Lakshmi nivasa: ಜಾಹ್ನವಿ ಮದುವೆ ಮುರಿಯಲು ಬಂದ ವಿಶ್ವ: ನಿರ್ಮಾಪಕರಿಗೆ ಹಣ ಜಾಸ್ತಿ ಆಗಿರ್ಬೇಕು ಎಂದ ನೆಟ್ಟಿಗರು!
ಧಾರಾವಾಹಿಯಲ್ಲಿ ಇತ್ತೀಚೆಗೆ ಮದುವೆ ಸಮಾರಂಭಗಳು ಅದ್ದೂರಿಯಾಗಿ ನಡೆಯುತ್ತಿವೆ. ಮಂಟಪದ ಅಲಂಕಾರಕ್ಕೇನು ಕಡಿಮೆ ಇರದಂತೆ, ಹೆಣ್ಣಿನ ಅಲಂಕಾರವೂ ಕಣ್ಣು ಕುಕ್ಕುವಂತೆ ಇರುತ್ತದೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲೂ ಮದುವೆ ಕಾರ್ಯ ಶುರುವಾಗಿದ್ದು, ಜೋರಾಗಿಯೇ ಮದುವೆ ನಡೆಯುತ್ತಿದೆ. ವಧು ಜಾಹ್ನವಿ ಅಂತೂ ಬ್ಯೂಟಿಫುಲ್ ಆಗಿ ಕಾಣ್ತಿದ್ದಾಳೆ.
ಈ ಹಿಂದೆ ಭಾವನಾ ಮದುವೆಯನ್ನು ಅಷ್ಟು ಗ್ರ್ಯಾಂಡ್ ಆಗಿ ಏನು ಮಾಡಿರಲಿಲ್ಲ. ಸಾಲ ಸೋಲ ಮಾಡಿ, ತಮ್ಮ ಕೈಲಾದ ಮಟ್ಟಿಗೆ ಮಾಡಿಕೊಟ್ಟಿದ್ದರು. ಆದರೆ ಈಗ ಜಾಹ್ನವಿಯನ್ನು ಮದುವೆಯಾಗುತ್ತಿರುವ ಹುಡುಗ ದೊಡ್ಡ ಶ್ರೀಮಂತನಾಗಿರುವ ಕಾರಣ ಕಲ್ಯಾಣ ವಿಜೃಂಭಣೆಯಿಂದ ನಡೆಯುತ್ತಿದೆ. ಆದರೆ ವಿಶ್ವನ ಎಂಟ್ರಿ ಬೇರೆ ಆಗಿದೆ.

