ಹೊಸ ಕತೆ ಹೊತ್ತು ಬರ್ತಿದ್ದಾರೆ ಕನ್ನಡ ಕಿರುತೆರೆಯ ಯಶಸ್ವಿ ನಿರ್ದೇಶಕ ರಾಮ್ ಜೀ
'ಪುಟ್ಟಗೌರಿ ಮದುವೆ', 'ಮಂಗಳಗೌರಿ ಮದುವೆ', 'ರಂಗನಾಯಕಿ', 'ನಾಗಿಣಿ- 2', 'ಗೀತಾ', 'ರಾಣಿ' ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ. ಎಸ್ ರಾಮ್ ಜೀ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಕನ್ನಡ ಕಿರುತೆರೆಯ ಲೋಕದಲ್ಲಿ ರಾಮ್ ಜೀ ಅವರು ಪ್ರಯೋಗಗಳನ್ನು ಮಾಡುತ್ತಲೇ ಜನರ ಮನ ಗೆದ್ದವರು. ಇವರ ನಿರ್ದೇಶನದ ಧಾರಾವಾಹಿಗಳೆಲ್ಲವೂ ಸಕ್ಸಸ್ ಕಂಡಿವೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಮ್ ಜೀ ಅವರ ಧಾರಾವಾಹಿಗಳು ಪ್ರಸಾರಗೊಳ್ಳುತ್ತವೆ. ಇದೀಗ ಮತ್ತೆ ಹೊಸ ಕತೆಯೊಂದಿಗೆ ಹೊಚ್ಚ ಹೊಸ ಧಾರಾವಾಹಿಯನ್ನು ಹೊತ್ತು ತರಲಿದ್ದಾರೆ.

ಕೆ.ಎಸ್ ರಾಮ್ ಜೀ ಹೊಸ ಸೀರಿಯಲ್
ಗಗನ್ ಎಂಟರ್‌ಪ್ರೈಸಸ್ ಮೂಲಕ ಕೆ.ಎಸ್ ರಾಮ್ ಜೀ ಕಿರುತೆರೆಯಲ್ಲಿ ಸಾಕಷ್ಟು ವಿಶಿಷ್ಟ ಹಾಗೂ ವಿಭಿನ್ನ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ರಾಮ್ ಜೀ ಕನ್ನಡ ಕಿರುತೆರೆಯ ಇತ್ತೀಚಿನ ನಿರ್ದೇಶಕರಲ್ಲಿ ಒಬ್ಬರು. ಅವರು ತಮ್ಮ ಮೆಗಾ ಧಾರಾವಾಹಿ 'ಪುಟ್ಟ ಗೌರಿ ಮದುವೆ' ಮೂಲಕ ಖ್ಯಾತಿಯನ್ನು ಗಳಿಸಿದರು. ನಂತರ ಅದೇ ಧಾರಾವಾಹಿಯನ್ನು 'ಮಂಗಳಗೌರಿ ಮದುವೆ' ಎಂದು ಮರುನಾಮಕರಣಗೊಂಡು ಪ್ರಸಾರವಾಯಿತು. ಇದರೊಂದಿಗೆ 'ರಂಗನಾಯಕಿ', 'ನಾಗಿಣಿ 2' ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳ ನಿರ್ದೇಶಕರಾಗಿದ್ದಾರೆ.
ಯಾವ ಸಮಯಕ್ಕೆ ಬೃಂದಾವನ
ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಮತ್ತು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿಯನ್ನು ರಾಮ್ ಜೀ ನಿರ್ದೇಶಿಸುತ್ತಿದ್ದಾರೆ. ಇನ್ನು ಮತ್ತೊಂದು ಹೊಸ ಧಾರಾವಾಹಿಯನ್ನು ಕಿರುತೆರೆಗೆ ತರಲು ಮುಂದಾಗಿದ್ದು, ಈ ಬಗ್ಗೆ ಈಗಾಗಲೇ ರಾಮ್ ಜೀ ಸುಳಿವು ಕೊಟ್ಟಿದ್ದಾರೆ. ಆ ಹೊಸ ಧಾರಾವಾಹಿ ಯಾವುದು ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದ್ದರೆ, ಯಾವ ಸಮಯಕ್ಕೆ ಪ್ರಸಾರವಾಗುತ್ತದೆ ಹಾಗೂ ಇದರಿಂದ ಯಾವ ಧಾರಾವಾಹಿಗೆ ಪೆಟ್ಟು ಬೀಳಬಹುದು ಎಂದು ಆಲೋಚಿಸುತ್ತಿದ್ದಾರೆ.
