Lakshmi nivasa: ಎಲ್ಲರಿಂದಲೂ ಭೇಷ್ ಎನಿಸಿಕೊಂಡ ವೆಂಕಿ; ಹ್ಯಾಪು ಮೋರೆ ಹಾಕಿದ ಸಂತೋಷ್
ಲಕ್ಷ್ಮೀ ಹಾಗೂ ಶ್ರೀನಿವಾಸ ಇಬ್ಬರಲ್ಲೂ ಮನುಷ್ಯತ್ವದ ಗುಣಗಳೇ ತುಂಬಿವೆ. ಯಾರೇ ಕಷ್ಟದಲ್ಲಿದ್ದರು ಅವರ ಸಹಾಯಕ್ಕೆ ನಿಲ್ಲುತ್ತಾರೆ. ಐದು ಮಕ್ಕಳನ್ನು ಸಮಾನವಾಗಿ ಸಾಕಿದ್ದಾರೆ. ತಮಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಆ ಕಷ್ಟವನ್ನು ತೋರಿಸದೇ ಬೆಳೆಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಎಲ್ಲಾ ಗುಣದಲ್ಲೂ ಚೆಂದ. ಆದರೆ ಇಬ್ಬರು ಗಂಡು ಮಕ್ಕಳು ಅದಕ್ಕೆ ತದ್ವಿರುದ್ಧ.
ದೊಡ್ಡ ಮಗಳಂತು ತವರು ಮನೆಗೆ ಏನೇ ಕಷ್ಟ ಇದ್ದರೂ ಸರಿ, ನನಗೆ ಏನಾದರೂ ಲಾಭವಾ ಎಂಬುದನ್ನಷ್ಟೇ ನೋಡುತ್ತಾಳೆ. ಇದರ ನಡುವೆ ಗಮನ ಸೆಳೆಯುವುದು ಎಂದರೆ ವೆಂಕಿ. ಕಿವಿಯೂ ಕೇಳಿಸಲ್ಲ, ಮಾತು ಬರಲ್ಲ. ಅನಾಥವಾಗಿದ್ದ ಮಗುವನ್ನು ಕರೆದುಕೊಂಡು ಬಂದು ಸ್ವಂತ ಮಗನಂತೆ ಸಾಕಿದರು. ಈಗ ವೆಂಕಿಯೂ ಕೆಲಸಕ್ಕೆ ಹೋಗುತ್ತಿದ್ದಾನೆ. ಮನೆಯವರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾನೆ. ಇದು ಶ್ರೀನಿವಾಸನ ಸ್ವಂತ ಮಕ್ಕಳನ್ನೇ ನಾಚಿಸುವಂತೆ ಆಗಿದೆ.

ಮನೆಯವರೆಲ್ಲಾ ಫುಲ್ ಖುಷಿ
ವೆಂಕಿ ಮನೆಯ ಕಷ್ಟವನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದ. ಮನೆಯ ಗಂಡು ಮಕ್ಕಳಾದ ಸಂತೋಷ್ ಹಾಗೂ ಹರೀಶ್ ವೆಂಕಿಯನ್ನು ನಿಂದಿಸುತ್ತಲೇ ಇದ್ದರು. ಅದನ್ನು ಕೇಳಿಸಿಕೊಂಡು, ನೊಂದುಕೊಂಡು ಸುಮ್ಮನೆ ಆಗುತ್ತಿದ್ದ. ಕಿವಿ ಕೇಳದೆ, ಮಾತು ಬಾರದೆ ಎಲ್ಲಿಂದ ಕೆಲಸ ಸಿಗುತ್ತದೆ ಎಂದು ಸುಮ್ಮನೆ ಆಗಿದ್ದ. ಆದರೆ ಲಕ್ಷ್ಮೀ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಸಿದ್ದಳು. ಇದೀಗ ಅಲ್ಲಿ ಕೆಲಸ ಮಾಡಿದ್ದಕ್ಕೆ 12 ಸಾವಿರ ಹಣ ಸಂಬಳ ಬಂದಿದೆ. ಅದೆಲ್ಲವನ್ನು ತಂದು ಲಕ್ಷ್ಮೀಯ ಕೈಗೆ ಕೊಟ್ಟಿದ್ದಾನೆ.
ಎಲ್ಲವನ್ನು ಲಕ್ಷ್ಮೀಗೆ ಕೊಟ್ಟ ವೆಂಕಿ
ವೆಂಕಿ ದುಡಿಯಲು ಶುರು ಮಾಡಿದ್ದಕ್ಕೆ ಮನೆಯವರೆಲ್ಲಾ ಫುಲ್ ಖುಷಿಯಾಗಿದ್ದಾರೆ. ಇದು ನೀನು ದುಡಿದ ಹಣ, ನೀನೆ ಇಟ್ಟುಕೊ ಎಂದಾಗಲೂ ವೆಂಕಿ ಒಪ್ಪಲಿಲ್ಲ. ಕಡೆಗೆ ಮನೆಯ ಖರ್ಚಿಗೆ ಐದು ಸಾವಿರ ಇಟ್ಟುಕೊಂಡು ಇನ್ನುಳಿದ ಹಣ ಕೊಡುವುದಕ್ಕೆ ಹೋದಾಗಲೂ ವೆಂಕಿ ನಿರಾಕರಿಸಿದ್ದಾನೆ. ನನ್ನದೇನು ಖರ್ಚಿರುತ್ತೆ. ಹತ್ತು ರೂಪಾಯಿ ಸಾಕು ಎಂದು ಎಲ್ಲಾ ಹಣವನ್ನು ಲಕ್ಷ್ಮೀ ಕೈಗೆ ಇಟ್ಟಿದ್ದಾನೆ.

