ನಟನೆ ಆಯ್ಕೆಯಾದರೆ, ಸಂಗೀತ ನಿರ್ದೇಶನ ಪ್ಯಾಷನ್ ಎನ್ನುತ್ತಾರೆ ಮಧು ಹೆಗಡೆ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟ ಮಧು ಹೆಗಡೆ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಸಂತೋಷ್ ಪಾತ್ರವನ್ನು ನಿಭಾಯಿಸುತ್ತಿದ್ದು, ಇದರಲ್ಲಿ ಕಂಜೂಸ್ ಆಗಿದ್ದಾರೆ.
ಸಂತೋಷ್ ತನ್ನ ಸಂಸಾರಕ್ಕೋಸ್ಕರ ಹಣ ಕೂಡಿಡುತ್ತಿದ್ದು, ಕದ್ದು ಮುಚ್ಚಿ ಸೈಟ್ ಕೂಡ ತೆಗೆದುಕೊಂಡಿದ್ದಾನೆ. ಆದರೆ, ಮನೆಯಲ್ಲಿ ಅಪ್ಪ ಸಂಸಾರವನ್ನು ತೂಗಿಸಲು ಅಷ್ಟು ಕಷ್ಟ ಪಡುತ್ತಿದ್ದರೂ ಸಂತು ತಲೆ ಕೆಡಿಸಿಕೊಳ್ಳುವುದಿಲ್ಲ.

ತನ್ನ ಸಂಸಾರದ ಭವಿಷ್ಯಕ್ಕಾಗಿ ಯೋಚಿಸುವ ಸಂತು ಮನೆಯವರ ಬಗ್ಗೆ ಸ್ವಲ್ಪವೂ ಕಾಳಜಿಯನ್ನು ಹೊಂದಿಲ್ಲ. ಹೀಗಿರುವಾಗ ಅವರ ನಿಜವಾದ ಬದುಕಿನ ಬಗ್ಗೆ ನೋಡೋಣ ಬನ್ನಿ..
ಕಿರುತೆರೆಯಲ್ಲಿ ಚಿರಪರಿಚಿತರಾದ ನಟ
ಹಲವು ವರ್ಷಗಳಿಂದಲೂ ಮಧು ಹೆಗಡೆ ಕನ್ನಡ ಕಿರುತೆರೆಯಲ್ಲಿದ್ದಾರೆ. ಕಿರುತೆರೆಯ ಅಭಿಮಾನಿಗಳಿಗೆ ಚಿರಪರಿಚಿತವಾಗಿರುವ ಮುಖ. ಮೂಲತಃ ಶಿವಮೊಗ್ಗ ಜಿಲ್ಲೆ, ಹೊಸನಗರದವರಾದ ಮಧು ಹೆಗಡೆ ನೀನಾಸಂ ಸಂಸ್ಥೆಯಲ್ಲಿ ಅಭಿನಯ ಕಲಿತು ಪಳಗಿದವರು. 'ಮೌನರಾಗ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ 'ಮಳೆಬಿಲ್ಲು', 'ಗುಪ್ತಗಾಮಿನಿ', 'ಮನ್ವಂತರ', 'ಗೆಜ್ಜೆಪೂಜೆ', 'ಜೋಗುಳ', 'ಪಲ್ಲವಿ ಅನುಪಲ್ಲವಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.
ಮಧು ನಟಿಸಿದ ಸಿನಿಮಾಗಳು
ಇನ್ನು ಸಿನಿಮಾ ಕ್ಷೇತ್ರದಲ್ಲೂ ಬಣ್ಣ ಹಚ್ಚಿರುವ ಮಧು ಹೆಗಡೆ 'ಈ ಬಂಧನ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿಸಿದ್ದರು. 'ನಾಯಿ ನೆರಳು', 'ಕವಚ', 'ಮಿ.ಗರಗಸ', 'ಮೂರು ಗುಟ್ಟು', 'ಒಂದು ಸುಳ್ಳು ಒಂದು ನಿಜ', 'ನಮ್ ನಾಣಿ ಮದ್ವೆ' ಸೇರಿದಂತೆ ಅಧಿಕ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. 'ಪ್ರಾಯಶಃ' ಚಿತ್ರದಲ್ಲಿ ಮಧು ಹೆಗಡೆ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಸಂಗೀತ ನಿರ್ದೇಶಕರಾಗಿ ಕಳೆದ ಕೆಲ ವರ್ಷಗಳ ಹಿಂದೆ ಬಡ್ತಿ ಪಡೆದಿದ್ದಾರೆ. 'ಓಂದಂಕೆ ಕಾಡು' ಎಂಬ ಸಿನಿಮಾಗೆ ಮಧು ಸಂಗೀತ ನಿರ್ದೇಶನ ಮಾಡಿದ್ದಾರೆ.

