ಚದುರಂಗ ಅಲ್ಲ ರಣರಂಗ ; ಬಿಗ್ ಬಾಸ್ ಮನೆಗೆ ನಿರೂಪಕನಾಗಿ ಮರಳಿದ ಸೂಪರ್ ಸ್ಟಾರ್, ಪ್ರೋಮೋ ಇಲ್ಲಿದೆ. !
ಹಿಂದಿಯಲ್ಲಿ ಜನಪ್ರಿಯವಾದ ನಂತರ ಬಿಗ್ ಬಾಸ್ ದಕ್ಷಿಣದ ಭಾಷೆಗಳಲ್ಲಿ ಆರಂಭವಾಗಿತ್ತು.ಕನ್ನಡದ ಕಾರ್ಯಕ್ರಮದ ಸಾರಥ್ಯವನ್ನು ಕಳೆದ ಹನ್ನೊಂದು ವರ್ಷದಿಂದ ಸುದೀಪ್ ವಹಿಸಿಕೊಂಡಿದ್ದರೆ ತೆಲುಗಿನಲ್ಲಿ ನಾಗಾರ್ಜುನ ಉಸ್ತುವಾರಿಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ತಮಿಳಿನಲ್ಲಿ ಈ ಜವಾಬ್ದಾರಿಯನ್ನು ಕಮಲ್ ಹಾಸನ್ ಕಳೆದ ವರ್ಷದಿಂದ ವಿಜಯ್ ಸೇತುಪತಿ ಅವರಿಗೆ ವಹಿಸಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ.
ಇಂಥಾ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಳೆದ ವರ್ಷ ಕಿಚ್ಚ ಸುದೀಪ್ ಗುಡ್ ಬೈ ಹೇಳಿದ್ದರು. ಹನ್ನೊಂದು ವರ್ಷದ ಸಂಬಂಧ ಕಡಿದುಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಸುದೀಪ್ ಬದಲು ಬಿಗ್ ಬಾಸ್ ನಿರೂಪಣೆಯನ್ನು ಯಾರು ಮಾಡುತ್ತಾರೆ ಎನ್ನುವ ಕುತೂಹಲ ಅನೇಕರಲ್ಲಿ ಸದ್ಯ ಇದೆ. ಈ ಕುತೂಹಲಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲವಾದರು ಸದ್ಯ ತೆಲುಗಿನಲ್ಲಿ ಈ ಬಾರಿ ನಿರೂಪಕ ಯಾರು
ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹೌದು, ಮೊದಲೆರಡು ಸೀಸನ್ ಹೊರತು ಪಡಿಸಿದರೆ ಕಳೆದ ಆರು ಸೀಸನ್‌ಗಳನ್ನು ಯಶಸ್ವಿಯಾಗಿ ನಾಗಾರ್ಜುನ ಮುನ್ನಡೆಸಿಕೊಂಡು ಬಂದಿದ್ದರು. ಆದರೆ.. ಈ ಬಾರಿ ನಾಗಾರ್ಜುನ ಹಿಂದೆ ಸರಿಯುತ್ತಿದ್ದಾರೆ ಎನ್ನುವ ಮಾತು ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು. ಕಳೆದ ವರ್ಷದ ಕಾರ್ಯಕ್ರಮ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಪ್ರೇಕ್ಷಕರನ್ನು ಸೆಳೆದಿರಲಿಲ್ಲ. ನಾಗಾರ್ಜುನ ಅವರ ನಿರೂಪಣೆ ಕೂಡ ಸಪ್ಪೆಯಾಗಿತ್ತು. ಟಿಆರ್‌ಪಿ ನೆಲಕಚ್ಚಿತ್ತು.
ಹೀಗಾಗಿ ನಾಗಾರ್ಜುನ ಬದಲು ಕಾರ್ಯಕ್ರಮದ ಆಯೋಜಕರು ಬಾಲಯ್ಯಗೆ ಮಣೆ ಹಾಕುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಬಾಲಯ್ಯ ಈಗಾಗಲೇ 'ಅನ್‌ಸ್ಟಾಪೆಬಲ್ ವಿತ್ ಎನ್‌ಬಿಕೆ' ಕಾರ್ಯಕ್ರಮದ ನಿರೂಪಣೆ ಮಾಡಿ ತೆಲುಗು ನಾಡಿನ ಜನ ಮನ ಗೆದ್ದ ಹಿನ್ನೆಲೆ ಈ ಬಾರಿ ಬಿಗ್ ಬಾಸ್ ಸಾರಥ್ಯ ಬಾಲಯ್ಯ ಅವರೇ ವಹಿಸಿಕೊಳ್ಳಬಹುದು ಎಂದೇ ಅಂದಾಜಿಸಲಾಗಿತ್ತು.
