BBK12: ಬಿಗ್‌ಬಾಸ್ ಪಂಚಾಯ್ತಿಯಲ್ಲಿ ಕೆಲವರಿಗೆ ಮಾತ್ರ ಬೈಯ್ಯೋದ್ಯಾಕೆ? ಸುದೀಪ್ ಪ್ರತಿಕ್ರಿಯೆ
ಕನ್ನಡ ಬಿಗ್‌ಬಾಸ್ ಸೀಸನ್ 12 ಯಶಸ್ವಿಯಾಗಿ 70 ದಿನ ಪೂರೈಸಿ 100ನೇ ದಿನದತ್ತ ಮುನ್ನುಗ್ಗುತ್ತಿದೆ. ಅಷ್ಟು ಸೀಸನ್‌ಗಳನ್ನು ಕಿಚ್ಚ ಸುದೀಪ್ ನಿರೂಪಣೆ ಮಾಡಿ ಗೆದ್ದಿದ್ದಾರೆ. ನಡುವೆ ಒಮ್ಮೆ ಶೋ ನಿರೂಪಣೆ ಮಾಡಲ್ಲ ಎಂದುಬಿಟ್ಟಿದ್ದ ಕಿಚ್ಚ ಬಳಿಕ ನಿರ್ಧಾರ ಬದಲಿಸಿಕೊಂಡಿದ್ದರು. ಅವರ ನಿರೂಪಣೆಗೆ ದೊಡ್ಡ ಅಭಿಮಾನಿ ಬಳಗವಿದೆ.
ಹಿಂದಿ ಬಳಿಕ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿ ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ಶುರುವಾಯಿತು. ಆದರೆ ಕನ್ನಡದಲ್ಲಿ ಎಲ್ಲಾ ಸೀಸನ್‌ಗಳನ್ನು ಏಕಾಂಗಿಯಾಗಿ ನಿರೂಪಣೆ ಮಾಡುತ್ತಾ ಬರುತ್ತಿರುವುದು ಸುದೀಪ್ ಹೆಗ್ಗಳಿಕೆ. ವೀಕೆಂಡ್ ಎಪಿಸೋಡ್‌ಗಳಲ್ಲಿ ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಳ್ಳುವ ಕಿಚ್ಚ ಉತ್ತಮವಾಗಿ ಆಡಿದವರಿಗೆ ಮೆಚ್ಚುಗೆ ಸೂಚಿಸುತ್ತಾರೆ. ಸುದೀಪ್ ಕೆಲವರಿಗೆ ಮಾತ್ರ ಬೈಯ್ತಾರೆ ಎಂದು ಕೆಲ ವೀಕ್ಷಕರು ಆರೋಪಿಸುತ್ತಾರೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹಾಗಾಗಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಟಿವಿ9 ವಾಹಿನಿ ಸಂದರ್ಶನದಲ್ಲಿ ಕೂಡ ಕಿಚ್ಚ ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಶೋ ಬಗ್ಗೆ ಮಾತನಾಡಿ ಎಲ್ಲರಿಗೂ ಬೈದು ಪ್ರಯೋಜನವಿಲ್ಲ. ಚೆನ್ನಾಗಿ ಆಡುವವರು, ಫಿನಾಲೆವರೆಗೂ ಹೋಗಬೇಕಾದವರು ತಪ್ಪು ಮಾಡಿದಾಗ ತಿಳಿಹೇಳಿ ತಿದ್ದಬೇಕು. ಅದನ್ನೇ ನಾನು ಮಾಡ್ತೀನಿ ಎಂದು ಹೇಳಿದ್ದಾರೆ.
ಸುದೀಪ್ ಮಾತನಾಡಿ "ಕೆಲವ್ರು ಹೇಳ್ತಾರೆ ಸುದೀಪ್ ತುಂಬಾ ಗರಂ ಆಗಿಬಿಟ್ರು, ಬೈದ್ಬಿಟ್ರು ಅಂತಾರೆ. ಕೆಲ ಎಪಿಸೋಡ್‌ಗಳಲ್ಲಿ ಬೈಯಲು ಕಾರಣ ಏನಂದ್ರೆ ಅವ್ರು ಚೆನ್ನಾಗಿ ಆಡಿಲ್ಲ ಅಂತಲ್ಲ, ಚೆನ್ನಾಗಿ ಆಡ್ತಿದ್ದೀರಿ. ಇವತ್ತು ನಾನು ಬೈದು ತಿದ್ದುತ್ತಿದ್ದೀನಿ. ನೀವು ಫಿನಾಲೆವರೆಗೂ ಹೋಗುವವರು, ಹಾಳಾಬೇಡಿ. ಮಧ್ಯದಲ್ಲೇ ಬರೋರು, ಹಾಳಾಗ್ತೀರಾ ಅಂತ ಗೊತ್ತಿದ್ದಾಗ ಸುಮ್ಮನೆ ಎನರ್ಜಿ ಹಾಕುವುದಕ್ಕೆ ಹೋಗಲ್ಲ. ಹೇಗಿದ್ರು ನೀವು ಆಡ್ತಿಲ್ಲ.. ಹಾಗಾಗಿ ಅಂತವರನ್ನು ತಿದ್ದಲು ಟ್ರೈ ಮಾಡಿ ಹೊರಗಡೆ ಕರೀತ್ತೀವಿ" ಎಂದು ಸುದೀಪ್ ಹೇಳಿದ್ದಾರೆ.
