Pawan Kumar: 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಪವನ್ ನಟನಾ ಜರ್ನಿಗೆ ಮುನ್ನುಡಿ ಬರೆದಿದ್ದು ಈ ಕಿರುಚಿತ್ರ
ಆರೂರು ಜಗದೀಶ್ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಲೆಕ್ಚರರ್ ಮುರಳಿ ಪಾತ್ರಕ್ಕೆ ಜೀವ ತುಂಬುತ್ತಿರುವ ಹ್ಯಾಂಡ್‌ಸಮ್ ಹುಡುಗನ ಹೆಸರು ಪವನ್ ಕುಮಾರ್. ಪುಟ್ಟಕ್ಕನ ಹಿರಿಮಗಳು ಸಹನಾಳ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಪವನ್ ಕುಮಾರ್ ಅವರ ನಟನಾ ಪಯಣ ಶುರುವಾಗಿದ್ದು 'ಕಿನ್ನರಿ' ಧಾರಾವಾಹಿಯಿಂದ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಕಿನ್ನರಿ'ಯಲ್ಲಿ ನಾಯಕ ನಕುಲ್ ಆಲಿಯಾಸ್ ಶಿವಂ ಆಗಿ ಅಭಿನಯಿಸಿದ್ದರು ಪವನ್ ಕುಮಾರ್.
ಪವನ್ ಕುಮಾರ್‌ಗೆ ಸಣ್ಣ ವಯಸ್ಸಿನಿಂದಲೂ ನಟನೆಯತ್ತ ಆಸಕ್ತಿಯಿತ್ತು. ಪದವಿ ವಿದ್ಯಾಭ್ಯಾಸದ ಬಳಿಕ ನಟನೆಯಲ್ಲಿ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿದ ಪವನ್ ಕುಮಾರ್ ನಟನಾ ತರಬೇತಿ ಪಡೆಯಲು ನಿರ್ಧರಿಸಿದರು. ಅದಕ್ಕಾಗಿ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಟೆಂಟ್' ಸಿನಿಮಾ ಸಂಸ್ಥೆ ಸೇರಿದ ಪವನ್ ಕುಮಾರ್ ನಟನೆಯ ರೀತಿ ನೀತಿಗಳನ್ನು ತಿಳಿದುಕೊಂಡರು.

'ಮಾದಕ' ಕಿರುಚಿತ್ರದ ಮೂಲಕ ನಟನೆ
'ಮಾದಕ' ಎನ್ನುವ ಕಿರುಚಿತ್ರದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ ಪವನ್ ಕುಮಾರ್ ಪೋಷಕ ಪಾತ್ರಗಳ ಮೂಲಕ ಕಿರುತೆರೆಗೆ ಕಾಲಿಟ್ಟರು. 'ನಾ ನಿನ್ನ ಬಿಡಲಾರೆ', 'ಪತ್ತೇದಾರಿ ಪ್ರತಿಭಾ' ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪವನ್ ಕುಮಾರ್ ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ಮಹಾಕಾಳಿ'ಯಲ್ಲಿ ಚಂದ್ರನ ಪಾತ್ರಕ್ಕೆ ಜೀವ ತುಂಬಿದ್ದರು.

ಪೌರಾಣಿಕ ಧಾರಾವಾಹಿಯಲ್ಲೂ ನಟನೆ
'ಮಹಾಕಾಳಿ' ಧಾರಾವಾಹಿಯ ನಂತರ ಪವನ್ ಕುಮಾರ್ ಅವರು ಮತ್ತೊಂದು ಪೌರಾಣಿಕ ಧಾರಾವಾಹಿ 'ಜೈ ಹನುಮಾನ್' ನಲ್ಲಿ ರಾಜ ಸತ್ಯವ್ರತ ಆಗಿ ಮೋಡಿ ಮಾಡಿದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ನಕುಲ್ ಆಲಿಯಾಸ್ ಶಿವಂ ಆಗಿ ಅಭಿನಯಿಸಿದ ಪವನ್ ಕುಮಾರ್ ಏಕಕಾಲಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ಶೇಡ್ ಇರುವ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದರು.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮುರಳಿ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿ "ಆಕೃತಿ"ಯಲ್ಲಿ ಜರ್ನಲಿಸ್ಟ್ ಆಗಿ ನಟಿಸಿದ್ದ ಪವನ್ ಕುಮಾರ್ ತದ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಖಳನಾಯಕ ಅಬ್ಬರಿಸಿ ಸೈ ಎನಿಸಿಕೊಂಡರು. ಸದ್ಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮುರಳಿಯಾಗಿ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ.

ವಿಭಿನ್ನ ಪಾತ್ರಗಳಲ್ಲಿ ನಟನೆ
"ನನ್ನ ನಟನಾ ಪಯಣ ಶುರುವಾದಾಗಿನಿಂದಲೂ ನಾನು ಒಂದೇ ರೀತಿಯ ಪಾತ್ರಕ್ಕೆ ಬ್ರಾಂಡ್ ಆಗಿಲ್ಲ. ಬದಲಿಗೆ ಪ್ರತಿಯೊಂದು ಧಾರಾವಾಹಿಯಲ್ಲಿಯೂ ಭಿನ್ನ ಭಿನ್ನ ರೀತಿಯ ಪಾತ್ರಗಳಿಗೆ ಜೀವ ತುಂಬುವ ಅವಕಾಶ ನನಗೆ ದೊರಕಿದೆ. ತುಂಬಾ ಸಂತಸವಾಗುತ್ತಿದೆ. ಜೊತೆಗೆ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿರುವ ಖುಷಿಯಿದೆ" ಎನ್ನುತ್ತಾರೆ ಪವನ್ ಕುಮಾರ್.


Click it and Unblock the Notifications











