'ಈ ಮನೆ ಅದಕ್ಕಲ್ಲ' ಎಂದು ರೂಪೇಶ್-ಸಾನ್ಯಾಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ; ಈ ಪಾಠದ ಅಗತ್ಯತೆ ಮುಂಚೆಯೇ ಇತ್ತು!
ಸದ್ಯ ಬಿಗ್ ಬಾಸ್ ಕನ್ನಡ ಒಂಬತ್ತನೇ ಆವೃತ್ತಿ ನಡೆಯುತ್ತಿದೆ. ಭಿನ್ನ ವಿಭಿನ್ನ ಮನಸ್ಥಿತಿಯುಳ್ಳ ಸ್ಪರ್ಧಿಗಳು, ಅವರ ನಡವಳಿಕೆ ಹಾಗೂ ಮಾತುಗಳು ನೋಡುಗರಿಗೆ ಒಳ್ಳೆಯ ಮನರಂಜನೆಯನ್ನೇ ನೀಡ್ತಿದೆ.
ಇಷ್ಟು ವರ್ಷಗಳ ಹಾಗಿರದ ಈ ಬಾರಿಯ ಬಿಗ್ ಬಾಸ್ ಕನ್ನಡ ತುಸು ವಿಭಿನ್ನವೆಂದೇ ಹೇಳಬಹುದು. ಒಂಬತ್ತನೇ ಬಿಗ್ ಬಾಸ್ ಸೀಸನ್ ಆರಂಭವಾಗುವ ಮುನ್ನ ಓಟಿಟಿ ಸೀಸನ್ ನಡೆಸಲಾಯಿತು. ಈ ಓಟಿಟಿ ಆವೃತ್ತಿಯ ಟಾಪ್ 4 ಸ್ಪರ್ಧಿಗಳ ಜತೆ ಹಳೆಯ ಬಿಗ್ ಬಾಸ್ ಆವೃತ್ತಿಗಳಲ್ಲಿ ಭಾಗವಹಿಸಿದ್ದ ಕೆಲ ಆಯ್ದ ಸ್ಪರ್ಧಿಗಳು ಹಾಗೂ 'ನವೀನರು' ಸೇರಿದಂತೆ ಒಟ್ಟು 18 ಮಂದಿ ಬಿಗ್ ಬಾಸ್ ಮನೆ ಪ್ರವೇಶಿಸಿದರು.
ಹೀಗೆ ಒಳ್ಳೆಯ ಮನರಂಜನೆ ನೀಡುವಂತಹ ಸ್ಪರ್ಧಿಗಳನ್ನು ಒಳಗೊಂಡಿರುವ ಬಿಗ್ ಬಾಸ್ ಶೋ ಸದ್ಯ 22 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. 22ನೇ ದಿನದಂದು ನಡೆದ ವಾರಾಂತ್ಯದ ಸಂಚಿಕೆಯಲ್ಲಿ ಸದಸ್ಯರ ಜತೆ ಮಾತನಾಡಿದ ಕಿಚ್ಚ ಸುದೀಪ್ ನಾಯಕನ ಕೊಠಡಿಯಲ್ಲಿ ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಮಿತಿ ಮೀರಿ ವರ್ತಿಸಿದರು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.

ಓಟಿಟಿಯಲ್ಲಿದು ಸಮಸ್ಯೆಯಾಗಿರಲಿಲ್ಲ
ಇನ್ನು ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ತುಂಬ ಕ್ಲೋಸ್ ಆಗಿರುವುದು ಸದ್ಯ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಸುದೀಪ್ ಚರ್ಚಿಸಿದ್ದಾರೆ. ಆದರೆ ಈ ಜೋಡಿ ಓಟಿಟಿಯಲ್ಲಿ ಇದೇ ರೀತಿ ನಡೆದುಕೊಂಡಾಗ ಯಾರೂ ಸಹ ಈ ಕುರಿತು ಪ್ರಶ್ನೆ ಎತ್ತಿರಲಿಲ್ಲ. ಅಂದು ಸ್ವತಂತ್ರ ಕೊಟ್ಟು ಇಂದು ಸರಿಪಡಿಸುವುದು ಎಷ್ಟು ಸರಿ, ಅಂದೇ ಈ ಕುರಿತಾಗಿ ದನಿ ಎತ್ತಿದ್ದರೆ, ಕ್ಲಾಸ್ ತೆಗೆದುಕೊಂಡಿದ್ದರೆ ಇಂದು ಪ್ರತ್ಯೇಕವಾಗಿ ಇಬ್ಬರು ಸ್ಪರ್ಧಿಗಳನ್ನು ಈ ಮಟ್ಟಿಗೆ ತಿಳಿಹೇಳಿ ಸರಿಪಡಿಸುವಂತಹ ಪ್ರಮೇಯವೇ ಇರುತ್ತಿರಲಿಲ್ಲ.

