'ಲಕ್ಷಣ' ಧಾರಾವಾಹಿಯ ಮಿಲಿ ನಟಿ ಮಾತ್ರವಲ್ಲ.. ಮೇಕಪ್ ಆರ್ಟಿಸ್ಟ್ ಕೂಡಾ ಹೌದು: ಇದು ನಿಮಗೆ ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯಲ್ಲಿ ಖಳನಾಯಕಿ ಶ್ವೇತಾಳ ಪರ್ಸನಲ್ ಅಸಿಸ್ಟೆಂಟ್ ಮಿಲಿ ಪಾತ್ರಕ್ಕೆ ಜೀವ ತುಂಬುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಶ್ರುತಿ ರಮೇಶ್. ಇಂಜಿನಿಯರಿಂಗ್ ಪದವಿ ಪಡೆದಿರುವ ತರೀಕೆರೆಯ ಬೆಡಗಿ ಸದ್ಯ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಂಡಿರುವ ಬೆಡಗಿ. ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ಸಕ್ರಿಯರಾಗಿರುವ ಶ್ರುತಿ ರಮೇಶ್ ಇತ್ತೀಚೆಗೆ ಬಿಡುಗಡೆಯಾದ 'ಸಿರಿ ಲಂಬೋದರ ವಿವಾಹ' ಸಿನಿಮಾದಲ್ಲಿಯೂ ಈಕೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿರುವ ಪ್ರತಿಭೆ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಧಾರಾವಾಹಿ 'ಪಾಪಾ ಪಾಂಡು ಸೀಸನ್ 2' ರಲ್ಲಿ ನಿಮ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರುತಿ ರಮೇಶ್ ಅದೇ ಪಾತ್ರದ ಮೂಲಕ ಈಗಲೂ ಪರಿಚಿತ. "ಪಾಪಾ ಪಾಂಡು ಸೀಸನ್ 2" ಮುಗಿದು ವರ್ಷ ಎರಡಾಗುತ್ತಾ ಬಂದರೂ ಈಗಲೂ ಶ್ರುತಿ ರಮೇಶ್ ಹೆಸರು ಹೇಳಿದ ತಕ್ಷಣ ಕಣ್ಣ ಮುಂದೆ ಬರುವುದು ನಿಮ್ಮಿ ಪಾತ್ರ.

ಮಿಲಿ ಪಾತ್ರದ ಮೂಲಕ ಜನಪ್ರಿಯ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ', ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಸುಬ್ಬಲಕ್ಷ್ಮೀ ಸಂಸಾರ', ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶಾಂತಂ ಪಾಪಂ', ಸ್ಟಾರ್ ಸುವರ್ಣ ವಾಹಿನಿಯ 'ಬಿಳಿ ಹೆಂಡ್ತಿ', ಉದಯ ವಾಹಿನಿಯ 'ಮಾನಸ ಸರೋವರ' ಹೀಗೆ ಒಂದಷ್ಟು ಬೆರಳೆಣಿಯಷ್ಟು ಧಾರಾವಾಹಿಯಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶ್ರುತಿ ರಮೇಶ್‌ಗೆ ಹೆಸರು ತಂದುಕೊಟ್ಟಿದ್ದು 'ಪಾಪಾ ಪಾಂಡು' ಧಾರಾವಾಹಿಯ ಮಿಲಿ ಪಾತ್ರ. ಜನರು ಆಕೆಯನ್ನು, ಆಕೆಯ ನಟನೆಯನ್ನು ಕೂಡಾ ಇದೇ ಧಾರಾವಾಹಿಯ ಮೂಲವೇ ಗುರುತಿಸಿದ್ದರು.

'ಪಾಪಾ ಪಾಂಡು' ಮೂಲಕ ಫೇಮಸ್ಸು
"ಬೆರಳೆಣಿಯಷ್ಟು ಧಾರಾವಾಹಿಗಳಲ್ಲಿ ನಾನು ಅಭಿನಯಿಸಿದ್ದರೂ ಮೊದಲ ಪ್ರಮಾಣದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಾನು ಬಣ್ಣ ಹಚ್ಚಿದ್ದು 'ಪಾಪಾ ಪಾಂಡು' ಧಾರಾವಾಹಿಯಲ್ಲಿ. ಪ್ರಮುಖ ಪಾತ್ರ ಎಂದಾಗ ನನಗೆ ಸಂತಸಕ್ಕಿಂತಲೂ ಭಯವಾಗಿದ್ದೇ ಹೆಚ್ಚು. ಕಾರಣವೂ ಇಷ್ಟೇ - ನನ್ನಿಂದ ಇದು ಸಾಧ್ಯನಾ ಎಂಬ ಅಳುಕು ಮೂಡಿತ್ತು. ಭಯವಾದರೂ ಸರಿ ಎಂದೆ. ಮುಂದೆ ನಡೆದಿದ್ದೆಲ್ಲಾ ಪವಾಡ ಎಂದೇ ಹೇಳಬಹುದು. ಯಾಕೆಂದರೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಆ ಪಾತ್ರವನ್ನು ಮೆಚ್ಚಿಕೊಂಡಿದ್ದರು. ಕಲಾವಿದೆಗೆ ಇದಕ್ಕಿಂತ ದೊಡ್ಡ ಬಿರುದು ಬೇರೇನು ಬೇಕು" ಎಂದು ಶ್ರುತಿ ರಮೇಶ್ ಹೇಳುತ್ತಾರೆ .