ತನ್ನ ಖರ್ಚಿಗೆ ಹಣ ಕೇಳಿದ ಮಂಗಳಾ
ಲಕ್ಷ್ಮೀ, ಶ್ರೀನಿವಾಸರ ಮೊದಲ ಮಗಳು ಸದಾ ಸ್ವಾರ್ಥದಿಂದಾನೇ ಯೋಚನೆ ಮಾಡುತ್ತಾಳೆ. ತವರು ಮನೆಯಿಂದ ಎಷ್ಟು ಸಾಧ್ಯವೋ ಅಷ್ಟು ಲಾಭವನ್ನು ಪಡೆದುಕೊಳ್ಳುವುದು. ಇದು ವೆಂಕಿಗೂ ಗೊತ್ತಿರುವ ಸತ್ಯ. ಅದಕ್ಕೆ ಮಂಗಳ ಎಂದರೆ ಮಕ್ಕಳಿಗೆ ಅಷ್ಟಕ್ಕೆ ಅಷ್ಟೆ. ಇದೀಗ ಮಂಗಳಾ, ವೆಂಕಿ ಬಳಿ ಮುಂದಿನ ತಿಂಗಳ ಸ್ಯಾಲರಿ ಕೊಡು, ಏನಾದರೂ ತಗೊಳ್ತೀವಿ ಎಂದಿದ್ದಾಳೆ. ಮಂಗಳಾ ಮಾತಿಗೆ ಇಬ್ಬರು ಹೆಣ್ಣುಮಕ್ಕಳು ಸರಿಯಾಗಿಯೇ ಉತ್ತರ ನೀಡಿದ್ದಾರೆ. ಮಂಗಳಾ ಗಂಡ ಕೂಡ ಅದನ್ನೆಲ್ಲಾ ಮಾತನಾಡದಂತೆ ಹೇಳಿದ್ದಾನೆ. ಆದರೆ ಮಂಗಳಾ ಅದನ್ನೆಲ್ಲಿ ಕೇಳುತ್ತಾಳೆ.
ವೆಂಕಿ ಎಷ್ಟೋ ವಾಸಿ
ವೆಂಕಿ ದಂಡಕ್ಕೆ ಮನೆಯಲ್ಲಿ ಇದ್ದಾನೆ ಅಂತ ಯಾವಾಗಲೂ ಹಂಗಿಸುತ್ತಿದ್ದ ಸಂತೋಷ್. ಈಗ ವೆಂಕಿ ತನ್ನೆಲ್ಲಾ ದುಡಿಮೆಯನ್ನು ಮನೆಗೆ ನೀಡಿದ್ದಾನೆ. ಬರೀ ಹನ್ನೆರಡು ಸಾವಿರಕ್ಕೆ ಹೀಗೆ, ಇನ್ನು ಒಂದು ಲಕ್ಷ ಕೊಟ್ಟರೆ ತಲೆ ಮೇಲೆ ಹೊತ್ತುಕೊಂಡು ಬಿಡುತ್ತಾರೇನೋ ಎಂಬಂತೆ ಮನಸ್ಸಲ್ಲೆ ಮಾತನಾಡಿಕೊಂಡಿದ್ದಾನೆ. ಇದು ಸಂತೋಷ್‌ಗೆ ನಾಚಿಕೆಯಾಗಬೇಕು. ಯಾಕಂದ್ರೆ ವೆಂಕಿ ಅಷ್ಟಾದರೂ ಮನೆಯ ಕಷ್ಟಕ್ಕೆ ಸ್ಪಂದಿಸುತ್ತಿದ್ದಾನೆ. ಆದರೆ ಇಬ್ಬರು ಗಂಡು ಮಕ್ಕಳಿಗೆ ಆ ಬಗ್ಗೆ ಯೋಚನೆಯೂ ಇಲ್ಲ, ಮರ್ಯಾದೆಯೂ ಇಲ್ಲ. ತಂದೆ ಶ್ರೀನಿವಾಸ್ ಬಾಯೊ ಬಿಟ್ಟು ಬೈದರೂ, ಮೊದಲು ತಮ್ಮ ಸ್ವಾರ್ಥವನ್ನೇ ನೋಡಿಕೊಳ್ಳುವ ಮಕ್ಕಳ ನಡುವೆ ವೆಂಕಿ ಎಷ್ಟೋ ಬೆಟರ್.


Click it and Unblock the Notifications











