'ಲಕ್ಷ್ಮಿ ನಿವಾಸ' ಧಾರಾವಾಹಿಯ ನಟ ಮಧು ಹೆಗಡೆ ಕೇವಲ ನಟನಲ್ಲ.. ಸಂಗೀತ ನಿರ್ದೇಶಕನೂ ಹೌದು!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿನಿವಾಸ'ವೂ ಒಂದು. ಶ್ರೀನಿವಾಸ ಮತ್ತು ಲಕ್ಷ್ಮಿ ದಂಪತಿಗಳಿಗೆ ಐದು ಮಕ್ಕಳು. ಸಂತೋಷ್, ಹರೀಶ್, ಭಾವನಾ, ಜಾಹ್ನವಿ ನಾಲ್ಕು ಮಕ್ಕಳಾದರೆ ವೆಂಕಿ ಸಾಕು ಮಗ.
ಮನೆಯ ಹಿರಿಮಗ ಸಂತೋಷ್ ಆಗಿ ನಟಿಸುತ್ತಿರುವ ನಟನ ಹೆಸರು ಮಧು ಹೆಗಡೆ. 'ಲಕ್ಷ್ಮಿ ನಿವಾಸ' ಧಾರಾವಾಹಿಯ ವೀಕ್ಷಕರು ನೀವು ಎಂದಾಗಿದ್ದರೆ ಸಂತೋಷ್ ನ ಪಾತ್ರ ಪರಿಚಯ ಮಾಡಬೇಕೆಂದಿಲ್ಲ. ನೀವು ಒಂದು ವೇಳೆ ಧಾರಾವಾಹಿ ನೋಡುತ್ತಿಲ್ಲವೆಂದಾದರೆ, ನಾವು ಸಂತೋಷ್ ಪರಿಚಯ ನಿಮಗೆ ಈ ಲೇಖನದ ಮೂಲಕ ಮಾಡಿಸುತ್ತೇವೆ.

ಪಕ್ಕಾ ಕಂಜ್ಯೂಸ್ ಆಗಿರುವ ಸಂತೋಷ್‌ನದ್ದು ಸಿಡುಕು ಸ್ವಭಾವ. ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುವ, ಮನೆಯ ಮಂದಿಯೊಂದಿಗೆ ರೇಗುವ ಸಂತೋಷ್‌ಗೆ ತಾನಾಯಿತು, ತನ್ನ ಹೆಂಡತಿ, ಮಗನಾಯಿತು. ಉಳಿದವರಿಗೆಲ್ಲಾ ಏನು ಬೇಕಾದರೂ ಆದರೂ ಅವನಿಗೆ ಚಿಂತೆಯಿಲ್ಲ. ಅದು ಅಪ್ಪ ಅಮ್ಮ ಆಗಿರಲಿ, ಒಡ ಹುಟ್ಟಿದವರಾಗಿರಲಿ, ಅವರ ಬಗ್ಗೆ ಕಿಂಚಿತ್ತೂ ಯೋಚನೆ ಇಲ್ಲದವನು.
ಮನೆಯ ಹಿರಿ ಮಗನಾಗಿರುವ ಆತನಿಗೆ ಮನೆಯ ಬಗ್ಗೆ ಕಿಂಚಿತ್ತೂ ಯೋಚನೆಯಿಲ್ಲ. ಹಿರಿಮಗನೆಂಬ ಜವಾಬ್ಧಾರಿಯಂತೂ ಎಳ್ಳಷ್ಟೂ ಇಲ್ಲ. ದುಡಿದದ್ದನ್ನೆಲ್ಲಾ ಕೂಡಿ ಹಾಕುವ ಆತನಿಗೆ ತಾನು ಉದ್ಧಾರವಾಗಬೇಕೆಂಬುದೇ ಅವನ ಉದ್ದೇಶ. ಅದಕ್ಕಾಗಿ ಅಪ್ಪ ಕೂಡಿಟ್ಟ ಹಣವನ್ನು ಬೇಕಾದರೂ ಉಪಯೋಗಿಸಲು ಹಿಂದು ಮುಂದು ನೋಡದ ಸಂತೋಷ್ ತೆರೆ ಮೇಲೆ ಬಂದರೆ ಸಾಕು ಬಿಡಿ, ವೀಕ್ಷಕರ ಸಹಸ್ರನಾಮಾರ್ಚನೆ ಗ್ಯಾರೆಂಟಿ.
ಅಂದ ಹಾಗೇ ಸಂತೋಷ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿರುವ ಮಧು ಹೆಗಡೆ ನಟನೆಗೆ ಫಿದಾ ಆಗದವರಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಲ್ಲವಿ ಅನುಪಲ್ಲವಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿರುವ ಮಧು ಹೆಗಡೆ ರಂಗಭೂಮಿ ಕಲಾವಿದರು ಹೌದು.