ಕಾಶಿಗೆ ಹೊರಟಿದ್ದ ಜಯಂತ್
ಜಯಂತ್ ಹಾಗೂ ಜಾಹ್ನವಿ ಮದುವೆ ಕಾರ್ಯಗಳು ಶುರುವಾಗಿವೆ. ಮುಹೂರ್ತಕ್ಕೂ ಮುನ್ನ ಗಂಡಿನ ಕಾಲು ತೊಳೆಯುವ ಶಾಸ್ತ್ರವಿದೆ. ಕಾಶಿಗೆ ಹೊರಟು ನಿಂತ ಅಳಿಯನ ಮನಸ್ಸನ್ನು ಬದಲಾಯಿಸಬೇಕಾದ ಶಾಸ್ತ್ರವದು. ಜಯಂತ್ ಮದುವೆ ಬೇಡ, ನಾನು ಕಾಶಿಗೆ ಹೋಗುತ್ತೇನೆಂದು ನಿಂತಿದ್ದ. ಆದರೆ ಶ್ರೀನಿವಾಸ್ ಅಳಿಯನ ಮನಸ್ಸನ್ನು ಭಾವನಾತ್ಮಕವಾಗಿ ಸೆಳೆದು ಮನಸ್ಸು ಬದಲಾಯಿಸಿದ್ದಾನೆ. ಈಗ ಕಾಶಿಗೆ ಹೋಗದ ಅಳಿಯ, ತನ್ನ ಕಾಲು ತೊಳೆಸಿಕೊಳ್ಳದೇ ಮಾವನ ಕಾಲು ತೊಳೆದು ಕನ್ಯೆಯನ್ನು ಕೇಳಿದ್ದಾನೆ.
ಜಾಹ್ನವಿ ಮದುವೆಗೆ ಬಂದ ವಿಶ್ವ
ಜಾಹ್ನವಿ ಮತ್ತು ವಿಶ್ವ ಒಂದೇ ತರಗತಿಯಲ್ಲಿ ಓದುತ್ತಿದ್ದವರು. ಜಾಹ್ನವಿಯನ್ನು ಮನಸಾರೆ ಪ್ರೀತಿ ಮಾಡುತ್ತಿದ್ದ. ಆದರೆ ಅದನ್ನು ಹೇಳಿಕೊಳ್ಳುವುದಕ್ಕೆ ಆಗಿರಲಿಲ್ಲ. ಹೀಗಾಗಿ ಜಾಹ್ನವಿಗೆ ಜಯಂತ್ ಜೊತೆಗೆ ಮದುವೆ ಫಿಕ್ಸ್ ಆಗಿದೆ. ಮದುವೆ ಫಿಕ್ಸ್ ಆದ ಮೇಲೆ ವಿಶ್ವ ಜಾಹ್ನವಿಯಿಂದ ದೂರವೇ ಉಳಿದು ಬಿಟ್ಟಿದ್ದ. ಆದರೆ ಇದಕ್ಕೆ ಜಾಹ್ನವಿಗೆ ಉತ್ತರ ತಿಳಿದಿರಲಿಲ್ಲ. ಮದುವೆಗೆ ವಿಶ್ವ ಬಾರದೆ ಇರುವುದು ಅವಳಿಗೆ ತಡೆಯಲಾಗಲಿಲ್ಲ. ಹೀಗಾಗಿ ಕರೆ ಮಾಡಿದ ಜಾನು, ಬರಲೇ ಬೇಕು. ಬರದೆ ಇದ್ದರು ಮಾತನಾಡಿಸಲ್ಲ ಅಂತ ಜೋರು ಮಾಡಿದ್ದಾಳೆ.
ಮದುವೆ ನಿಲ್ಲಿಸುವ ಪಣ ತೊಟ್ಟ ವಿಶ್ವ
ವಿಶ್ವ, ಸಾಕಷ್ಟು ಬದಲಾಗಿದ್ದಾನೆ. ಜಾನು ಸಿಗದೆ ಜೀವನವೇ ಬೇಡ ಎಂಬಂತೆ ಕೂತಿದ್ದಾನೆ. ಮದುವೆಯಿಂದ ದೂರವಿದ್ದ ವಿಶ್ವನನ್ನು ಜಾನುನೆ ಕರೆದಿದ್ದಾಳೆ. ಈಗ ಮದುವೆ ಮಂಟಪಕ್ಕೆ ವಿಶ್ವ ಬಂದಿದ್ದಾನೆ. ಜಾನು, ಸ್ವಂತ ಅತ್ತೆ ಮಗಳೇ ಆಗಿದ್ದರು ಸತ್ಯ ಗೊತ್ತಿಲ್ಲ. ಆದರೆ ಮಗ ಪ್ರೀತಿ ಮಾಡುತ್ತಿದ್ದಾನೆ ಎಂಬುದು ತಾಯಿಗೆ ಗೊತ್ತು. ಜಾಹ್ನವಿ ಮದುವೆ ಹೋಗಿದ್ದನ್ನು ತಂದೆಯಿಂದ ಮುಚ್ಚಿಟ್ಟಿದ್ದಾನೆ. ಇತ್ತ ಮದುವೆ ಮಂಟಪದ ಮುಂದೆ ನಿಂತ ವಿಶ್ವನಿಗೆ ಆ ಹೆಸರಿನ ಬೋರ್ಡ್ ಇನ್ನಷ್ಟು ನೋವು ಕೊಟ್ಟಿದೆ. ಜಾಹ್ನವಿ ವೆಡ್ಸ್ ಜಯಂತ್ ಎಂಬುದು ಕೋಪ ತರಿಸಿದೆ. ಮದುವೆಯನ್ನು ನಿಲ್ಲಿಸಿ ಬಿಡಬೇಕೆಂದು ಒಳಗೆ ಹೊರಟಿದ್ದಾನೆ.

ಹಣ ಜಾಸ್ತಿ ಆಗಿರೋದು ಯಾರಿಗೆ?
ಈಗಾಗಲೇ ಭಾವನಾ ಮದುವೆಯನ್ನು ನಿಲ್ಲಿಸಿದ್ದಾರೆ. ಈಗ ಜಾಹ್ನವಿ ಮದುವೆಯನ್ನು ಅದ್ದೂರಿ ವೆಚ್ಚದಲ್ಲಿ ಮಾಡುತ್ತಿದ್ದಾರೆ. ಈಗ ವಿಶ್ವ ಬೇರೆ ಮದುವೆ ನಿಲ್ಲಿಸುತ್ತೇನೆ ಎಂದು ಹೋಗಿದ್ದಾನೆ. ಇದನ್ನು ಕಂಡ ನೆಟ್ಟಿಗರು ಕೋಪಗೊಂಡಿದ್ದಾರೆ. 'ಅಲ್ಲ ನಿರ್ಮಾಪಕರಿಗೇನು ಹಣ ಜಾಸ್ತಿ ಆಗಿದೆಯಾ? ಈಗಾಗಲೇ ಭಾವನಾ ಮದುವೆ ನಿಲ್ಲಿಸಿ ಲಾಸ್ ಆಗಿದೆ. ಈಗ ಜಾನು ಮದುವೆ ನಿಂತರೆ ಎಷ್ಟು ಹಣ ಖರ್ಚು. ಜಾಹ್ನವಿಯದ್ದು ಮದುವೆ ನಿಂತರೆ ನಾವಂತು ನೋಡಲ್ಲ' ಅಂತಿದ್ದಾರೆ.


Click it and Unblock the Notifications











