KBC 16 ; ಮಹಾಭಾರತದ ಉತ್ತರ ಗೊತ್ತಾಗದೆ ಅಮಿತಾಬ್ ಬಚ್ಚನ್ ಮುಂದೆ ಸೋತ ಬೆಂಗಳೂರಿಗ..!
ತಮ್ಮ 81ನೇ ವಯಸ್ಸಿನಲ್ಲಿಯೂ ಸಾಲು ಸಾಲು ಸಿನಿಮಾಗಳ ಜೊತೆಯಲ್ಲಿ ಹಲವಾರು ಜಾಹೀರಾತು ಮತ್ತು ಕಿರುತೆರೆಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಫುಲ್ ಬ್ಯುಸಿಯಾಗಿರುವವರು ಅಮಿತಾಬ್ ಬಚ್ಚನ್.
ಇಂಥಾ ದಣವರಿಯದ ಮಹಾನಾಯಕ ಈಗ ತಮ್ಮ ಬದುಕು ಬದಲಿಸಿದ ಕೌನ್ ಬನೇಗಾ ಕರೋಡ್ ಪತಿಯ ಹದಿನಾರನೇ ಸೀಸನ್‌ನ ಶುಭಾರಂಭ ಮಾಡಿದ್ದಾರೆ. ಕಿರುತೆರೆಯ ಮೂಲಕ ಮತ್ತೆ ಮನೆ ಮನಗಳನ್ನು ತಲುಪುವ ಕೆಲಸ ಶುರುಮಾಡಿದ್ದಾರೆ.

ಹೌದು, ಕೌನ್ ಬನೇಗಾ ಕರೋಡ್ ಪತಿಯ 16ನೇ ಸೀಸನ್ ಮೊನ್ನೆಯಿಂದ ಶುರುವಾಗಿದೆ. ಈ ಬಾರಿ ಕೆಲ ಬದಲಾವಣೆಗಳನ್ನೂ ಮಾಡಲಾಗಿದೆ. ಸೂಪರ್ ಸವಾಲ್ ಮತ್ತು ದುಗ್ನಾಸ್ತ್ರ ಎಂಬ ಎರಡು ಘಟ್ಟಗಳನ್ನೂ ಸೇರಿಸಲಾಗಿದೆ. ಇನ್ನೂ ವಿಶೇಷ ಅಂದರೆ ಈ ಬಾರಿ ಕಾರ್ಯಕ್ರಮದ ಮೊದಲ ಎಪಿಸೋಡ್‌ನಲ್ಲಿ ಹಾಟ್ ಸೀಟ್ ಮೇಲೆ ಕುಳಿತುಕೊಳ್ಳುವ ಸೌಭಾಗ್ಯ ಬೆಂಗಳೂರು ಮೂಲಕ ಉತ್ಕರ್ಷ್ ಬಕ್ಸಿ ಅವರಿಗೆ ಸಿಕ್ಕಿದೆ. ಆದರೆ ಸಿಕ್ಕ ಈ ಸುವರ್ಣ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ವಿಫಲವಾದ ಉತ್ಕರ್ಷ್ 25 ಲಕ್ಷ ಗೆಲ್ಲುವ ಅವಕಾಶ ಕೈ ಚೆಲ್ಲಿದ್ದಾರೆ. 3.5 ಲಕ್ಷಕ್ಕೆ ತೃಪ್ತಿ ಪಟ್ಟಿದ್ದಾರೆ.
ಹೌದು, ಅಸಲಿಗೆ ಕಂಪನಿಯೊಂದರಲ್ಲಿ ಹೆಚ್.ಆರ್. ಆಗಿರುವ ಉತ್ಕರ್ಷ್, ಅಮಿತಾಬ್ ಕೇಳಿದ ಪ್ರಶ್ನೆಗಳಿಗೆ ನಿಖರ ಉತ್ತರ ಕೊಡುತ್ತಿದ್ದರು. 12.50 ಲಕ್ಷವನ್ನು ಗಳಿಸಿದ್ದರು. ಆ ನಂತರ 25 ಲಕ್ಷ ರೂಪಾಯಿಗಳಿಗೆ ಉತ್ಕರ್ಷ್ ಅವರಿಗೆ ಮಹಾಭಾರತದ ಪ್ರಶ್ನೆಯನ್ನು ಬಚ್ಚನ್ ಕೇಳಿದ್ದರು. ಮಹಾಭಾರತದ ಪ್ರಕಾರ ಅಂಬಾಗೆ ಮಾಲೆಯನ್ನು ಉಡುಗೊರೆಯಾಗಿ ನೀಡಿದ ಮತ್ತು ಅದನ್ನು ಧರಿಸಿದವರು ಭೀಷ್ಮನನ್ನು ಕೊಲ್ಲುತ್ತಾರೆ ಎಂದು ಹೇಳಿದ ದೇವರು ಯಾರು? ಉತ್ತರಿಸಿ ಎಂದು ಭಗವಾನ್ ಶಿವ, ಭಗವಾನ್ ಕಾರ್ತಿಕೇಯ, ಭಗವಾನ್ ಇಂದ್ರ ಮತ್ತು ಭಗವಾನ್ ವಾಯು ಹೀಗೆ ಯಥಾಪ್ರಕಾರ ನಾಲ್ಕು ಆಯ್ಕೆಗಳನ್ನು ನೀಡಿದರು.

