Neha Gowda: 'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಗೊಂಬೆ 'ಲಚ್ಚಿ' ಜೊತೆ ಮತ್ತೆ ಕಿರುತೆರೆಗೆ ಎಂಟ್ರಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಗೊಂಬೆ ಪಾತ್ರದ ಮೂಲಕ ಕರುನಾಡ ಜನಮನ ಗೆದ್ದ ನೇಹ ಗೌಡ ಅವರು ಇದೀಗ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.
ಹೌದು! ಗೊಂಬೆ ಎಂಬ ಪಾತ್ರದ ಮೂಲಕ ತಮ್ಮ ನಟನೆ ಹಾಗೂ ಮುಗ್ಧತೆಯಿಂದ ಕನ್ನಡ ಧಾರಾವಾಹಿ ಪ್ರಿಯರ ಅಚ್ಚುಮೆಚ್ಚು ಎನಿಸಿಕೊಂಡ ಚೆಲುವೆ ನೇಹಾ ಗೌಡ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ನಂತರ ಇದೀಗ 'ಲಚ್ಚಿ' ಧಾರಾವಾಹಿಯ ಮೂಲಕ ಮತ್ತೆ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ ನೇಹಾ ಗೌಡ.
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮುಗಿದು ಈಗಾಗಲೇ ಎರಡು ವರ್ಷಗಳು ಕಳೆದರೂ ನೇಹ ಗೌಡ ಅವರು ಗೊಂಬೆ ಅಥವಾ ಶ್ರುತಿಯಾಗಿಯೇ ಜನರಿಗೆ ಪರಿಚಯ. ಬರೋಬ್ಬರಿ ಏಳು ವರ್ಷಗಳ ಕಾಲ ಗೊಂಬೆಯಾಗಿ ನಟಿಸಿದ್ದ ನೇಹಾ ಗೌಡ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ನಂತರ ಯಾವುದೇ ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಗೆ ತೆಗೆದುಕೊಳ್ಳಲಿಲ್ಲ. ಇದೀಗ 'ಲಚ್ಚಿ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.

ತಮಿಳು ಧಾರಾವಾಹಿಗಳಲ್ಲೂ ಜನಪ್ರಿಯ
ತಮಿಳಿನ 'ರೋಜಾ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟ ಕನ್ನಡದ ಗೊಂಬೆ ಮುಂದೆ ತಾಯಿ ಸೆಲ್ವಂ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ 'ಪಾವಂ ಗಣೇಶನ್'ನಲ್ಲಿ ನಾಯಕಿಯಾಗಿಯೂ ಮೋಡಿ ಮಾಡಿದ್ದರು. ಮಾತ್ರವಲ್ಲದೇ ತೆಲುಗಿನ 'ಸ್ವಾತಿ ಚಿನಕುಲು' ಹಾಗೂ 'ಕಲ್ಯಾಣ ಪರಿಸು' ಧಾರಾವಾಹಿಗಳಲ್ಲಿ ನಟನಾ ಕಂಪನ್ನು ಪಸರಿಸಿದ ಬೆಡಗಿ ನೇಹಾ ಗೌಡ.

ಸಣ್ಣ ಗ್ಯಾಪ್ ಬಳಿಕ ಮತ್ತೆ ಎಂಟ್ರಿ
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯು ಮುಕ್ತಾಯಗೊಂಡು ಈಗಾಗಲೇ ವರ್ಷ ಎರಡಾಗುತ್ತಾ ಬಂತು. ಆದರೂ ಜನ ಇಂದಿಗೂ ಗೊಂಬೆಯನ್ನು ಮರೆತಿಲ್ಲ. ಯಾಕೆಂದರೆ ಇಂದಿಗೂ ಜನ ನನ್ನನ್ನು ಗೊಂಬೆಯಾಗಿಯೇ ಗುರುತಿಸುತ್ತಾರೆ. ತುಂಬಾ ಖುಷಿಯಾಗುತ್ತದೆ. ಸಣ್ಣ ಗ್ಯಾಪ್ ನ ನಂತರ ನಾನು ಮತ್ತೆ ಕಿರುತೆರೆಗೆ ಮರಳುತ್ತಿರುವುದು ಸಂತಸವಿದೆ. ಹಳ್ಳಿ ಮಹಿಳೆಯಾಗಿ ನಾನು ತೆರೆ ಮೇಲೆ ಬರಲಿದ್ದು, ಜನ ನನ್ನನ್ನು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬ ಕುತೂಹಲವೂ ಸಹಜವಾಗಿ ಇದೆ" ಎನ್ನುತ್ತಾರೆ ನೇಹಾ ಗೌಡ.

'ರಿಯಲ್ ಕನಸು ರೀಲ್‌ನಲ್ಲಿ ನೆರವೇರಿತು'
ನಟನೆಯ ಹೊರತಾಗಿ ನೇಹಾ ಗೌಡಗೆ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಕನಸಿತ್ತು. ರಿಯಲ್ ಲೈಫ್‌ನಲ್ಲಿ ಅದು ಸಾಧ್ಯವಾಗದಿದ್ದರೂ ರೀಲ್ ಲೈಫ್‌ನಲ್ಲಿಯಾದರೂ ತನ್ನ ಕನಸು ನನಸು ಮಾಡಿಕೊಂಡಿದ್ದಾರೆ ನೇಹಾ ಗೌಡ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಮೂರುಗಂಟು' ಎಂಬ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನೇಹಾ ಮಿಂಚಿದ್ದಾರೆ. ಹೌದು, 'ಮೂರುಗಂಟು' ಧಾರಾವಾಹಿಯಲ್ಲಿ ನಡೆದ 'ಸಪ್ತಪದಿ' ಎನ್ನುವ ಶೋನ ನಿರೂಪಕಿಯಾಗಿ ನೇಹಾ ಕಾಣಿಸಿಕೊಂಡಿದ್ದು "ನನಗೆ ನಿಜಜೀವನದಲ್ಲಿಯೂ ನಿರೂಪಕಿಯಾಗಿ ಮೋಡಿ ಮಾಡಬೇಕೆಂಬ ಕನಸಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ರೀಲ್ ಲೈಫ್‌ನಲ್ಲಿ ನಿರೂಪಕಿಯ ಪಾತ್ರದಲ್ಲಿ ಅಭಿನಯಿಸಿರುವುದು ಖುಷಿ ತಂದಿದೆ" ಎಂದು ಹೇಳಿದ್ದರು ನೇಹಾ ಗೌಡ.

ಬಿಗ್‌ಬಾಸ್ ಮೂಲಕವೂ ಫೇಮಸ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ ಸೀಸನ್ 1' ರಲ್ಲಿ ತಮ್ಮ ಪತಿ ಚಂದನ್ ಅವರೊಂದಿಗೆ ಭಾಗವಹಿಸಿದ್ದು ವಿನ್ನರ್ ಆಗಿ ಹೊರಹೊಮ್ಮಿದ್ದರು. ನಂತರ ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 9'ರಲ್ಲಿ ಸ್ಪರ್ಧಿಯಾಗಿಯೂ ನೇಹಾ ಗೌಡ ಭಾಗವಹಿಸಿದ್ದರು.


Click it and Unblock the Notifications