KBC 16 ;ಅದೊಂದು ಪ್ರಶ್ನೆಗೆ ಉತ್ತರ ನೀಡಿದ್ದರೆ,01 ಕೋಟಿ ಗೆಲ್ಲುತ್ತಿದ್ದ ರಾಜಸ್ಥಾನದ ಈ ಯುವಕ. ಅಷ್ಟರಲ್ಲೇ ಜಸ್ಟ್ ಮಿಸ್...
ತಮ್ಮ 81ನೇ ವಯಸ್ಸಿನಲ್ಲಿಯೂ ಸಾಲು ಸಾಲು ಸಿನಿಮಾಗಳ ಜೊತೆಯಲ್ಲಿ ಹಲವಾರು ಜಾಹೀರಾತು ಮತ್ತು ಕಿರುತೆರೆಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಫುಲ್ ಬ್ಯುಸಿಯಾಗಿರುವವರು ಅಮಿತಾಬ್ ಬಚ್ಚನ್.
ಇಂಥಾ ದಣವರಿಯದ ಮಹಾನಾಯಕ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿಯ ಹದಿನಾರನೇ ಸೀಸನ್‌ನಲ್ಲಿ, ಸ್ಫರ್ಧಿಯೊಬ್ಬರು ಒಂದು ಕೋಟಿ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದ್ದಾರೆ. 50 ಲಕ್ಷಕ್ಕೆ ತೃಪ್ತಿ ಪಟ್ಕೊಂಡಿದ್ದಾರೆ.

ಹೌದು, ರಾಜಸ್ತಾನದ ಉಜ್ವಲ್ ಪ್ರಜಾಪತ್ ಕೊನೆಯ ಹಂತದವರೆಗೆ ಬಂದು ತಲುಪಿದ್ದರು. ಒಂದು ಕೋಟಿ ಗೆಲ್ಲುವ ಸನಿಹ ತಲುಪಿದ್ದರು. ಆದರೆ, ಆ ನಂತರ ಅಮಿತಾಬ್ ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿರದ ಕಾರಣ ಅವಕಾಶ ಕೈ ಚೆಲ್ಲಿದರು. ಅಷ್ಟಕ್ಕೂ ಅಮಿತಾಬ್ ಕೇಳಿದ್ದು ಸಾಧಾರಣ ಪ್ರಶ್ನೆಯೇನು ಆಗಿರಲಿಲ್ಲ. ಬದಲಿಗೆ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿತ್ತು. 1919ರಲ್ಲಿ ಮೊದಲ ಮಹಾಯುದ್ಧದ ನಂತರ ವರ್ಸೈಲ್ಸ್ ಒಪ್ಪಂದಕ್ಕೆ ಭಾರತದ ಪರವಾಗಿ ಸಹಿ ಹಾಕಿದ ರಾಜಪ್ರಭುತ್ವದ ಆಡಳಿತಗಾರ ಯಾರು ಎನ್ನುವ ಪ್ರಶ್ನೆ ಅದು. ಈ ಪ್ರಶ್ನೆಗೆ ಮಹಾರಾಜ ಸವಾಯಿ ಜೈ ಸಿಂಗ್ II, ನಿಜಾಮ್ ಮೀರ್ ಓಸ್ಮಾನ್ ಅಲಿ ಖಾನ್, ನಮಿದ್ ಹಮೀದುಲ್ಲಾ, ಮತ್ತು ಮಹಾರಾಜ ಗಂಗಾ ಸಿಂಗ್. ಹೀಗೆ ಯಥಾಪ್ರಕಾರ ನಾಲ್ಕು ಆಯ್ಕೆಗಳನ್ನು ನೀಡಿದರು.
ಆದರೆ ನಿಖರವಾದ ಉತ್ತರ ಉಜ್ವಲ್ ಪ್ರಜಾಪತ್ ಅವರಿಗೆ ಗೊತ್ತಿರಲಿಲ್ಲ. ಈ ಕಾರಣಕ್ಕೆ ಕಾರ್ಯಕ್ರಮದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಉಜ್ವಲ್ ಬಂದರು. ಐವತ್ತು ಲಕ್ಷ ಸಾಕು ಎಂದರು. ಅದ್ಯಾಗೂ ಹೊರಡುವ ಮುನ್ನ ನಿಮ್ಮ ಪ್ರಕಾರ ಯಾರಿರಬಹುದೆಂದು ಅಮಿತಾಬ್ ಕೇಳಿದರು. ಇದಕ್ಕೆ ಉಜ್ವಲ್, ಮಹಾರಾಜ ಸವಾಯಿ ಜೈ ಸಿಂಗ್ II ಇರಬಹುದು ಎಂಬ ಉತ್ತರವನ್ನು ನೀಡಿದರು. ಆದರೆ ಆ ಉತ್ತರ ತಪ್ಪಾಗಿತ್ತು. ಸರಿಯಾದ ಉತ್ತರ ಮಹಾರಾಜ ಗಂಗಾ ಸಿಂಗ್ ಆಗಿತ್ತು.
