ಹುಚ್ಚ.. ಕಾಶಿ.. ಕಿಚ್ಚನ ಮನ ಗೆದ್ದ ಮುಗ್ದ ಮಲ್ಲಮ್ಮ ; ಬಿಗ್ ಬಾಸ್ ಮನೆಯಲ್ಲಿ ಮಲ್ಲಮ್ಮನ ಪವಾಡ
''ಬಿಗ್ ಬಾಸ್'' ಕುತೂಹಲದ ಗೂಡು. ಪ್ರತಿ ವರ್ಷ ಈ ಗೂಡಲ್ಲಿ ಬಂದು 100ಕ್ಕೂ ಅಧಿಕ ದಿನ ವಾಸ ಮಾಡುವರು ಯಾರು ಎನ್ನುವ ಜಿಜ್ಞಾಸೆ ಸಾಮಾನ್ಯವಾಗಿ ಹಲವು ಸಾಮಾನ್ಯರಲ್ಲಿ ಇದ್ದೇ ಇರುತ್ತೆ. ಇನ್ನೂ ಬಿಗ್ ಬಾಸ್ ಹಲವರ ಕನಸು ಕೂಡ ಹೌದು. ಕೇವಲ ಕಿರುತೆರೆ ಬೆಳ್ಳಿತೆರೆಯಲ್ಲಿ ಹೆಸರು ಮಾಡಿದವರಷ್ಟೇ ಅಲ್ಲ ಜನಸಾಮಾನ್ಯರು ಕೂಡ ಪ್ರತಿ ವರ್ಷ...
ಈ ಬಿಗ್ ಬಾಸ್ ಮನೆಯ ಭಾಗವಾಗಬೇಕೆಂಬ ಕನಸು ಕಾಣುತ್ತಾರೆ. ಆದರೆ.. ಈ ಕನಸು ನನಸಾಗುವುದು ಸುಲಭ ಅಲ್ಲ. ಯಾಕೆಂದರೆ ಬಿಗ್ ಬಾಸ್ ಮನೆಯ ಬಾಗಿಲು ತೆರೆಯುವುದು.. ಅದೃಷ್ಟವಂತರಿಗೆ ಮಾತ್ರ. ಉದಾಹರಣೆಗೆ ಮಲ್ಲಮ್ಮ.

ಹೌದು, ಮಲ್ಲಮ್ಮ ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದವರು. ಜೀವನೋಪಾಯಕ್ಕೆ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ, ಆ ನಂತರ ಗಾರೆ ಕೆಲಸ ಕೂಡ ಮಾಡಿದರು. ಆದರೆ.. ಫ್ಯಾಷನ್ ಬೋಟಿಕ್‌ನಲ್ಲಿ ಇವರ ಅದೃಷ್ಟ ಇತ್ತು.
ತನ್ನ ಮಾತುಗಾರಿಕೆಯಿಂದ ಎಲ್ಲರನ್ನು ತನ್ನತ್ತ ಆಯಸ್ಕಾಂತದಂತೆ ಸೆಳೆಯಲು ಶುರು ಮಾಡಿದ ಮಲ್ಲಮ್ಮ, ತಾವು ಕೆಲಸ ಮಾಡುತ್ತಿದ್ದ ಫ್ಯಾಷನ್ ಬೋಟಿಕ್‌ನ ಯಜಮಾನಿಯ ಸಹಕಾರ ಸಹಾಯ ಮತ್ತು ಬೆಂಬಲದಿಂದ ಸೋಶಿಯಲ್ ಮೀಡಿಯಾದಲ್ಲಿ ಕೆಲ ವರ್ಷದ ಹಿಂದೆ ವೈರಲ್ ಆದರು. ಇನ್ಸ್ಟಾಗ್ರಾಮ್‌ನಲ್ಲಿ 1.74 + ಲಕ್ಷ ಯೂಟ್ಯೂಬ್‌ನಲ್ಲಿ 16.4 ಸಾವಿರ ಹಿಂಬಾಲಕರನ್ನು ಹೊಂದಿದ ಮಲ್ಲಮ್ಮ ಸದ್ಯ ''ಬಿಗ್ ಬಾಸ್'' ಮನೆ ಪ್ರವೇಶಿಸಿದ್ದಾರೆ. ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಇವರ ಮುಗ್ದ ಮಾತುಗಳಿಗೆ ವೇದಿಕೆಯಲ್ಲಿ ಮನಸು ಸೋತಿದ್ದಾರೆ.

