BBK 11 ; ಮುಂದಿನ ವರ್ಷ ಬಿಗ್ ಬಾಸ್ ನಿರೂಪಣೆ ಮಾಡ್ತಾರಾ ಸುದೀಪ್ ? ವೇದಿಕೆ ಮೇಲೆ ಕಿಚ್ಚ ಹೇಳಿದ್ದೇನು ?
ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಸುದೀಪ್ ತಾವು ಅತ್ಯುತ್ತಮ ನಿರೂಪಕ ಕೂಡ ಹೌದು ಎನ್ನುವುದನ್ನು ಕಳೆದ ಹತ್ತು ವರ್ಷಗಳ ಹಿಂದೆಯೇ ಸಾಬೀತು ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಇಂಥಾ ಸುದೀಪ್ ಈಗ ಬಿಗ್ ಬಾಸ್ ಕಾರ್ಯಕ್ರಮಕ್ಕೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ. ಈ ಹನ್ನೊಂದನೇ ಆವೃತ್ತಿಯೇ ನನ್ನ ಪಾಲಿಗೆ ಕೊನೆಯ ಬಿಗ್ ಬಾಸ್ ಎಂದಿದ್ದಾರೆ. ಸಹಜವಾಗಿ ಸುದೀಪ್ ಅವರ ಈ ನಿರ್ಧಾರ ಅನೇಕರಿಗೆ ಬೇಸರವನ್ನುಂಟು ಮಾಡಿದೆ. ಯಾಕೆಂದರೆ.. ಎಲ್ಲರಿಗೆ ಗೊತ್ತಿರುವಂತೆ ಬಿಗ್ ಬಾಸ್ ಸುದೀಪ್ ಅವರ ಪಾಲಿಗೆ ಸೈಡ್ ಪ್ರಾಜೆಕ್ಟ್ ಆಗಿರಲಿಲ್ಲ. ಅದು ಅವರ ಪಾಲಿಗೆ ಎರಡನೇ ಮನೆಯಾಗಿತ್ತು. ಬದುಕಿನ ಬಹುಮುಖ್ಯವಾದ ಭಾಗವಾಗಿತ್ತು. ಖುದ್ದು ಸುದೀಪ್ ಈ ಮಾತನ್ನು ಈ ಹಿಂದೆ ಹೇಳಿದ್ದರು ಕೂಡ.

ಇನ್ನೂ.. ಈ ಹನ್ನೊಂದು ವರ್ಷದಲ್ಲಿ ಬಿಗ್ ಬಾಸ್ ಪ್ರಸಾರ ಮಾಡುವ ವಾಹಿನಿ ಬದಲಾದರೂ ಕೂಡ ಸುದೀಪ್ ಬದಲಾಗಲಿಲ್ಲ. ಯಥಾ ಪ್ರಕಾರ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಾನೇ ಬಂದಿದ್ದರು. ಇವರ ನಿರೂಪಣೆ ಜನರ ಹೃದಯಕ್ಕೆ ಎಷ್ಟರ ಮಟ್ಟಿಗೆ ಹತ್ತಿರವಾಗಿತ್ತು ಅಂದರೆ ವಾರದ ಕೊನೆಯಲ್ಲಿ ಸುದೀಪ್ ಅವರು ಬರೋದನ್ನೇ ಕಾದು ಜನ ಕಾರ್ಯಕ್ರಮ ನೋಡುತ್ತಿದ್ದರು. ಇವೆಲ್ಲ ಕಾರಣಗಳಿಂದ ಬಿಗ್ ಬಾಸ್ ಜೊತೆ ಎಲ್ಲರಿಗೆ ಒಂದು ರೀತಿಯ ಅವಿನಾಭಾವ ಸಂಬಂಧ ಬೆಸೆದಿತ್ತು. ಆದರೆ ಈಗ ಆ ಸಂಬಂಧದ ಕೊಂಡಿ ಕಳಚಿ ಬಿದ್ದಿದೆ. ಇದರ ಜೊತೆಗೆ ಬಿಗ್ ಬಾಸ್ ಮುಂದೆ ದಿಕ್ಕು ಯಾರು ಎನ್ನುವ ಪ್ರಶ್ನೆ ಕೂಡ ಎದ್ದಿದೆ.
