರ ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಸುಭಾಷಿಣಿ ಕೆಲಸದ ಪ್ರಯುಕ್ತ ಚೆನ್ನೈಗೆ ಆಗಾಗ ಪ್ರಯಾಣ ಮಾಡುತ್ತಿದ್ದರು.

ತೀರಾ ಇತ್ತೀಚೆಗೆ ತಮ್ಮ ಧಾರಾವಾಹಿಗಳ ಶೂಟಿಂಗ್‌ಗೆ ಅನುಕೂಲವಾಗುವಂತೆ ಚೆನ್ನೈನ ಅಯ್ಯಪ್ಪಂತಾಂಗಲ್‌ನಲ್ಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ಫ್ಲಾಟ್ ಬಾಡಿಗೆಗೆ ಪಡೆದು, ಅಲ್ಲಿಯೇ ಸುಭಾಷಿಣಿ ವಾಸವಾಗಿದ್ದರು.
ಇಂಥಾ ಸುಭಾಷಿಣಿ ಮತ್ತು ಇವರ ಪತಿ ಬಿಬಿನ್ ನಡುವೆ ಫೋನ್‌ನಲ್ಲಿ ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದಿದೆ. ಈ ವಾಗ್ವಾದದಿಂದ ಮನ ನೊಂದ ಸುಭಾಷಿಣಿ ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಪತಿ ಬಿಬಿನ್ ಚಂದ್ರ ಅವರಿಗೆ ಹೇಳಿದ್ದಾರೆ. ವಿಡಿಯೋ ಕಾಲ್‌ನಲ್ಲಿರುವಾಗಲೇ ಬೆಡ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಘಟನೆಯನ್ನೆಲ್ಲಾ ವಿಡಿಯೋ ಕಾಲ್‌ನಲ್ಲಿ ನೋಡುತ್ತಿದ್ದ ಪತಿ ಬಿಬಿನ್ ಚಂದ್ರ, ಕೂಡಲೇ ಪೋರೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸುಭಾಷಿಣಿ ಅವರಿದ್ದ ಫ್ಲಾಟ್‌ಗೆ ಧಾವಿಸಿ, ಬಾಗಿಲು ಒಡೆದು ಒಳಹೋಗಿದ್ದಾರೆ. ಆದರೆ ಅಷ್ಟರಲ್ಲಿ ಸುಭಾಷಿಣಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಸುಭಾಷಿಣಿ ಅವರ ಈ ದುಡುಕಿನ ನಿರ್ಧಾರದಿಂದ ತಮಿಳು ಕಿರುತೆರೆ ಆಘಾತಕ್ಕೀಡಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಇವರ 430,183 ಫಾಲೋವರ್ಸ್‌ಗಳಿಗೆ ಕೂಡ ಈ ಸುದ್ದಿ ಬರಸಿಡಿಲಿನಂತೆ ಬಡೆದಿದೆ. ಪೊಲೀಸರು
ಸದ್ಯ ಪ್ರಕರಣದ ತನಿಖೆ ನಡೆಸುತ್ತಿದ್ದು ಸುಭಾಷಿಣಿ ಅವರ ಮೊಬೈಲ್ ಫೋನ್ ವಶ ಪಡಿಸಿಕೊಂಡಿದ್ಧಾರೆ. ಪತಿ ಬಿಪಿನ್ ಚಂದ್ರನ್ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ.
Disclaimer : ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.


Click it and Unblock the Notifications











