ಅಕ್ಕನನ್ನು ಬಿಟ್ಟು ಹೊರಟ ತಂಗಿ; ಲಕ್ಷ್ಮೀ ಇಲ್ಲದೇ ಒಂಟಿಯಾದಳಾ ಭಾಗ್ಯ?
ಬಹಳ ಸಮಯದ ಬಳಿಕ ಕಿರುತೆರೆಯಲ್ಲಿ ಅಂತ್ಯವಾದ ಸೀರಿಯಲ್ ಒಂದು ಹ್ಯಾಪಿ ಎಂಡಿಂಗ್ ಪಡೆಯಿತು. ಧಾರಾವಾಹಿಗಳಲ್ಲಿ ಸಾಮಾನ್ಯವಾಗಿ ಕೆಟ್ಟವರಿಗೆ ಶಿಕ್ಷೆಯಾಗುತ್ತಿತ್ತು. ಇಲ್ಲವೇ ಕೆಲ ಸಂಗತಿಗಳು ಬಗೆ ಹರಿಯದೆಯೇ ಮುಕ್ತಾಯವಾಗುತ್ತಿತ್ತು. ಇಲ್ಲವೇ ಧಾರಾವಾಹಿ ಅರ್ಧದಲ್ಲೇ ನಿಂತು ಹೋಗುತ್ತಿತ್ತು. ಆದರೆ, ಲಕ್ಷ್ಮೀಬಾರಮ್ಮ ಧಾರಾವಾಹಿ ಮುಕ್ತಾಯ ಎಲ್ಲರಿಗೂ ಖುಷಿ ಕೊಡುವಂತಿತ್ತು. ಕಾವೇರಿ ಬದುಕು ಅಂತ್ಯವಾದರೆ, ಕೀರ್ತಿ ತನ್ನಿಂದ ಯಾರಿಗೂ ತೊಂದರೆಯಾಗುವುದು ಬೇಡ ಎಂದು ಹೊರದೇಶಕ್ಕೆ ಪ್ರಯಾಣ ಬೆಳೆಸಿದಳು.
ಮದುವೆಯಾಗಿ ಎರಡು ವರ್ಷವಾಯ್ತು. ಇಷ್ಟು ದಿನಗಳಲ್ಲಿ ಮೊದಲು ವೈಷ್ಣವ್ ಕೀರ್ತಿ ಗುಂಗಿನಿಂದ ಹೊರ ಬರುವುದಕ್ಕೆ ಸಮಯ ತೆಗೆದುಕೊಂಡ. ಬಳಿಕ ಕೀರ್ತಿ ಕಾಟಕ್ಕೆ ಲಕ್ಷ್ಮೀ ಬೇಸತ್ತಳು.

ಬಳಿಕ ಅತ್ತೆ ಕಾವೇರಿಯ ಕಾಟ ಹೀಗೆ ಎರಡು ವರ್ಷ ಕಳೆದೇ ಹೋಯ್ತು. ಈಗ ಎಲ್ಲಾ ಸಮಸ್ಯೆಗಳಿಂದಲೂ ಹೊರ ಬಂದ ಲಕ್ಷ್ಮೀ ಗರ್ಭಿಣಿಯಾಗಿದ್ದು, ಚೊಚ್ಚಲ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾಳೆ.
ಹ್ಯಾಪಿ ಎಂಡಿಂಗ್
ಲಕ್ಷ್ಮೀಯ ಸೀಮಂತ ಮುಗಿಸಿ ಧಾರಾವಾಹಿಗೆ ಮುಕ್ತಾಯ ಹಾಡಲಾಯ್ತು. ಸೀರಿಯಲ್ ಏನೋ ಹ್ಯಾಪಿ ಎಂಡಿಂಗ್ ಅನ್ನು ಪಡೆಯಿತು. ಆದರೆ, ತಂಗಿಯ ಮದುವೆ ಮಾಡಲು ಮುನ್ನವೇ ತನ್ನ ಬದುಕಿನಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದ ಭಾಗ್ಯಳ ಸಮಸ್ಯೆ ಇನ್ನೂ ಬಗೆ ಹರಿದೇ ಇಲ್ಲ. ತಂಗಿ ಬಾಳು ಚೆನ್ನಾಗಿರಲಿ ಎಂದು ಭಾಗ್ಯ ಹುಡುಗನಿಗಾಗಿ ಹುಡುಕಾಡಿ, ಕೊನೆಗೆ ತನ್ನ ಅತ್ತೆಯ ತಂಗಿ ಮಗನಿಗೇ ಲಕ್ಷ್ಮೀಯನ್ನು ಕೊಟ್ಟು ಮದುವೆ ಮಾಡಿದಳು. ತಂಗಿ ಮದುವೆ ಮಾಡುವಾಗಲೂ ಸಾಕಷ್ಟು ಸಮಸ್ಯೆಯನ್ನು ಎದುರಿಸಿದ ಭಾಗ್ಯ ಲಕ್ಷ್ಮೀ ಬದುಕು ಹಸನಾಗಿರಲಿ ಎಂದು ಬಯಸಿದವಳು. ಈಗ ಲಕ್ಷ್ಮೀ ತನ್ನ ಸಂಸಾರದ ಸಮಸ್ಯೆಗಳನ್ನು ಚಿಗುರಿನಲ್ಲೇ ಚಿವುಟು ಹಾಕಿ ಮುಂದಿನ ಜೀವನವನ್ನು ಸುಂದರವಾಗಿಸಿಕೊಂಡು ಹೊರಟು ಬಿಟ್ಟಳು.
ತಂಗಿಯರ ಜವಾಬ್ದಾರಿ ಹೊತ್ತ ಭಾಗ್ಯ
ಪಾಪ ಭಾಗ್ಯ ತಂಗಿಯ ಬದುಕಿಗೆ ಅಡಿಪಾಯ ಹಾಕಿಕೊಟ್ಟಳು. ಈಗ ತನ್ನ ಮತ್ತೊಬ್ಬ ಸಹೋದರಿ ಪೂಜಾಳ ಮದುವೆಯನ್ನು ಮಾಡಿಸುವ ಜವಾದಾರಿಯನ್ನು ಹೊತ್ತುಕೊಂಡಿದ್ದಾಳೆ. ಗಂಡನಿಂದ ದೂರಾಗಿ, ತಾಳಿಯನ್ನು ತೆಗೆದು ಅಡುಗೆ ಮಾಡುತ್ತಾ ಮನೆಯನ್ನು ನಡೆಸುತ್ತಿದ್ದಾಳೆ ಭಾಗ್ಯ ತನ್ನ ಕುಟುಂಬಕ್ಕೋಸ್ಕರ ಕಷ್ಟಪಡಬೇಕಿದೆ. ಅತ್ತೆ-ಮಾವ, ಮಕ್ಕಳು, ಅಪ್ಪ-ಅಮ್ಮ ಇವರ ಹೊಟ್ಟೆ ತುಂಬಿಸುವ ಜೊತೆಗೆ ಈಗ ಪೂಜಾಳ ಮದುವೆಯನ್ನೂ ಮಾಡಬೇಕಿದೆ. ಮನೆಯ ಮೇಲಿರುವ ಸಾಲ ತೀರಿಸಬೇಕು. ಮನೆಯನ್ನು ನಡೆಸಬೇಕು. ಮಕ್ಕಳ ಓದಿಗೆ ಫೀಸ್ ಕಟ್ಟಬೇಕು. ಇದೆಲ್ಲದರ ಜವಾಬ್ದಾರಿಯನ್ನೂ ಭಾಗ್ಯ ಒಬ್ಬಳೇ ನಿಭಾಯಿಸುತ್ತಿದ್ದಾಳೆ.