ಇಂದು ಪ್ರಸಾರವಾದ (ಸೆಪ್ಟೆಂಬರ್ 29) ''ಬಿಗ್ ಬಾಸ್'' ಗ್ರ್ಯಾಂಡ್ ಲಾಂಚ್ ಕಾರ್ಯಕ್ರಮದಲ್ಲಿ ಮಲ್ಲಮ್ಮ ಅವರನ್ನು ವೇದಿಕೆಗೆ ಕರೆದ ಸುದೀಪ್, ಮಲ್ಲಮ್ಮ ಅವರಿಂದ ಅವರ ನೆಚ್ಚಿನ ಮತ್ತು ಅವರಿಗೆ ಹೆಸರು ನೀಡಿದ ಲೆವಂಟಿ (ಲೆಮನ್) ಟೀ ಮಾಡುವ ವಿಧಾನ ಕೇಳಿದರು. ಮಲ್ಲಮ್ಮ ಅವರ ಉತ್ತರ ಕರ್ನಾಟಕ ಭಾಷೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ತುಂಬಾ ಸ್ಪೀಡ್‌ನಲ್ಲಿ ಮಾತನಾಡಬೇಡಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಕೂಡ ಹೇಳಿದರು.
ಆದರೂ ಕೂಡ ಮಲ್ಲಮ್ಮ ತಮ್ಮತನವನ್ನು ತಮ್ಮ ನೇರವಂತಿಕೆಯನ್ನು ವೇದಿಕೆಯಲ್ಲಿ ಬಿಡಲಿಲ್ಲ. ಬದಲಿಗೆ ತಾವು ಇರುವುದು ಹೀಗೆ ಎಂಬ ಸಂದೇಶವನ್ನು ಕೂಡ ರವಾನೆ ಮಾಡಿದರು. ಆ ನಂತರ ಸುದೀಪ್ ಕಾರ್ಯಕ್ರಮದ ರೂಪ ರೇಶೆ ಹೇಳಲು ಹೋದಾಗ ಮತ್ತು ಮನೆಯಲ್ಲಿನ ವಾತಾವರಣ ಹೇಗೆ ನಿಭಾಯಿಸುತ್ತೀರಾ ಎಂದು ಕೇಳಿದಾಗ ಕೂಡ ನಿರ್ಭಿಡೆಯಿಂದ ಮಲ್ಲಮ್ಮ ಉತ್ತರ ನೀಡಿದರು. ಜಗಳ ಮಾಡೋದು ಗೊತ್ತು ಜಗಳ ಬಿಡಿಸುವುದು ಕೂಡ ಗೊತ್ತು ಎಂದರು.
ಎಲ್ಲಕ್ಕಿಂತ ಮುಖ್ಯವಾಗಿ ಸುದೀಪ್ ಅವರ 25 + ವರ್ಷದ ವೃತ್ತಿ ಜೀವನಕ್ಕೆ ತಮ್ಮದೇ ಶೈಲಿಯಲ್ಲಿ ಮಲ್ಲಮ್ಮ ಕೈಗನ್ನಡಿ ಹಿಡಿದಾಗ ಇಡೀ ಸಭಾಂಗಣದಲ್ಲಿ ನಗೆಯ ಬುಗ್ಗೆ ಎದ್ದಿತ್ತು. ತಾವು ನೋಡಿದ್ದು ಹುಚ್ಚ ಮತ್ತು ಕಾಶಿ ಚಿತ್ರ ಮಾತ್ರ ಎಂದಾಗ ಖುದ್ದು ಗಲಿಬಿಲಿಗೊಳಗಾದ ಸುದೀಪ್ ಆ ನಂತರ ಮಲ್ಲಮ್ಮನ ಅವರ ಉತ್ತರವನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸಿದರು. ಬೇಸರ ಮಾಡಿಕೊಳ್ಳದೇ ಖುಷಿ ಪಟ್ಟರು. ನಿಮ್ಮಿಂದ ಮನೆಗೆ.. ಮನೆಯಿಂದ ನಿಮಗೆ ಒಳ್ಳೆಯದಾಗಲಿ ಎಂದು ಮಲ್ಲಮ್ಮ ಅವರಿಗೆ ಮನಸಾರೆ ಶುಭ ಕೋರಿ ಮನೆಯೊಳಗಡೆ ಕಳುಹಿಸಿದರು.
ಸದ್ಯ ಈ ವರ್ಷದ ಪ್ರಬಲ ಸ್ಫರ್ಧಿಗಳಲ್ಲಿ ಮಲ್ಲಮ್ಮ ಇರುತ್ತಾರಾ ಇಲ್ವಾ ಗೊತ್ತಿಲ್ಲ. ಆದರೆ ಹಲವರು ಮಲ್ಲಮ್ಮ ಅವರ ಪರ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿಯ ಕಪ್ ಮಲ್ಲಮ್ಮ ಅವರೇ ಗೆಲ್ಲುವುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











