Bhoomika Ramesh: ತೆಲುಗಿನಲ್ಲಿ ಕನ್ನಡಿಗರದ್ದೇ ಪಾರುಪತ್ಯ; ಕನ್ನಡ ಮರಿಬೇಡಿ ಎಂದು ಲಕ್ಷ್ಮೀಗೆ ಸಲಹೆ
ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಕಲಾವಿದರೆಲ್ಲಾ ಬೇರೆ ಭಾಷೆಯಲ್ಲಿಯೇ ಮಿಂಚುತ್ತಿರುವುದು ಜಾಸ್ತಿ. ಕನ್ನಡದಲ್ಲಿ ಒಂದೊ ಎರಡೋ ಧಾರಾವಾಹಿ ಮಾಡಿದವರಿಗೆ ತೆಲುಗಿನಿಂದ ಬೇಗನೇ ಆಫರ್ ಬರುತ್ತಿವೆ. ಅದು ಖುಷಿಯ ವಿಚಾರ ಕೂಡ ಹೌದು. ನಿನ್ನೆಯಷ್ಟೇ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಪವಿತ್ರಾ ಜಯರಾಂ ಪಕ್ಕಾ ಕನ್ನಡದ ನಟಿ. ಆದರೆ 'ತ್ರಿನಯನಿ' ಧಾರಾವಾಹಿಯಲ್ಲಿ ಖಳನಟಿಯಾಗಿ ಮಿಂಚಿದ್ದರು.
ಈಗಾಗಲೇ 'ಗಟ್ಟಿಮೇಳ' ನಟಿ ನಿಶಾ ಕೂಡ ತೆಲುಗಿನಲ್ಲಿದ್ದಾರೆ. ಜೀ ತೆಲುಗಿನಲ್ಲಿ ಬರುವ ಬಹುತೇಕ ಧಾರಾವಾಹಿಗಳಲ್ಲಿ ಕನ್ನಡಿಗರೇ ಇದ್ದಾರೆ. ಇದೀಗ ಹೊಸದಾಗಿ ಶುರುವಾಗುತ್ತಿರುವ 'ಮೇಘಾ ಸಂದೇಶಂ' ಧಾರಾವಾಹಿಗೆ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ಭೂಮಿಕಾ ಎಂಟ್ರಿ ಕೊಟ್ಟಿದ್ದಾರೆ.

ತೆಲುಗಿಗೆ ಹಾರಿದ ಭೂಮಿಕಾ ರಮೇಶ್
ಕಲರ್ಸ್ ಕನ್ನಡದಲ್ಲಿ ಬರುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಭೂಮಿಕಾ ರಮೇಶ್ ಲಕ್ಷ್ಮೀಯಾಗಿ ಕಾಣಿಸಿಕೊಂಡಿದ್ದಾರೆ. ವೈಷ್ಣವ್ ಹಾಗೂ ಲಕ್ಷ್ಮೀ ಈಗಷ್ಟೇ ಪ್ರೀತಿಯಲ್ಲಿ ಬೀಳುತ್ತಿದ್ದಾರೆ. ಇದೀಗ ಲಕ್ಷ್ಮೀ ಪಾತ್ರಧಾರಿ ಭೂಮಿಕಾ ರಮೇಶ್ ತೆಲುಗಿಗೆ ಹಾರಿದ್ದಾರೆ. ಹೊಸ ಪ್ರೋಮೋವೊಂದನ್ನು ಅವರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಲಕ್ಷ್ಮೀ ಬಾರಮ್ಮ' ಕಥೆಯೇನು?
ಇದು ಭೂಮಿಕಾ ಅಭಿಮಾನಿಗಳಿಗೆ ಖುಷಿ ನೀಡಿದ್ದರು, 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಕಥೆ ಏನು ಎಂಬುದನ್ನು ಯೋಚನೆ ಮಾಡುತ್ತಿದ್ದಾರೆ. ಪ್ರೋಮೋ ನೋಡಿದರೆ ಮುಖ್ಯ ಪಾತ್ರದಲ್ಲಿಯೇ ಭೂಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್ ಟು ಬೆಂಗಳೂರು ಜರ್ನಿ ಸಾಧ್ಯವಾ..? 'ಲಕ್ಷ್ಮೀ ಬಾರಮ್ಮ'ದಲ್ಲಿ ಪಾತ್ರ ಬದಲಾಗಬಹುದಾ? ಎಂದು ಊಹೆ ಮಾಡುತ್ತಿದ್ದಾರೆ.
ಭೂಮಿಕಾಗೆ ಜೋಡಿಯಾದ ಅಗಸ್ತ್ಯ
ತೆಲುಗಿನಲ್ಲಿ ಹೊಸ ಧಾರಾವಾಹಿಯೇ ಶುರುವಾದರೂ ಕೂಡ ಆ ಧಾರಾವಾಹಿಯಲ್ಲಿ ಇಬ್ಬರು ಕನ್ನಡಿಗರೆ ಎಂಬುದು ವಿಶೇಷವಾಗಿದೆ. ಭೂಮಿಕಾ ಜೊತೆಗೆ ಹೀರೋ ಆಗಿ ಕನ್ನಡದ ಅಭಿನವ್ ವಿಶ್ವನಾಥನ್ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ಅಭಿನವ್, ಅಗಸ್ತ್ಯ ಪಾತ್ರವನ್ನು ನಿರ್ವಹಿಸುತ್ತದ್ದರು. ಇದೀಗ 'ಮೇಘ ಸಂದೇಶಂ' ಧಾರಾವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