ಹೀಗೆ ಒಂದು ಕೋಟಿಯನ್ನು ಸಂಪಾದಿಸುವುದರಿಂದ ಉಜ್ವಲ್ ವಂಚಿತರಾದರೂ ಕೂಡ ಈ ಕಾರ್ಯಕ್ರಮದ ಮೂಲಕ ಅಮಿತಾಬ್ ಬಚ್ಚನ್ ಹೃದಯವನ್ನು ಉಜ್ವಲ್ ಗೆದ್ದರು. ಅಮಿತಾಬ್ ಅವರನ್ನು ಭಾವುಕರನ್ನಾಗಿಸಿದರು. ಹೌದು, ಕಳೆದ 24 ವರ್ಷಗಳಿಂದ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಾ ಬಂದಿರುವ ಅಮಿತಾಬ್, ತಮ್ಮೆದುರು ಕುಳಿತ ವ್ಯಕ್ತಿಗೆ ಪ್ರಶ್ನೆಯನ್ನು ಕೇಳುವುದಷ್ಟೇ ಅಲ್ಲದೇ ಅವರ ಜೊತೆ ಮುಕ್ತವಾಗಿ ಮಾತನಾಡಿಕೊಂಡು ಬಂದಿದ್ದಾರೆ. ಸ್ಫರ್ಧಿಗಳ ಬದುಕಿನ ಸುಖ ದುಃಖವನ್ನೂ ಕೇಳುತ್ತಾ ಬಂದಿದ್ದಾರೆ. ತಾವೂ ನಕ್ಕಿದ್ದಾರೆ.ಸ್ಫರ್ಧಿಗಳನ್ನು ನಗಿಸಿದ್ದಾರೆ. ಸ್ಪರ್ಧಿಗಳು ಕಣ್ಣೀರಾದಾಗ ಅಮಿತಾಬ್ ಕೂಡ ಕಣ್ಣೀರಾಗಿದ್ದಾರೆ.
ಇದಕ್ಕೆ ಮತ್ತೊಂದು ಕೈಗನ್ನಡಿ ಎಂಬಂತೆ ಉಜ್ವಲ್ ಅವರ ಕಥೆಯನ್ನು ಹಿಂದಿನ ಸಂಚಿಕೆಯಲ್ಲಿ ಕೇಳಿದ್ದ ಅಮಿತಾಬ್ ಬಚ್ಚನ್ ಭಾವುಕರಾಗಿದ್ದರು. ತನ್ನ ತಾಯಿ ಬೀಡಿ ಮಾರುತ್ತಾರೆ, ತನ್ನ ಅಜ್ಜಿ ಪಾತ್ರೆಗಳನ್ನು ಮಾರುವ ಮೂಲಕ ಜೀವನದ ಬಂಡಿಯನ್ನೇಳೆಯುತ್ತಿದ್ದಾರೆ ಎಂದು ಉಜ್ವಲ್ ಹೇಳಿದ ಮಾತು ಅಮಿತಾಬ್ ಅವರನ್ನು ವಿಚಲಿತಗೊಳಿಸಿತ್ತು. ತಂದೆ ಕೂಲಿ ಕೆಲಸ ಮಾಡುತ್ತಿದ್ದರು ಆದರೆ ಕುಡಿತದ ಚಟದಿಂದ ಸಾಲದ ಹೊರೆ ನಮ್ಮ ಮೇಲೆ ಬಿತ್ತು ಎಂದು ಉಜ್ವಲ್ ಹೇಳಿದಾಗ ಅಮಿತಾಬ್ ಬಚ್ಚನ್ ಕಣ್ಣಾಲಿಗಳು ತುಂಬಿ ಬಂದಿದ್ದವು. ಆ ನಂತರ ತಮ್ಮನ್ನು ತಾವೇ ಸಮಾಧಾನ ಮಾಡಿಕೊಂಡ ಬಿಗ್ ಬಿ ಇಷ್ಟೆಲ್ಲ ಕಷ್ಟಗಳಿದ್ದರು ನಿಮ್ಮ ಮುಖದಲ್ಲಿ ಹತಾಶೆ ಕಾಣಿಸಲ್ಲ ಬದಲಿಗೆ ನಗುಮೊಗದೊಂದಿಗೆ ಮಾತನಾಡಿತ್ತೀರಿ, ನಿಮ್ಮಲ್ಲಿ ನನಗೆ ತುಂಬಾ ಇಷ್ಟವಾದ ಗುಣ ಅದು ಎಂದು ಉಜ್ವಲ್ ಅವರ ಬೆನ್ನು ತಟ್ಟಿದರು ಅಮಿತಾಬ್.
ಅಂದ್ಹಾಗೇ UPSC ಆಕಾಂಕ್ಷಿಯಾಗಿರುವ 50 ಲಕ್ಷ ಗೆದ್ದ ಉಜ್ವಲ್ ಪ್ರಜಾಪತ್, ಕೊನೆಯ ಪ್ರಶ್ನೆಗೆ ಉತ್ತರ ನೀಡಿದ್ದರೆ ಈ 16ನೇ ಸೀಸನ್‌ನ ಮೊದಲ ಕರೋಡ್‌ಪತಿಯಾಗಿ ಹೊರ ಹೊಮ್ಮುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಹಾಗಾಗಲಿಲ್ಲ. ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಈ ಬಾರಿ ಇನ್ನೂ ಯಾರು ಕರೋಡ್ ಪತಿಯಾಗಿಲ್ಲ.


Click it and Unblock the Notifications