ಸಂಗೀತ ನಿರ್ದೇಶಕರೂ ಹೌದು
ಕನ್ನಡದಲ್ಲಿ 'ಒಂದಂಕೆ ಕಾಡು' ಚಿತ್ರಕ್ಕೆ ತೆಲುಗಿನಲ್ಲಿ 'ಅನಗನಗಾ ಒಕ ಅಡವಿ' ಎಂದು ಹೆಸರಿಡಲಾಗಿದೆ. ಈ ಎರಡೂ ಸಿನಿಮಾಗೆ ಮಧು ಹೆಗಡೆ ಅವರೇ ಸಂಗೀತ ನಿರ್ದೇಶಿಸಿದ್ದಾರೆ. ತನ್ನ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹೆಚ್ಚು ಪೋಸ್ಟ್‌ಗಳನ್ನು ಹಾಕದಿದ್ದರೂ ಕೂಡ ಆಕ್ಟರ್ ಬೈ ಚಾಯ್ಸ್, ಮ್ಯೂಸಿಕ್ ಡೈರೆಕ್ಟರ್ ಬೈ ಪ್ಯಾಷನ್ ಎಂದು ಬರೆದುಕೊಂಡಿದ್ದಾರೆ. ಅಂದರೆ, ನಟನೆಯನ್ನು ಆರಿಸಿಕೊಂಡಿದ್ದರು, ಸಂಗೀತ ನಿರ್ದೇಶಕನಾಗಿದ್ದು ನನ್ನ ಪ್ಯಾಷನ್ ಎಂದಿದ್ದಾರೆ. ಶಿವಮೊಗ್ಗದಲ್ಲಿ ಜನಿಸಿದ ಮಧು ಹೆಗಡೆ ಅಲ್ಲೇ ಓದಿ ಬೆಳೆದವರು. ರಂಗಭೂಮಿಯಲ್ಲಿ ಇದ್ದಿದ್ದರಿಂದ ಮಧುಗೆ ಸಂಗೀತದ ಮೇಲೆ ಒಲವಿತ್ತು. ಆದರೆ, ಹೆಚ್ಚು ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅದಕ್ಕೆ ಅವಕಾಶ ಸಿಕ್ಕಿದ್ದು ಸಂಗೀತ ನಿರ್ದೇಶಕರಾಗಿ ಸಕ್ಸಸ್ ಕಂಡಿದ್ದಾರೆ.
ಮಧು ವೈಯಕ್ತಿಕ ಜೀವನ
ಇನ್ನು ಮಧು ಹೆಗಡೆ ಐದು ವರ್ಷಗಳ ಹಿಂದೆ ನಮ್ರತಾ ಶರ್ಮಾ ಹೆಗಡೆ ಎಂಬಾಕೆಯನ್ನು ವಿವಾಹವಾಗಿದ್ದಾರೆ. ನಮ್ರತಾ ತಮ್ಮದೇ ಬಟ್ಟೆಯ ಅಂಗಡಿಯನ್ನು ಹೊಂದಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ 'ಹರ ಸಾತಿಕ' ಎಂಬ ಬಟ್ಟೆ ಅಂಗಡಿಯನ್ನು ಕಳೆದ ಆರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದಾರೆ. ನಮ್ರತಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುತ್ತಾರೆ.


Click it and Unblock the Notifications