ಈ ಪ್ರಶ್ನೆ ಉತ್ಕರ್ಷ್ ಬಕ್ಸಿ ಅವರ ಗೊಂದಲಕ್ಕೆ ಕಾರಣವಾಯಿತು. ಹೀಗಾಗಿಯೇ ಲೈಫ್ ಲೈನ್ ಮೊರೆ ಹೋದ ಉತ್ಕರ್ಷ್, ವಿಡಿಯೋ ಕಾಲ್ ಎ ಫ್ರೆಂಡ್ ಬಳಿಸಿದರು.ಇದಕ್ಕೆ ಅವರ ಸ್ನೇಹಿತ ಉತ್ತರ ಭಗವಾನ್ ಶಿವ ಎಂದು ಹೇಳಿದರು. ಆದರೆ, ಉತ್ಕರ್ಷ್ ಅವರಲ್ಲಿದ್ದ ಗೊಂದಲ ಈ ಉತ್ತರದಿಂದ ಪರಿಹಾರವಾಗಲಿಲ್ಲ. ಈ ಕಾರಣಕ್ಕೆ ಕೊನೆಯದಾಗಿ ಉಳಿದಿದ್ದ ಡಬಲ್ ಡಿಪ್ ಲೈಫ್ ಲೈನ್‌ನ್ನೂ ಕೂಡ ಉತ್ಕರ್ಷ್ ಉಪಯೋಗಿಸಿದರು. ಆದರೆ.. ಇಲ್ಲಿಯೂ ಎರಡು ಸಲ ಎಡವಿದರು.
ಯಾಕೆಂದರೆ ಇಲ್ಲಿ ಎರಡು ಉತ್ತರ ಆಯ್ಕೆ ಮಾಡುವ ಅವಕಾಶ ಇತ್ತು. ಈ ಕಾರಣಕ್ಕೆ ಮೊದಲು ಸ್ನೇಹಿತ ಹೇಳಿದ್ದ ಭಗವಾನ್ ಶಿವ ಉತ್ತರವನ್ನು ನೀಡಿದ ಉತ್ಕರ್ಷ ಅದು ತಪ್ಪೆಂದು ಗೊತ್ತಾದ ನಂತರ ಎರಡನೇ ಉತ್ತರವಾಗಿ ಭಗವಾನ್ ವಾಯು ಹೆಸರು ಹೇಳಿದರು. ಆದರೆ, ಉತ್ಕರ್ಷ್ ದುರಾದೃಷ್ಟ ಈ ಉತ್ತರವೂ ಕೂಡ ತಪ್ಪಾಗಿತ್ತು. ಸರಿ ಉತ್ತರ ಭಗವಾನ್ ಶಿವ ಮತ್ತು ಭಗವಾನ್ ವಾಯು ಆಗಿರಲಿಲ್ಲ. ಬದಲಿಗೆ ಭಾಗವಾನ್ ಕಾರ್ತಿಕೇಯ ಆಗಿತ್ತು.

ಒಂದು ವೇಳೆ ಉತ್ಕರ್ಷ್ ಈ ಪ್ರಶ್ನೆಗೆ ಉತ್ತರ ನೀಡದೇ ಆಟ ಬಿಟ್ಟಿದ್ದರೆ 12.5 ಲಕ್ಷದ ಜೊತೆ ಉತ್ಕರ್ಷ್ ಮನೆಗೆ ಮರಳುತ್ತಿದ್ದರು. ಆದರೆ 25 ಲಕ್ಷ ರೂಪಾಯಿಯ ಆಸೆ ಇವರನ್ನು 3.5 ಲಕ್ಷಕ್ಕೆ ಕರೆದುಕೊಂಡು ಬಂತು. ಸದ್ಯಕ್ಕೆ ಈ ಸಂಚಿಕೆಯ ಕ್ಲಿಪ್‌ನ್ನು ಸೋನಿ ಟಿವಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದೆ. ವಿಡಿಯೋ ವೈರಲ್ ಆಗುತ್ತಿದೆ.


Click it and Unblock the Notifications











