ಚಂದನವನಕ್ಕೆ ಕಾಲಿಟ್ಟ 'ಲಕ್ಷ್ಮಿ ನಿವಾಸ'ದ ಚಂದನಾ; ಯಾವುದು ಆ ಸಿನಿಮಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳ ಪೈಕಿ 'ಲಕ್ಷ್ಮಿನಿವಾಸ'ವೂ ಒಂದು. 'ಲಕ್ಷ್ಮಿನಿವಾಸ' ಧಾರಾವಾಹಿಯಲ್ಲಿ ನಾಯಕಿ ಭಾವನಾ ತಂಗಿ ಜಾಹ್ನವಿಯಾಗಿ ಅಭಿನಯಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಚಂದನಾ ಅನಂತಕೃಷ್ಣ. ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಚಂದನಾ ಅನಂತಕೃಷ್ಣ ಇದೀಗ ಸಿನಿಮಾಗೂ ಕಾಲಿಟ್ಟಿದ್ದಾರೆ.
ಹೌದು, 'ಭಾವ ತೀರ ಯಾನ' ಸಿನಿಮಾದಲ್ಲಿ ಚಂದನಾ ಅನಂತಕೃಷ್ಣ ಅವರು ನಟಿಸಿದ್ದು ಆ ಮೂಲಕ ಸಿನಿಮಾದಲ್ಲಿಯೂ ನಟನಾ ಕಂಪನ್ನು ಈಕೆ ಪಸರಿಸುತ್ತಿದ್ದಾರೆ. ಮಯೂರ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಅವರು ಸೇರಿ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಚಂದನಾ ಅನಂತಕೃಷ್ಣ ಅವರು ಧೃತಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಮುಂದಿನ ಶುಕ್ರವಾರ ಅಂದರೆ ಫೆಬ್ರವರಿ 21ರಂದು ಈ ಸಿನಿಮಾ ತೆರೆ ಕಾಣಲಿದೆ.

ಒಂದು ಉತ್ತಮ ಪಾತ್ರದ ಮೂಲಕ ಚಂದನವನಕ್ಕೆ ಕಾಲಿಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇಲ್ಲಿಯವರೆಗೆ ನಾನು ಕೇವಲ ಧಾರಾವಾಹಿಗಳಲ್ಲಷ್ಟೇ ಅಭಿನಯಿಸಿದ್ದು ಅವುಗಳು ನನ್ನ ಸ್ವಭಾವಕ್ಕೆ ತುಂಬಾ ಹತ್ತಿರವಾಗಿತ್ತು. ಇದೀಗ 'ಭಾವ ತೀರ ಯಾನ' ಸಿನಿಮಾದಲ್ಲಿ ಧೃತಿಯಾಗಿ ನಾನು ನಟಿಸುತ್ತಿದ್ದು ಪ್ರೌಢತೆಯುಳ್ಳಂತಹ ಪಾತ್ರವದು. ನನ್ನ ಪಾತ್ರದ ಸುತ್ತಾ ಬೇರೆ ಪಾತ್ರಗಳು ಸುತ್ತುವುದು ವಿಶೇಷ. ಒಂದೇ ತರಹದ ಪಾತ್ರಗಳಲ್ಲಿ ನಟಿಸುವುದು ನನಗಿಷ್ಟವಿಲ್ಲ. ಬದಲಿಗೆ ವಿಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುವ ಬಯಕೆ. ಮಾತ್ರವಲ್ಲ ಸಂಗೀತ ಮತ್ತು ನೃತ್ಯಕ್ಕೆ ಹತ್ತಿರವಾದಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಚಂದನಾ ಅನಂತಕೃಷ್ಣ.
ಚಂದನಾ ಅನಂತಕೃಷ್ಣ ನಟನಾ ಪಯಣ ಶುರುವಾಗಿದ್ದು 'ಪುಟ್ಮಲ್ಲಿ' ಧಾರಾವಾಹಿಯ ಮೂಲಕ. 'ಪುಟ್ಮಲ್ಲಿ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸಿದ ಈಕೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದರು. ಎಡವಟ್ಟು ರಾಣಿ ಚುಕ್ಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಚಂದನಾ ನಂತರ ಕಾಣಿಸಿಕೊಂಡಿದ್ದು ರಿಯಾಲಿಟಿ ಶೋವಿನಲ್ಲಿ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 7'ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಈಕೆ 84 ದಿನಗಳ ಕಾಲ ದೊಡ್ಮನೆಯೊಳಗಿದ್ದರು. ತಮ್ಮ ನಡೆ ನುಡಿ, ಆಟದ ಮೂಲಕ ವೀಕ್ಷಕರ ಮನ ಸೆಳೆದ ಚಂದನಾ ಫಿನಾಲೆಗೆ ಹದಿನೈದು ದಿನಗಳಷ್ಟೇ ಬಾಕಿ ಇರುವಾಗ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹಾಡು ಕರ್ನಾಟಕ' ರಿಯಾಲಿಟಿ ಶೋವಿನ ನಿರೂಪಕಿಯಾಗಿ ಈಕೆ ಕಾಣಿಸಿಕೊಂಡರು. ನಂತರ 'ಹೂಮಳೆ' ಧಾರಾವಾಹಿಯಲ್ಲಿ ನಾಯಕಿ, ಕಾರ್ಪೋರೇಟರ್ ಕಾವೇರಿ ಮಗಳು ಲಹರಿಯ ಪಾತ್ರದಲ್ಲಿ ಕಾಣಿಸಿಕೊಂಡ ಚಂದನಾ ಡ್ಯಾನ್ಸಿಂಗ್ ಚಾಂಪಿಯನ್ ನ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈಕೆ 'ಭರ್ಜರಿ ಬ್ಯಾಚುಲರ್ಸ್'ನಲ್ಲಿ ರುದ್ರ ಮಾಸ್ಟರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.
ಇಂತಿಪ್ಪ ಚಂದನಾ ಅವರು ಸದ್ಯ ಜಾಹ್ನವಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದ್ದಾರೆ. ಇದರ ಜೊತೆಗೆ ಆಕೆ ಇದೀಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದ್ದು ಅಲ್ಲೂ ತಮ್ಮ ನಟನೆಯ ಮೂಲಕ ಸಿನಿಪ್ರಿಯರನ್ನು ರಂಜಿಸಲಿದ್ದಾರೆ.


Click it and Unblock the Notifications