ಇಮೇಜ್ ಹದಗೆಡಬಹುದು
ಇನ್ನು ಮೊದಲೇ ಹೇಳಿದಂತೆ ಓಟಿಟಿಯಲ್ಲಿ ಸ್ವತಂತ್ರ ಕೊಟ್ಟು ಈಗ ಸ್ಪರ್ಧಿಗಳ 'ನಡವಳಿಕೆ' ನಿಯಮಕ್ಕೆ ತಕ್ಕಂತೆ ಇಲ್ಲ ಎಂದು ಹೇಳಿದ್ದರಿಂದ ಆ ಸ್ಪರ್ಧಿಗಳ ಕುರಿತು ಜನರಲ್ಲಿ ಕೆಟ್ಟ ಮನೋಭಾವ ಮೂಡಬಹುದು ಹಾಗೂ ಇದು ಆ ಸ್ಪರ್ಧಿಗಳು ಮನೆಯಿಂದ ಹೊರ ಹೋದ ನಂತರವೂ ಮುಂದುವರಿಯಬಹುದು. ಮನೆಯಲ್ಲಿದ್ದಾಗ ಸ್ಪರ್ಧಿಗಳ ನಡುವೆ ಇದ್ದ ಸಂಬಂಧ ಹೊರಗಡೆ ಹೋದ ಮೇಲೂ ಉಳಿದಿದೆ ಎಂದ ಮೇಲೆ ಈ ಆರೋಪವು ಸಹ ಈ ಇಬ್ಬರು ಸ್ಪರ್ಧಿಗಳ ವೃತ್ತಿ ಜೀವನದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯುವುದರಲ್ಲಿ ಎರಡು ಮಾತಿಲ್ಲ.

ಕಣ್ಣೀರಿಟ್ಟ ರೂಪೇಶ್ ಶೆಟ್ಟಿ
ಬಿಗ್ ಬಾಸ್ ಓಟಿಟಿ ಆವೃತ್ತಿಯಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ ಸ್ಪರ್ಧಿ ಈಗ ತನ್ನ ಮೇಲೆ ಬಂದ ಆರೋಪಗಳಿಂದ ಕಣ್ಣೀರಿಟ್ಟಿದ್ದಾನೆ. ತಾಯಿಯ ಮೇಲೆ ಪ್ರಮಾಣ ಮಾಡಿ ಮಾತನಾಡಿದ ರೂಪೇಶ್ ಶೆಟ್ಟಿ ಕೆಟ್ಟ ಉದ್ದೇಶದೊಂದಿಗೆ ನಡೆದುಕೊಂಡಿದ್ದರೆ ಈಗಲೇ ನಾನು ಮನೆಯಿಂದ ಹೊರ ನಡೆಯಲು ಸಿದ್ಧ ಎಂದು ಘಂಟಾಘೋಷವಾಗಿ ಹೇಳಿಕೆ ನೀಡಿದ್ದಾರೆ.

ಪಾಠದ ಅಗತ್ಯತೆ ಮುಂಚೆಯೇ ಇತ್ತು
ಇನ್ನು ಈ ರೀತಿಯ ಅತಿಯಾದ ಸಲಿಗೆಯ ವರ್ತನೆಗಳು ಬಿಗ್ ಬಾಸ್ ಮನೆಯಲ್ಲಿ ಕಂಡು ಬಂದದ್ದು ಇದೇ ಮೊದಲೇನಲ್ಲ ಎಂಬುದು ನಮಗೂ ನಿಮಗೂ ತಿಳಿದಿರುವ ವಿಷಯವೇ. ಪ್ರೇಕ್ಷಕರು ಈ ಹಿಂದೆಯೂ ಕೆಲ ಜೋಡಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಇದಕ್ಕಿಂತಲೂ ಮಿಗಿಲಾಗಿ ಕಿಡಿಕಾರಿದ್ದ ಉದಾಹರಣೆಗಳಿವೆ. ಆದರೆ ಆ ಯಾವುದೇ ಬಾರಿಯೂ ವೀಕ್ಷಕರ ಕೂಗು ವೇದಿಕೆ ತಲುಪಿರಲಿಲ್ಲ. ಹೀಗಾಗಿ ಈ ಪಾಠದ ಅಗತ್ಯತೆ ಈಗ ಮಾತ್ರವಲ್ಲ ಮುಂಚೆಯೂ ಇತ್ತು ಎನ್ನಬಹುದು.


Click it and Unblock the Notifications