ಈ ಪ್ರಶ್ನೆಗೆ ಈಗ ಖುದ್ದು ಸುದೀಪ್ ಉತ್ತರ ನೀಡಿದ್ದಾರೆ. ಎರಡು ಮೂರು ಹೆಸರು ಕೇಳಿ ಬರುತ್ತಿವೆ ಅಂದಿದ್ದಾರೆ. ಹೌದು, ಅಮ್ಮ ಅಗಲಿದ ನೋವಲ್ಲಿಯೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲು ಬಂದಿದ್ದ ಸುದೀಪ್ ಎಂದಿನಂತೆ ವಾರದ ಲೆಕ್ಕ ಬಗೆಹರಿಸುತ್ತಿದ್ದರು. ವಾದ ವಿವಾದ ಆಲಿಸಿ ತಮ್ಮ ಶೈಲಿಯಲ್ಲಿ ತಿದ್ದಿ ತೀಡುತ್ತಿದ್ದರು. ಈ ಸಮಯದಲ್ಲಿ ಮೋಕ್ಷಿತಾ ಮತ್ತು ತ್ರಿವಿಕ್ರಮ್ ನಡುವೆ ನಡೆದ ಗಲಾಟೆಯ ಕುರಿತು ಮಾತನಾಡಿದರು. ತ್ರಿವಿಕ್ರಮ್ ಮೇಲೆ ನಿಮ್ಮ ಕೋಪಕ್ಕೆ ಕಾರಣವೇನು ? ಮೊದಲೇ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಕೇಳಿದರು. ಆ ನಂತರ ಮನಸಿನ ಮಾತು ಹೇಳೋಕೆ ಯಾರ ಅಪ್ಪಣೆ ಬೇಡ ಎಂದು ಹೇಳಿದ ಸುದೀಪ್, ನಿಮ್ಮ ಬಗ್ಗೆ ಅವರಲ್ಲಿ ಏನೋ ಅಭಿಪ್ರಾಯ ಇದೆ ಅಂದರೆ ಅದಕ್ಕೆ ನೀವ್ಯಾಕೇ ಅಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದೀರಾ ? ಎಂದು ಕೇಳಿದರು. ತ್ರಿವಿಕ್ರಮ್ ನಿಮ್ಮ ಗೆಳೆಯರಾ ? ನಿಮ್ಮ ಕುಟುಂಬದ ಸದಸ್ಯರಾ ? ಎಂದು ಪ್ರಶ್ನೆ ಮಾಡಿದರು. ಮೌನವಾಗಿರುವುದು ನಿಮ್ಮದೇ ತಪ್ಪಾಗುತ್ತೆ. ಲಿಸ್ಟ್ ನೋಡಿಕೊಂಡು ಯಾರೇ ಮನೆಯೊಳಗೆ ಬಂದಿರಲಿ, ಅವರಿಗೆ ನಿಮ್ಮ ವ್ಯೆಯಕ್ತಿಕ ಜೀವನದ ಬಗ್ಗೆಯಾಗಲಿ, ನಿಮ್ಮ ವ್ಯಕ್ತಿತ್ವವಾಗಲಿ, ನಿಮ್ಮ ಛಲದ ಬಗ್ಗೆಯಾಗಲಿ ಅರಿವು ಇರುವುದಿಲ್ಲ ಎಂದು ಹೇಳಿದರು.
ಮುಂದುವರೆದು ವರ್ಷಗಳಿಂದ ಈ ಬಿಗ್ ಬಾಸ್ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇನೆ, ಆದರೆ ಈಗ ಈ ಬಿಗ್ ಬಾಸ್ ಸಹವಾಸ ಸಾಕು, ನಾನು ಬಿಡುತ್ತೇನೆ ಎಂದು ಹೇಳಿದ್ದೇನೆ ಎಂದ ಸುದೀಪ್, ಮುಂದಿನ ವರ್ಷದಿಂದ ಬಿಗ್ ಬಾಸ್ ಯಾರು ನಡೆಸಬಹುದು ಎಂದು ಎರಡು ಮೂರು ಹೆಸರುಗಳು ಓಡಾಡುತ್ತಿವೆ, ಅದೆಲ್ಲ ನೋಡುತ್ತಾ, ಯಾರು ಮಾಡ್ತಾರೆ ಎಂದು ನಾನು ಯೋಚ್ನೇ ಮಾಡ್ತಾ ಕೂರಲಾ ಅಥವಾ ಈ ವೇದಿಕೆಗೆ ನನ್ನಿಂದ ಎಷ್ಟು ತೂಕ ಇದೆ ಅಂತ ಕಾನ್ಫಿಡೆಂಟ್ ಆಗಿ ಇರಲಾ ? ಎಂದು ಪ್ರಶ್ನೆಯನ್ನು ಮಾಡಿದರು. ನಿಮ್ಮ ಶಕ್ತಿ, ನಿಮ್ಮ ಯುಕ್ತಿ, ನಿಮ್ಮ ಹೋರಾಟ ನಿಮ್ಮದು, ಬೇರೆಯವರ ಅಭಿಪ್ರಾಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಲಹೆಯನ್ನು ನೀಡಿದರು.
ಸುದೀಪ್ ಅವರ ಈ ಮಾತುಗಳಿಂದ ಈಗ ಅನೇಕರಿಗೆ ಸಹಜವಾಗಿ ಬೇಸರವಾಗಿದೆ. ಮುಂದಿನ ವರ್ಷದಿಂದ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಕಾಣಿಸಲ್ವಾ ಎನ್ನುವ ಪ್ರಶ್ನೆ ಮತ್ತೊಮ್ಮೆ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ಮನಸ್ತಾಪಗಳನ್ನು ಬಗೆಹರಿಸಿಕೊಂಡು ಸುದೀಪ್ ಮುಂದಿನ ವರ್ಷ ಮತ್ತೆ ಬರ್ತಾರೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ ಸುದೀಪ್ ಯಾವುದೇ ಕಾರಣಕ್ಕೂ ಮರಳಿ ಬಿಗ್ ಬಾಸ್ ಮನೆಗೆ ಬರಬಾರದು ಎಂದು ತೀರ್ಮಾನ ಮಾಡಿದಂತೆ ಇದೆ. ಸುದೀಪ್ ಜಾಗವನ್ನು ಬಿಗ್ ಬಾಸ್ ಮನೆಯಲ್ಲಿ ಯಾರು ತುಂಬ್ತಾರೆ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