ನೀನಾಸಂ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಮಧು ಹೆಗಡೆ ಅವರ ಕಿರುತೆರೆ ಪಯಣ ಶುರುವಾಗಿದ್ದು 'ಮೌನರಾಗ' ಧಾರಾವಾಹಿಯ ಮೂಲಕ. ಮತ್ತೆ ಹಿಂತಿರುಗಿ ನೋಡದ ಮಧು ಹೆಗಡೆ ನಾಯಕನಾಗಿ ನಟಿಸಿದ್ದು ಮಾತ್ರವಲ್ಲದೇ ಪೋಷಕ ನಟನಾಗಿ ಕಾಣಿಸಿಕೊಂಡು ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.
'ಮಳೆಬಿಲ್ಲು', 'ಗುಪ್ತಗಾಮಿನಿ', 'ಮನ್ವಂತರ', 'ಗೆಜ್ಜೆಪೂಜೆ', 'ಜೋಗುಳ', 'ಪಲ್ಲವಿ ಅನುಪಲ್ಲವಿ' ಹೀಗೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮಧು ಹೆಗಡೆ ನಟನಾ ಪ್ರತಿಭೆ ಕೇವಲ ಕಿರುತೆರೆಗೆ ಮಾತ್ರವಲ್ಲ ಸೀಮಿತವಲ್ಲ. ಬದಲಿಗೆ ಹಿರಿತೆರೆಯಲ್ಲಿಯೂ ಇವರು ನಟನಾ ಛಾಪನ್ನು ಪಸರಿಸಿದ್ದಾರೆ.
'ನಾಯಿ ನೆರಳು', 'ಕವಚ', 'ಮಿ.ಗರಗಸ', ಮೂರುಗುಟ್ಟು ಒಂದು ಸುಳ್ಳು ಒಂದು ನಿಜ, 'ನಮ್ ನಾಣಿ ಮದ್ವೆ ಪ್ರಸಂಗ', 'ಪ್ರಾಯಶಃ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ಮಧು ಹೆಗಡೆ ಸಾಹಸಸಿಂಹ ವಿಷ್ಣುವರ್ಧನ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ
ನಟನೆಯ ಹೊರತಾಗಿ ಸಂಗೀತದತ್ತ ವಿಶೇಷ ಒಲವು ಹೊಂದಿದ್ದಾರೆ ಮಧು ಹೆಗಡೆ. ಬಿಡುವು ಸಿಕ್ಕಾಗಲೆಲ್ಲಾ ತಾವು ಹಾಡಿರುವ ಹಾಡುಗಳನ್ನು ಇನ್‌ಸ್ಟಾಗ್ರಾಂ, ಫೇಸ್ ಬುಕ್‌ನಲ್ಲಿ ಶೇರ್ ಮಾಡುತ್ತಿದ್ದರು ಮಧು ಹೆಗಡೆ. ಇದರ ಜೊತೆಗೆ ಸಂತೋಷದ ವಿಚಾರವೆಂದರೆ ರಾಮ್ ವೈದ್ಯ ನಿರ್ದೇಶನದ 'ಒಂದಂಕೆ ಕಾಡು' ಸಿನಿಮಾದ ಸಂಗೀತ ನಿರ್ದೇಶನವನ್ನು ಸ್ವತಃ ಮಧು ಹೆಗಡೆ ಅವರೇ ಮಾಡಿದ್ದರು. ಸಂಗೀತ ನಿರ್ದೇಶಕನಾಗಿ ಇದು ಅವರ ಮೊದಲ ಸಿನಿಮಾವೂ ಹೌದು. ಜೊತೆಗೆ ಈ ಸಿನಿಮಾ ತೆಲುಗಿನಲ್ಲೂ ತೆರೆ ಕಂಡಿದ್ದು, ಅಲ್ಲೂ ಕೂಡಾ ಮಧು ಹೆಗಡೆ ಅವರೇ ಸಂಗೀತ ನಿರ್ದೇಶನ ಮಾಡಿದ್ದು ವಿಶೇಷ.
ನಾಯಕನಟನಾಗಿಯೋ, ಖಳನಾಯಕನಾಗಿಯೋ ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಳ್ಳುವುದು ದೊಡ್ಡ ವಿಷಯವಲ್ಲ. ಅದರ ಹೊರತಾಗಿ ಅಣ್ಣನ ಪಾತ್ರವೋ, ತಮ್ಮನ ಪಾತ್ರವೋ, ಭಾವನ ಪಾತ್ರವೋ ಇಂತಹ ಪಾತ್ರಗಳಿಂದ ಜನಪ್ರಿಯತೆ ದೊರಕುವುದು ತೀರಾ ಅಪರೂಪ. ಅಂತಹ ಜನಪ್ರಿಯತೆ ಮಧು ಹೆಗಡೆ ಅವರ ಸಂತೋಷ್ ಪಾತ್ರಕ್ಕೆ ದೊರಕಿದೆ.


Click it and Unblock the Notifications











