Lakshmi Baramma: ಲಕ್ಷ್ಮೀಗೆ ಕಶ್ಯಪ್ ಮನೆಯಲ್ಲಿ ಸೀಕ್ರೆಟ್ ಗಳ ಸವಾಲು.. ಸುಪ್ರೀತಾಳ ಗಂಡನ್ನ ಹುಡುಕ್ತಾಳಾ..?
ಲಕ್ಷ್ಮೀ ಮದುವೆಯಾಗಿ ಕಶ್ಯಪ್ ಮನೆಗೆ ಬಂದಾಗ ಇಷ್ಟೊಂದು ಸವಾಲುಗಳು ಎದುರಾಗುತ್ತವೆ ಅಂತ ನೆನೆಸಿಯೂ ಇರಲಿಲ್ಲ. ಒಂದು ಕಡೆ ಕಾವೇರಿ ಒಂಥರ ಆಡ್ತಾಳೆ, ವೈಷ್ಣವ್ ಗರ್ಲ್ ಫ್ರೆಂಡ್ ಬಗ್ಗೆ ಕೇಳಿದ್ರು ಬೇರೆಯದ್ದೇ ರೀತಿ ಆಡ್ತಾರೆ. ಇನ್ನು ಈಗ ಹೊಸದೊಂದು ಸಮಸ್ಯೆ ಶುರುವಾಗಿದೆ. ಅದುವೇ ಸುಪ್ರೀತಾಳ ಗಂಡನ ವಿಚಾರ.
ಅಂಕಿತ್ ಅಂದ್ರೆ ಮನೆಯವರಿಗೆಲ್ಲಾ ತುಂಬಾ ಅಂದ್ರೆ ತುಂಬಾ ಇಷ್ಟ. ಅಂಕಿತ್ ಕೂಡ ಮನೆಯವರಲ್ಲಿ ಒಬ್ಬನಾಗಿದ್ದಾನೆ. ಎಲ್ಲರನ್ನು ನಕ್ಕು ನಲಿಸುತ್ತಾ ಇರುತ್ತಾನೆ. ಅಂಕಿತ್ ಇದ್ದರೆ ಮನೆ ಒಂದು ರೀತಿ ನಗು ನಗುತ್ತಾ ಇರುತ್ತದೆ. ವೈಷ್ಣವ್ ಮತ್ತು ಲಕ್ಷ್ಮೀಗೆ ಯಾವಾಗಲೂ ಸಪೋರ್ಟಿವ್ ಆಗಿರುವ ಅಂಕಿತ್ ಇಂದು ಅದೇಕೋ ಅಪ್ಪನ ಜಪ ಮಾಡುತ್ತಿದ್ದಾನೆ.

ತಂದೆಯ ಬಗ್ಗೆ ಕೇಳಿದ ಅಂಕಿತ್
ಅಂಕಿತ್ ಇಷ್ಟು ದಿನ ತಂದೆಯ ಬಗ್ಗೆ ಅಮ್ಮನ ಬಳಿ ಏನು ಕೇಳಿರಲಿಲ್ಲ. ಆದರೆ, ಇವತ್ತು ಅಪ್ಪನನ್ನು ನೋಡಲೇಬೇಕೆಂದು ಹಠ ಹಿಡಿದಿದ್ದಾನೆ. "ನಿಂಗಂತು ಗಂಡ ಬಿಟ್ಟವಳು ಎಂದಾಗಲೂ ನೋವಾಗಲ್ಲ. ಆದರೆ, ನಂಗೆ ಆ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ನೋವಾಗುತ್ತೆ. ನಮ್ಮ ತಂದೆ ಯಾರು ಅಂತ ಹೇಳು. ಅವರ ಫೋಟೋ ಆಗಲಿ, ಹೆಸರಾಗಲಿ ಏನು ಗೊತ್ತಿಲ್ಲ. ನಂಗೆ ಇವತ್ತು ನನ್ನ ತಂದೆಯ ಬಗ್ಗೆ ಎಲ್ಲಾ ಸತ್ಯ ತಿಳಿಯಲೇಬೇಕು" ಎಂದು ಹಠ ಮಾಡಿದ್ದಾನೆ.
ಅವನ ಹೆಸರೆತ್ತಬೇಡ ಎಂದ ಸುಪ್ರೀತಾ
ಸುಪ್ರೀತಾ ಇಷ್ಟು ದಿನ ತನ್ನ ಅಣ್ಣನ ಮನೆಯಲ್ಲಿಯೇ ಉಳಿದು ಬಿಟ್ಟಿದ್ದಾಳೆ. ಕಾವೇರಿಗೂ ಸುಪ್ರೀತಾಗೂ ಜಗಳ ಆದಾಗಲೂ ಮನೆ ಬಿಟ್ಟು ಹೋಗುವ ಸಾಹಸ ಮಾಡಲಿಲ್ಲ. ಯಾಕಂದ್ರೆ ಅಣ್ಣನ ಮನೆ ಬಿಟ್ಟರೆ ಸುಪ್ರೀತಾಗೆ ಬೇರೆ ದಾರಿ ಇಲ್ಲ. ಆದರೆ, ಗಂಡ ಯಾರು, ಎಲ್ಲಿದ್ದಾನೆ ಅನ್ನೋದೆ ಗೊತ್ತಿಲ್ಲ. ಮಗ ಈಗ ಅಪ್ಪನ ಬಗ್ಗೆ ಕೇಳಿದರೆ ಕಣ್ಣಲ್ಲಿ ನೀರು, ಧ್ವನಿಯಲ್ಲಿ ನಡುಕವಿತ್ತು. "ಇನ್ಯಾವತ್ತು ಅವನು ಬೇಕು ಎನ್ನಬೇಡ. ಅವನ ಹೆಸರೆತ್ತಬೇಡ. ಅಪ್ಪ ಬೇಕು ಅಂತ ಹೊರಟರೆ ಅಂದೆ ನನ್ನ ಹೆಣ ನೋಡಬೇಕಾಗುತ್ತದೆ" ಎಂದೇ ಹೆದರಿಸಿದ್ದಾಳೆ.