ಸೊಗಸಾಗಿದೆ ಪ್ರೋಮೋ
'ಮೇಘ ಸಂದೇಶಂ' ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ರಿಚ್ ಆಗಿ ಬಂದಿದೆ. ಅಷ್ಟೇ ಅಲ್ಲ ಒಂದು ಗಟ್ಟಿ ಕಥೆಯೂ ಇದೆ ಎಂಬುದಂತು ಅರ್ಥವಾಗಿದೆ. ಹುಟ್ಟಿದಾಗಲೇ ಯಾರದ್ದೋ ಸ್ವಾರ್ಥಕ್ಕೆ ಕಸದ ಬುಟ್ಟಿಗೆ ಬೀಳುವ ಮಗು, ಬಡತನದಲ್ಲಿಯೇ ಬೆಳೆಯುತ್ತದೆ. ಆ ಮಗುವೇ ಭೂಮಿ. ಆ ಕಡೆ ಅವರ ತಂದೆಯೂ ಮಗಳ ನೆನಪಲ್ಲೇ ಕೊರಗುತ್ತಾನೆ. ಮುದ್ದು ಮುದ್ದಾಗ ಒಳ್ಳೆತನದಲ್ಲಿ ಬೆಳೆದ ಭೂಮಿ, ಸಾಫ್ಟ್ ನೇಚರ್‌ನಲ್ಲಿ ಕಾಣಿಸಿಕೊಳ್ಳುತ್ತಾಳೆ. ನಟ ಅಭಿನವ್ ಶ್ರೀಮಂತರ ಮನೆಯ ಮಗ. ಈ ಇಬ್ಬರಿಗೂ ಪ್ರೀತಿ ಆಗಬಹುದು. 'ಮೇಘ ಸಂದೇಶ' ಯಾರ ಕಡೆಯಿಂದ ಎಂಬುದನ್ನು ಸೀರಿಯಲ್ ಶುರುವಾದ ಮೇಲೆ ನೋಡಬಹುದು.
ಕನ್ನಡ ಮರಿಬೇಡಿ ಎಂದ ನೆಟ್ಟಿಗರು
ಭೂಮಿಕಾ ರಮೇಶ್ ಪ್ರೋಮೋ ನೋಡಿದರೇ ತೂಕದ ಪಾತ್ರವೇ ಸಿಕ್ಕಿದೆ ಎನಿಸುತ್ತದೆ. ಹೀಗಾಗಿ ಅಲ್ಲಿಯೇ ಹೆಚ್ಚು ಸಮಯ ನೀಡುತ್ತಾರೆ. ಭೂಮಿಕಾ ತೆಲುಗಿಗೆ ಹೋಗಿದ್ದಕ್ಕೆ ಅವರ ಸಹ ಕಲಾವಿದರು ಸಹ ಖುಷಿ ಪಟ್ಟಿದ್ದಾರೆ. ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ. ಅಷ್ಟರೆ ಯಾಕೆ ಲಕ್ಷ್ಮೀಯ ಅತ್ತೆ ಕಾವೇರಿ ಅಲಿಯಾಸ್ ಸುಷ್ಮಾ ನಾನಯ್ಯ ಕೂಡ ವಿಶ್ ಮಾಡಿದ್ದಾರೆ. ಇನ್ನು ಹಲವರು ಬೇಸರ ಮಾಡಿಕೊಂಡಿದ್ದಾರೆ. ತೆಲುಗಿಗೆ ಹೋದರೆ ಕನ್ನಡವನ್ನು ಮರಿಬೇಡಿ ಎಂದಿದ್ದಾರೆ. ಇನ್ನು ಕೆಲವರು ತೆಲುಗಿನಲ್ಲಿ ಕನ್ನಡಿಗರದ್ದೇ ಹವಾ ಅಂತ ಬೆಂಕಿ ಸಿಂಬಲ್ ಹಾಕಿದ್ದಾರೆ.


Click it and Unblock the Notifications