ಆದರೆ ಈಗ ಈ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗಿವೆ. ತೆಲುಗು ಬಿಗ್ ಬಾಸ್‌ನ 9ನೇ ಸೀಸನ್ ಕೂಡ ನಾಗಾರ್ಜುನ ಅವರ ಪಾಲಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ಸದ್ಯ ಬಿಗ್ ಬಾಸ್ ತೆಲುಗು ಸೀಸನ್ 9ರ ಪ್ರೋಮೋ ಬಿಡುಗಡೆ ಮಾಡಲಾಗಿದ್ದು ನಾಗಾರ್ಜುನ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಚದುರಂಗ ಅಲ್ಲ ರಣರಂಗ ಎಂಬ ಡೈಲಾಗ್ ಕೂಡ ಹೊಡೆದಿದ್ದಾರೆ.

ಸದ್ಯ ಬಿಡುಗಡೆಯಾದ ಈ ಹೊಸ ಪ್ರೋಮೋ ತೆಲುಗು ಬಿಗ್ ಬಾಸ್ ಪ್ರೇಕ್ಷಕರ ಸಂಭ್ರಮಕ್ಕೆ ಕಾರಣವಾಗಿದೆ. ನಾಗಾರ್ಜುನ ಮತ್ತೆ ಬಿಗ್ ಬಾಸ್ ಮನೆಗೆ ಮರಳಿರುವುದು ಅನೇಕರಿಗೆ ಖುಷಿಯನ್ನು ನೀಡಿದೆ.
ಇನ್ನು ಇದೇ ಸಮಯದಲ್ಲಿ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾರೆಲ್ಲ ಬರಬಹುದು ಎನ್ನುವ ಚರ್ಚೆ ಕೂಡ ಶುರುವಾಗಿದೆ. ಈಗಾಗಲೇ ಮೊದಲ ಸ್ಫರ್ಧಿಯಾಗಿ ಪ್ರಖ್ಯಾತ ಯೂಟ್ಯೂಬರ್, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆದ ಬಬ್ಲೂ ಆಯ್ಕೆಯಾಗಿದ್ದಾರೆ ಎಂದು 'ಡೆಕ್ಕನ್ ಕ್ರೋನಿಕಲ್' ಪತ್ರಿಕೆ ವರದಿ ಮಾಡಿದೆ.
ನಾನ್ ವೆಜ್ ಉಪ್ಪಿನ ಕಾಯಿ ಉದ್ಯಮದಿಂದ ಜನಪ್ರಿಯರಾದ ಅಲೇಖ್ಯ ಚಿಟ್ಟಿ ಪಿಕಲ್ಸ್‌ನ ರಮ್ಯಾ ಕಂಚರ್ಲಾ ಹೆಸರು ಕೂಡ ಸದ್ಯ ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿದೆ. ಜ್ಯೋತಿ ರೈ.. ಕಲ್ಪಿಕಾ ಗಣೇಶ್.. ಕಾವ್ಯಾ, ತೇಜಸ್ವಿನಿ.. ಕಿರುತೆರೆ ನಟಿ ನವ್ಯಾ ಸ್ವಾಮಿ.. ಶ್ರಾವಣಿ ವರ್ಮಾ.. ಆರ್ ಜೆ ರಾಜ್.. ಸಾಯಿ ಕಿರಣ್.. ಮುಖೇಶ್ ಗೌಡ.. ಚತ್ರಪತಿ.. ಹೀಗೆ ಹಲವರ ಹೆಸರುಗಳು ಸದ್ಯ ಅಂತೆ ಕಂತೆಯ ಸಂತೆಯಲ್ಲಿ ಚಾಲ್ತಿಯಲ್ಲಿವೆ.
ಕಿರಾಕ್ ಬಾಯ್ಸ್ ಖಿಲಾಡಿ ಗರ್ಲ್ಸ್ ಸೀಸನ್ 2ರಲ್ಲಿ ಭಾಗವಹಿಸಿದ್ದ ಅನೇಕ ಸ್ಫರ್ಧಿಗಳು ಈ ಬಾರಿ ಬಿಗ್ ಬಾಸ್ ಮನೆಗೆ ಬರಬಹುದು ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.
ಇನ್ನುಳಿದಂತೆ ಬಿಗ್ ಬಾಸ್ ಸೆಟ್ ನಿರ್ಮಾಣ ಕೆಲಸ ಕೂಡ ಶುರುವಾಗಿದೆ ಎಂದು ವರದಿಯಾಗಿದೆ. ಸ್ಟಾರ್ ಮಾ ಮತ್ತು ಡಿಸ್ನಿ + ಹಾಟ್ ಸ್ಟಾರ್‌ನಲ್ಲಿ ಈ ವರ್ಷ ಕೂಡ ತೆಲುಗು ಬಿಗ್ ಬಾಸ್ ಪ್ರಸಾರವಾಗಲಿದ್ದು, ಶೀಘ್ರದಲ್ಲಿಯೇ ಕಾರ್ಯಕ್ರಮ ಆರಂಭವಾಗುವ ದಿನವನ್ನು ಆಯೋಜಕರು ಘೋಷಿಸುವ ಸಾಧ್ಯತೆ ಇದೆ.


Click it and Unblock the Notifications