ಅಪ್ಪನನ್ನು ಹುಡುಕುತ್ತೇನೆಂದು ಹಠ
ಅಂಕಿತ್ ಮಾತಿನಿಂದ ಸುಪ್ರೀತಾ ತುಂಬಾ ನೊಂದಿದ್ದಾಳೆ. 19 ವರ್ಷದಿಂದ ಅವನ ನೆನಪೇ ಬಾರದಂತೆ ಬೆಳೆಸಿದರೂ ಈಗ ಮತ್ತೆ ಅಪ್ಪನನ್ನೇ ಕೇಳುತ್ತಿದ್ದಾನಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ಅಲ್ಲಿಂದ ಹೊರಗೆ ಹೋಗಿದ್ದಾಳೆ. ಅಂಕಿತ್ ಕೂಡ ಅಮ್ಮನ ಹಿಂದೆಯೇ ಮತ್ತೆ ಅಪ್ಪನ ಬಗ್ಗೆ ಕೇಳೋದಕ್ಕೆ ಹೋಗಿದ್ದಾನೆ. ಆಗ ಲಕ್ಷ್ಮೀ ತಡೆದಿದ್ದಾಳೆ. ಈಗ ಬೇಡ. ಅಮ್ಮನನ್ನು ಸುಮ್ಮನೇ ಬಿಡಿ, ಆಮೇಲೆ ನೋಡೋಣಾ, ಮಾತಾಡೋಣಾ ಎಂದಾಗ ಅಂಕಿತ್ ಮತ್ತೆ, ಒಂದು ವಾರವಷ್ಟೇ. ಆಮೇಲೆ ನಾನೇ ಹುಡುಕುತ್ತೀನಿ ಎಂದಿದ್ದಾನೆ.
ಸುಪ್ರೀತಾಳ ಗಂಡನ್ನು ಹುಡುಕುತ್ತಾಳಾ..?
ಲಕ್ಷ್ಮೀಗೆ ಇದೆಲ್ಲವನ್ನು ನೋಡಿ ತಲೆ ಕೆಟ್ಟಿದೆ. ಮನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಸೀಕ್ರೆಟ್ ಇದೆಯಲ್ಲ ಎಂದು ಯೋಚಿಸಿದ್ದಾಳೆ. ಅತ್ತೆ ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುವುದನ್ನು ಲಕ್ಷ್ಮೀ ಗಮನಿಸಿದ್ದಾಳೆ. ಅದರಲ್ಲೂ ಸುಪ್ರೀತಾಳ ಅಮ್ಮನ ವಿಚಾರ ಬಂದಾಗೆಲ್ಲಾ ತಲೆ ಸುತ್ತಿಯೇ ಬಿದ್ದು ಬಿಡುತ್ತಾಳೆ. ಇದನ್ನು ಲಕ್ಷ್ಮೀ ಗಮನಿಸಿದ್ದಾಳೆ. ಕೀರ್ತಿ ವಿಚಾರ ಬಂದಾಗಲೂ ವಿಚಿತ್ರವಾಗಿ ಆಡುತ್ತಾಳೆ. ಈಗ ಸುಪ್ರೀತಾಳ ಗಂಡನ ವಿಚಾರ ಮತ್ತಷ್ಟು ತಲೆ ಕೆಡಿಸಿದೆ. ಯಾವುದಕ್ಕೆ ಅಂತ ಗಮನ ಕೊಡುತ್ತಾಳೆ ಲಕ್ಷ್ಮೀ.


Click it and Unblock the Notifications