'ಫ್ಯಾಮಿಲಿ ಫ್ಯಾಕ್' ಸಿನಿಮಾದಲ್ಲಿ ಮೋಡಿ
"ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ನಡಿಯಿಂದ ನನ್ನ ಹಿರಿತೆರೆ ಪಯಣ ಶುರುವಾಯಿತು. ಪಿ ಆರ್ ಕೆ ಬ್ಯಾನರ್ ನಡಿಯಲ್ಲಿ ಬಂದ 'ಫ್ಯಾಮಿಲಿ ಫ್ಯಾಕ್' ಸಿನಿಮಾದಲ್ಲಿ ನಾನು ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ತುಂಬಾ ಸಂತವಾಗುತ್ತಿದೆ. ಜೊತೆಗೆ ಅಂತಹ ಬ್ಯಾನರ್ ನಡಿಯಲ್ಲಿ ಅಭಿನಯಿಸಲು ಸಿಕ್ಕಿರುವುದು ನನ್ನ ಪಾಲಿನ ಪುಣ್ಯ" ಎಂದು ಹೇಳುವ ಶ್ರುತಿ ರಮೇಶ್ ಪೃಥ್ವಿ ಅಂಬರ್ ಅವರ "ಶುಗರ್ ಲೆಸ್" ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ತೆರೆ ಕಂಡಿರುವ 'ಸಿರಿ ಲಂಬೋದರ ವಿವಾಹ' ಹಾಗೂ 'ಜೆರ್ಸಿ ನಂ 1' ಸಿನಿಮಾಗಳಲ್ಲಿ ಈಕೆ ಅಭಿನಯಿಸಿದ್ದಾರೆ. ಇದರ ಜೊತೆಗೆ ವೆಬ್ ಸಿರೀಸ್ ಜಗತ್ತಿಗೂ ಕಾಲಿಟ್ಟಿರುವ ಶ್ರುತಿ 'ದೊಂಬ್ರಾಟ' ಹಾಗೂ 'ಒರಿಜಿನಲ್ ಚಾಯ್ಸ್' ಎನ್ನುವ ವೆಬ್ ಸಿರೀಸ್ ನಲ್ಲಿ ಬಣ್ಣ ಹಚ್ಚಿದ್ದಾರೆ.

ಮೇಕಪ್ ಮಾಡ್ತಾರೆ ಮಿಲಿ
ಮನೋಜ್ಞ ನಟನೆಯ ಮೂಲಕ ಕಿರುತೆರೆ ಹಾಗೂ ಹಿರಿತೆರೆ ವೀಕ್ಷಕರ ಮನ ಸೆಳೆದಿರುವ ಶ್ರುತಿ ರಮೇಶ್ ಮೇಕಪ್ ಆರ್ಟಿಸ್ಟ್ ಕೂಡಾ ಹೌದು ಎಂಬ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ. ಇತ್ತೀಚೆಗಷ್ಟೇ ಅವರು ಮೇಕಪ್ ಆರ್ಟಿಸ್ಟ್ ಕೋರ್ಸ್ ಮಾಡಿದ್ದು ಅದಕ್ಕಾಗಿ ಸರ್ಟಿಫೀಕೆಟ್ ಕೂಡಾ ಪಡೆದುಕೊಂಡಿದ್ದಾರೆ. ಕೇವಲ ನಟನೆಯನ್ನು ಮಾತ್ರವಲ್ಲದೇ ಮೇಕಪ್ ಕಲೆಯನ್ನು ಕೂಡಾ ಆಕೆ ವೃತ್ತಿಯನ್ನಾಗಿಸಿಕೊಂಡು, ಎರಡನ್ನೂ ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ.


Click it and Unblock the Notifications