ಹೊಸ ಧಾರಾವಾಹಿ 'ಕರ್ಣ' ಇನ್ನೂ ಶುರುವಾಗಿಲ್ಲ, ಆಗಲೇ ಹೊಸ ಸಿನಿಮಾದ ಸುಳಿವು ಕೊಟ್ಟ ಕಿರಣ್ ರಾಜ್.. ಮುಂದೆ?
ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವಂತಹ ಧಾರಾವಾಹಿಗಳ ಪೈಕಿ 'ಕನ್ನಡತಿ'ಯೂ ಒಂದು. 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ನಟಿಸಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹ್ಯಾಂಡ್ ಸಮ್ ಹೀರೋ ಹೆಸರು ಕಿರಣ್ ರಾಜ್. ಯಶವಂತ್ ಪಾಂಡು ನಿರ್ದೇಶನದ ಈ ಧಾರಾವಾಹಿಯು ಬರೋಬ್ಬರಿ 800 ಸಂಚಿಕೆ ಪ್ರಸಾರಗೊಂಡಿದೆ. 2020 ಜನವರಿಯಲ್ಲಿ ಶುರುವಾದ ಈ ಧಾರಾವಾಹಿಯು 2023ರಲ್ಲಿ ಮುಕ್ತಾಯಗೊಂಡರೂ ಇಂದಿಗೂ 'ಕನ್ನಡತಿ' ಧಾರಾವಾಹಿ, ಹರ್ಷ ಪಾತ್ರ ಕಿರುತೆರೆ ವೀಕ್ಷಕರ ಮನದಲ್ಲಿ ಈಗಲೂ ಹಸಿರಾಗಿದೆ.
'ಕನ್ನಡತಿ' ಧಾರಾವಾಹಿ ಮುಗಿದು ಎರಡು ವರ್ಷ ಕಳೆಯುತ್ತಾ ಬಂದರೂ, ಇಂದಿಗೂ ಕಿರಣ್ ರಾಜ್ ಅವರನ್ನು ಕಂಡಾಕ್ಷಣ ಹರ್ಷ ಎಂದೇ ಜನ ಗುರುತಿಸುತ್ತಾರೆ. ಇನ್ನು ಸಂತೋಷದ ವಿಚಾರವೆಂದರೆ 'ಕನ್ನಡತಿ' ಧಾರಾವಾಹಿ ಮುಗಿದು ಎರಡು ವರ್ಷಗಳ ಬಳಿಕ 'ಕರ್ಣ'ನಾಗಿ ಕಿರುತೆರೆಗೆ ಕಿರಣ್ ರಾಜ್ ಕಂ ಬ್ಯಾಕ್ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ದೇಶನಡಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಕರ್ಣ'ದಲ್ಲಿ ನಾಯಕನಾಗಿ ಕಿರಣ್ ರಾಜ್ ನಟಿಸುತ್ತಿದ್ದಾರೆ .

'ಕರ್ಣ' ಧಾರಾವಾಹಿಯ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಎರಡು ವರ್ಷಗಳ ನಂತರ ತಮ್ಮ ನೆಚ್ಚಿನ ನಟನನ್ನು ಕಿರುತೆರೆ ಮೇಲೆ ನೋಡಿ ವೀಕ್ಷಕರು ಖುಷಿಪಟ್ಟಿದ್ದಾರೆ. ಅದರಲ್ಲೂ 'ಕನ್ನಡತಿ' ಧಾರಾವಾಹಿ ವೀಕ್ಷಕರಂತೂ ಫಿದಾ ಆಗಿದ್ದಾರೆ. ಫೇಮಸ್ ಗೈನಾಕಾಲಜಿಸ್ಟ್ ಕರ್ಣ ಪಾತ್ರದಲ್ಲಿ ಕಿರಣ್ ರಾಜ್ ನಟಿಸಲಿದ್ದು ಮೊದಲ ಬಾರಿಗೆ ಡಾಕ್ಟರ್ ಆಗಿ ತೆರೆಯ ಮೇಲೆ ಮೋಡಿ ಮಾಡಲಿದ್ದಾರೆ.