ಫಿನಾಲೆಗೆ ಹೋಗುವಂತವರು ಅರ್ಧದಲ್ಲೇ ಹೊರಬಂದಿದ್ದಾರೆ. ಅಂತಹವರನ್ನು ತಿದ್ದಬೇಕು. ಬೇಸರಗೊಂಡರೂ ಪರವಾಗಿಲ್ಲ, ಬೈಯ್ತೀನಿ ಎಂದು ಸುದೀಪ್ ಹೇಳಿದ್ದಾರೆ. "ಆಗ ಅವ್ರು ಅಂದುಕೊಳ್ಳಬಹುದು, ಅವರಿಗೆ ಬೈಯಲಿಲ್ಲ. ಇವರಿಗೆ ಯಾಕೆ ಬೈದ್ರು ಅಂತ. ಕಾರಣ ಇರುತ್ತೆ. ಇಷ್ಟು ವರ್ಷ ಕಾರ್ಯಕ್ರಮ ನಡೆಸಬೇಕು ಅಂದ್ರೆ ಏನೋ ಕಾರಣ ಇರಬೇಕು. ಕೆಲವೊಮ್ಮೆ ಆಗುತ್ತದೆ. ನಾನು ವೇದಿಕೆ ಏರುವ ಮುನ್ನ ಎಲ್ಲರಿಗೂ ಹೇಳ್ತಿರ್ತೀನಿ. ನನಗೆ ಮೂಡ್ ಔಟ್ ಮಾಡಬೇಡಿ. ಆ ಕೋಪವನ್ನು ಸ್ಪರ್ಧಿಗಳ ಮೇಲೆ ತೋರಿಸಿಬಿಡ್ತೀನಿ, ಸುಮ್ನೆ ಕಷ್ಟ ಆಗಿಬಿಡುತ್ತೆ" ಎಂದು ವಿವರಿಸಿದ್ದಾರೆ.
ಬರ್ತಾ ಬರ್ತಾ ವೀಕ್ಷಕರು ಬಿಗ್‌ಬಾಸ್ ಶೋ ನಮ್ಮದು ಎಂದು ಭಾವಿಸಲು ಆರಂಭಿಸಿದ್ದಾರೆ. ಸೀಸನ್ ಶುರುವಾದಾಗ ಸಾಕಷ್ಟು ಪೇಜ್‌ಗಳು ಕ್ರಿಯೇಟ್ ಆಗುತ್ತವೆ. ಪೋಸ್ಟ್, ರಿವ್ಯೂ ಕೊಡುತ್ತಾರೆ. ಶೋ ಎಷ್ಟೋ ಜನಕ್ಕೆ ಕೆಲಸ ಹುಟ್ಟು ಹಾಕುತ್ತದೆ. ಕೆಲವರು ನೆಗೆಟಿವ್ ಮಾತನಾಡುತ್ತಾರೆ. ಆದರೆ ಏನು ಮಾಡಲು ಆಗಲ್ಲ. ಸಾಕಷ್ಟು ಜನಕ್ಕೆ ಬಿಗ್‌ಬಾಸ್ ಇಂದ ಒಂದಷ್ಟು ಹಣ ಸಿಗಬಹುದು. ಒಳ್ಳೆಯದಾಗಲಿ ಎಂದು ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12 ಈಗಾಗಲೇ 80ನೇ ದಿನಕ್ಕೆ ಕಾಲಿಟ್ಟಿದೆ. ಈ ವೀಕೆಂಡ್ ಡಬಲ್ ಎಲಿಮಿನೇಷನ್ ಟ್ವಿಸ್ಟ್ ಸಿಕ್ಕಿದೆ. ಧ್ರುವಂತ್ ಹಾಗೂ ರಕ್ಷಿತಾ ಸೀಕ್ರೆಟ್ ರೂಮ್‌ಗೆ ಬಂದಿದ್ದಾರೆ. ಆದರೆ ಸ್ಪರ್ಧಿಗಳ ಲೆಕ್ಕದಲ್ಲಿ ಎಲಿಮಿನೇಷನ್ ಆಗಿ ಮನೆಯಿಂದ ಹೊರ ಬಂದಂತಾಗಿದೆ. ಹಾಗಾಗಿ ಹೊಸ ಆಟ ಶುರುವಾಗಿದೆ. ಮುಂದೆ ಏನೆಲ್ಲಾ ಟ್ವಿಸ್ಟ್ ಸಿಗುತ್ತೆ ಕಾದು ನೋಡಬೇಕಿದೆ.


Click it and Unblock the Notifications