ಹೊಸ ಧಾರಾವಾಹಿ 'ಬೃಂದಾವನ'
ಈಗಾಗಲೇ 16ಕ್ಕೂ ಅಧಿಕ ಸೀರಿಯಲ್‌ಳ ಮೂಲಕ ತಮ್ಮ ಸ್ವಂತ ಕಥೆಗಳಿಂದಾಗಿ ಕರುನಾಡಿನ ಜನರ ಮನಸ್ಸನ್ನು ಗೆದ್ದಿರುವ ಗಗನ್ ಎಂಟರ್ಪ್ರೈಸಸ್ ಪ್ರೊಡಕ್ಷನ್ ತಂಡ ಕಲರ್ಸ್ ಕನ್ನಡ ವಾಹಿನಿಗೆ ಸಾಕಷ್ಟು ಧಾರಾವಾಹಿಗಳನ್ನು ನೀಡಿದೆ. ಈಗ ಮತ್ತದೇ ವಾಹಿನಿಯಲ್ಲಿ ಮತ್ತೊಂದು ಭಿನ್ನ ಕಥೆಯುಳ್ಳ ಧಾರಾವಾಹಿಯನ್ನು ಪ್ರಸಾರ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಹಲವು ಸಮಯದಿಂದ 'ಬೃಂದಾವನ' ಎಂಬ ಧಾರಾವಾಹಿ ವಿಚಾರ ಕೇಳಿಬರ್ತಿತ್ತು. ಅವೆಲ್ಲವೂ ಈಗ ನಿಜವಾಗುವ ಸಮಯ ಬಂದಿದೆ.
ಮತ್ತೆ 7 ಗಂಟೆಗೆ ರಾಮ್‌ಜೀ
ರಾಮ್‌ಜೀ ಅವರ ನಿರ್ದೇಶನದಲ್ಲಿ ಬೃಂದಾವನ ಧಾರಾವಾಹಿ ಶೀಘ್ರದಲ್ಲೇ ಪ್ರಸಾರಗೊಳ್ಳಲಿದೆ. ನಿರ್ದೇಶಕರು ಕಲರ್ಸ್ ಕನ್ನಡ ವಾಹಿನಿ ಜೊತೆಗೆ ದಶಕಕ್ಕೂ ಅಧಿಕ ಸಮಯದಿಂದ ಕೈ ಜೋಡಿಸಿದ್ದಾರೆ. ಬರೋಬ್ಬರಿ 10 ವರ್ಷಗಳ ಕಾಲ ಅವರು 'ಪುಟ್ಟಗೌರಿ' ಧಾರಾವಾಹಿ ಮೂಲಕ ಸಂಜೆ 7 ಗಂಟೆಯ ಸ್ಲಾಟ್ ಅನ್ನು ಯಾರಿಗೂ ಬಿಟ್ಟು ಕೊಟ್ಟಿರಲಿಲ್ಲ. ಇದೇ ಧಾರಾವಾಹಿ 'ಮಂಗಳಗೌರಿ' ಆಗಿ ಪ್ರಸಾರ ಮುಂದುವರೆಸಿತು. ನಂತರ 'ಗೀತಾ', 'ರಾಮಾಚಾರಿ' ಹಾಗೂ 'ಗಂಡ ಹೆಂಡ್ತಿ' ಧಾರಾವಾಹಿಗಳು ಇನ್ನು ಪ್ರಸಾರ ಕಾಣುತ್ತಿದ್ದು, ಇವುಗಳ ಜೊತೆಗೆ ಈಗ 'ಬೃಂದಾವನ' ಧಾರಾವಾಹಿ ಕೂಡ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಸಂಜೆ 7 ಗಂಟೆ ಸ್ಲಾಟ್‌ಗೆ ಬಿಗ್ ಬಾಸ್ - ಸೀಸನ್ 10 ಮುಗಿದ ಬಳಿಕ ಪ್ರಸಾರವಾಗಲಿದೆ ಎಂಬ ಸುಳಿವು ಸಿಕ್ಕಿದೆ. ಆದರೆ, ಇನ್ನಷ್ಟು ಮಾಹಿತಿಗಳು ಮುಂದಿನ ದಿನಗಳಲ್ಲಿ ತಿಳಿದು ಬರಬೇಕಿದೆ.


Click it and Unblock the Notifications