ಇನ್ನು ಸಂತೋಷದ ವಿಚಾರವೆಂದರೆ ಕಿರಣ್ ರಾಜ್ ಅವರು ಕರ್ಣನಾಗಿ ಕಿರುತೆರೆಗೆ ಮರಳುವ ಖುಷಿ ಒಂದೆಡೆಯಾದರೆ, 'ಕರ್ಣ' ಧಾರಾವಾಹಿಯ ಪ್ರೋಮೋವಂತೂ ಇನ್‌ಸ್ಟಾಗ್ರಾಂನಲ್ಲಿ ಸಖತ್ ಸದ್ದು ಮಾಡುತ್ತಿದೆ. ಕೇವಲ ಮೂರು ದಿನದ ಹಿಂದೆಯಷ್ಟೇ ಜೀ ಕನ್ನಡ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅಪ್ ಲೋಡ್ ಆಗಿರುವ ಈ ಪ್ರೋಮೋ ಈಗಾಗಲೇ ಒಂಭತ್ತು ಮಿಲಿಯನ್ ವೀವ್ಸ್ ಪಡೆದಿದೆ. ಮೂರು ಲಕ್ಷಕ್ಕೂ ಅಧಿಕ ಮಂದಿ ಪ್ರೋಮೋ ನೋಡಿ ಲೈಕ್ಸ್ ಕೊಟ್ಟಿದ್ದಾರೆ. ನಲವತ್ತೈದು ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.
ಈ ಸಂತೋಷದ ವಿಚಾರವನ್ನು ಸ್ವತಃ ಕಿರಣ್ ರಾಜ್ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 'ಬಿಗ್ಗೆಸ್ಟ್ ಓಪನಿಂಗ್ ಎವರ್' ಎಂದು ಶೀರ್ಷಿಕೆಯನ್ನೂ ಕೂಡಾ ಅವರು ನೀಡಿದ್ದಾರೆ. ಇದರ ಜೊತೆಗೆ "ನಮ್ಮ ಮುಂದಿನ ಧಾರಾವಾಹಿ ಕರ್ಣ ಆರು ಮಿಲಿಯನ್‌ಗೂ ಅಧಿಕ ವೀವ್ಸ್ ಬಂದಿದೆ. ಅದು ಕೇವಲ ಒಂದೇ ದಿನದಲ್ಲಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಹೃತ್ಪೂರ್ವಕ ಧನ್ಯವಾದಗಳು" ಎಂದು ಕಿರಣ್ ರಾಜ್ ಇನ್‌ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಇದರ ಜೊತೆಗೆ ಮಗದೊಂದು ಸಿಹಿ ಸುದ್ದಿಯೊಂದನ್ನು ಕಿರಣ್ ರಾಜ್ ನೀಡಿದ್ದಾರೆ. ಕರ್ಣ ಧಾರಾವಾಹಿಯ ಬೆನ್ನಲ್ಲೇ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಮುಹೂರ್ತದ ಚಿತ್ರಗಳನ್ನು ಹಂಚಿಕೊಂಡಿರುವ ಇವರು "New beginning. New movie Update soon" ಎಂದು ಬರೆದುಕೊಂಡಿದ್ದಾರೆ. ಸಿನಿಮಾದ ಹೆಸರೇನು? ನಿರ್ದೇಶಕರು ಯಾರು? ನಾಯಕಿ ಯಾರು ಎಂಬೆಲ್ಲಾ ಮಾಹಿತಿಗಳು ಇನ್ನು ಹೊರಬರಬೇಕಿದೆ.
ಈಗಾಗಲೇ 'ಭರ್ಜರಿ ಗಂಡು', 'ರಾನಿ', 'ಮೇಘ' ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದ ಕಿರಣ್ ರಾಜ್ ಇದೀಗ ಮಗದೊಂದು ಹೊಸ ಸಿನಿಮಾ, ಹೊಸ ಪಾತ್ರದ ಮೂಲಕ ಚಂದನವನಕ್ಕೆ ಕಾಲಿಡಲು ತಯಾರಾಗಿದ್ದಾರೆ. ಏಕಕಾಲಕ್ಕೆ ಸೀರಿಯಲ್ ಹಾಗೂ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವನ್ನು ಹೊರಹಾಕಿರುವ ಕಿರಣ್ ರಾಜ್ ಇವೆರಡನ್ನೂ ಯಾವ ರೀತಿಯಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಾರೆ ಎಂಬುದು ತಿಳಿಯಬೇಕಿದೆ.


Click it and Unblock the Notifications