ಒಂಟಿಯಾದ ಭಾಗ್ಯ
'ಭಾಗ್ಯಲಕ್ಷ್ಮೀ' ಶುರುವಾದಾಗಿನಿಂದಲೂ ಇಂದಿನವರೆಗೂ ಟಿಆರ್ಪಿಯಲ್ಲೂ ಟಾಪ್‌ನಲ್ಲೇ ಇದ್ದಾಳೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೆಳಗೆ ಬಿದ್ದರೂ ಮತ್ತೆ ಎದ್ದು ನಿಂತಳು. ಆದರೆ, 'ಲಕ್ಷ್ಮೀ ಬಾರಮ್ಮ' ಹಾಗಾಗಲಿಲ್ಲ. ಇನ್ನು ಲಕ್ಷ್ಮೀ ಅಕ್ಕನ ಬಗ್ಗೆ ಒಳ್ಳೆಯದನ್ನೇ ಬಯಸಿದರೂ ಎಂದಿಗೂ ಅಕ್ಕನ ಕಷ್ಟಕ್ಕೆ ಜೊತೆಯಾಗಲಿಲ್ಲ. ತನ್ನ ಬದುಕನ್ನು ಮಾತ್ರವೇ ನೋಡಿಕೊಂಡು ಹೊರಟಿದ್ದಾಳೆ. ತಂಗಿಯ ಮದುವೆ ಮಾಡಿದ ಬಳಿಕವೇ ಒಂಟಿಯಾದ ಭಾಗ್ಯ. ಈಗ ಕಂಪ್ಲೀಟ್ ಆಗಿ ತಂಗಿಯನ್ನು ಮರೆಯುವಂತಾಗಿದೆ.
ಭಾಗ್ಯ ಒಬ್ಬಳೇ ಬರುತ್ತಾಳೆ
ನಿಸ್ವಾರ್ಥದಿಂದ ಬದುಕುವ ಭಾಗ್ಯಳಿಗೂ ಸ್ವಾರ್ಥತೆ ಇಲ್ಲದೇ ಹೋದರೂ ಕೂಡ ಅಕ್ಕನ ಬದುಕಿನ ಬಗ್ಗೆ ತಲೆಕೆಡಿಸಿಕೊಳ್ಳದ ಲಕ್ಷ್ಮೀಗೂ ಬಹಳ ವ್ಯತ್ಯಾಸವಿದೆ. ಹಾಗೆ ನೋಡಿದರೆ ಸದಾ ಸ್ವಾರ್ಥದಿಂದ ಯೋಚಿಸುತ್ತಿದ್ದ ಪೂಜಾ ಈಗ ಬದಲಾಗಿದ್ದು, ಭಾಗ್ಯಕ್ಕನ ಕಷ್ಟಗಳಿಗೆ ಜೊತೆಯಾಗಿ ಅಕ್ಕನ ಜೀವನವನ್ನು ಸರಿ ಮಾಡಲು ಸಾಕಷ್ಟು ಕಷ್ಟ ಕೂಡ ಪಟ್ಟಳು. ಇನ್ಮುಂದೆ ತಂಗಿ ಲಕ್ಷ್ಮೀ ಇಲ್ಲದೆಯೇ ಭಾಗ್ಯ ಒಬ್ಬಳೇ ಬರುತ್ತಾಳೆ ಎಂಬುದಂತೂ ಸತ್ಯ. ಆಗಾಗ್ಗೆ ಲಕ್ಷ್ಮಿ ಪಾತ್ರವನ್ನು ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತರುವ ಸಾಧ್ಯತೆಯೂ ಇದೆ.


Click it and Unblock the Notifications











