ಇಬ್ಬರು ಮಕ್ಕಳ ತಾಯಿ 'ಲಕ್ಷಿ ನಿವಾಸ'ದ ನಾಯಕಿ; ಪುತ್ರಿಯೂ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ನಿವಾಸ' ಧಾರಾವಾಹಿಯೂ ಕೂಡಾ ಒಂದು. ಲಕ್ಷ್ಮಿ ನಿವಾಸ ಧಾರಾವಾಹಿಯ ಪ್ರತಿ ಪಾತ್ರವೂ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿ ಭಾವನಾ ಹಾಗೂ ಖುಷಿಯ ಪಾತ್ರವಂತೂ ಕಿರುತೆರೆಯಲ್ಲಿ ಫೇಮಸ್ಸು ಎಂದರೆ ತಪ್ಪಾಗಲಾರದು. ಮುದ್ದು ಮುದ್ದಾಗಿ ಮಾತನಾಡುವ ಖುಷಿಯ ನಟನೆಗೆ ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ.
ಭಾವನಾ ಮತ್ತು ಖುಷಿಯ ವಿಚಾರ ಈಗ ಯಾಕೆ ಬಂತು ಎಂದು ಆಲೋಚಿಸುತ್ತಿದ್ದೀರಾ? ಭಾವನಾ ಪಾತ್ರದಲ್ಲಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ದಿಶಾ ಮದನ್ ನಿಜ ಜೀವನದಲ್ಲಿ ಎರಡು ಮಕ್ಕಳ ತಾಯಿಯೂ ಹೌದು. ಅದರಲ್ಲೂ ಆಕೆಗೆ ನಿಜ ಜೀವನದಲ್ಲಿ ಮುದ್ದಾದ ಹೆಣ್ಣು ಮಗಳಿದ್ದಾಳೆ.

ದಿಶಾ ಮದನ್ ಮಗಳ ಹೆಸರು ಅವಿರಾ. ಅವಿರಾ ಅಣ್ಣನ ಹೆಸರು ವಿಯಾನ್. ಇವರಿಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ಸು. ದಿಶಾ ಮದನ್ ಅವರು ವರ್ಷಕ್ಕೊಮ್ಮೆ ತಮ್ಮ ಮಕ್ಕಳ ಫೋಟೋಶೂಟ್ ಅನ್ನು ಮಾಡಿಸುವುದಲ್ಲದೇ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
'ಲಕ್ಷ್ಮಿ ನಿವಾಸ' ಧಾರಾವಾಹಿಯ ನಟಿ ದಿಶಾ ಮದನ್ ಪುತ್ರ ವಿಯಾನ್‌ಗೆ 5 ವರ್ಷಗಳಾದರೆ, ಮಗಳಿಗೆ 2 ವರ್ಷ. ಅವಿರಾ ಫೋಟೋ ನೋಡಿದ ನೆಟ್ಟಿಗರಂತೂ ಮನ ಸೋತಿದ್ದಾರೆ. ಮಾತ್ರವಲ್ಲ, 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಖುಷಿಯ ಬದಲು ಅವಿರಾಳನ್ನೇ ನಟಿಸಲು ಹೇಳಬಹುದಿತ್ತು ಎಂದು ಕಮೆಂಟ್ ಮಾಡಿದವರಿಗೇನೂ ಕಡಿಮೆಯಿಲ್ಲ.
ಇನ್ನು ಕಿರುತೆರೆ ನಟಿ ದಿಶಾ ಮದನ್ ನಟಿಸಿದ್ದು ಕೇವಲ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಷ್ಟೇ. ಆದರೂ ಸೋಶಿಯಲ್ ಮೀಡಿಯಾ ಮೂಲಕ ಹವಾ ಸೃಷ್ಟಿ ಮಾಡಿದ ಬೆಡಗಿ. 'ಕುಲವಧು' ಧಾರಾವಾಹಿಯ ವಚನಾ ಆಗಿ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದಿದ್ದರು. ಮುಂದೆ ಟಿಕ್ ಟಾಕ್ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಈಕೆ ಕಿರುತೆರೆಗೆ ಮರಳಿದ್ದು 'ತ್ರಿಪುರ ಸುಂದರಿ' ಧಾರಾವಾಹಿ ಮೂಲಕ.

'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ದಿಶಾ ಮದನ್. ಇದೀಗ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ಕಿರುತೆರೆಗೆ ಮರಳಿದ್ದಾರೆ. ಈ ಧಾರಾವಾಹಿಯಲ್ಲಿ ಈ ನಟಿ ಮಧ್ಯಮ ಕುಟುಂಬದ ಹುಡುಗಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಹತ್ತು ವರ್ಷಗಳ ಸುದೀರ್ಘ ಗ್ಯಾಪ್‌ನ ನಂತರ ಮತ್ತೆ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಇವರು ತಮಗೆ ಸಿಕ್ಕ ಪಾತ್ರದ ಮೂಲಕ ಸಖತ್ ಖುಷಿಯಾಗಿರುವುದಂತೂ ನಿಜ.
ಇನ್ನು ಭಾವನಾ ಪಾತ್ರಕ್ಕೆ ಆಕೆ ಸಾಕಷ್ಟು ತಯಾರಿಯನ್ನು ಕೂಡಾ ಮಾಡುತ್ತಾರೆ. ಧಾರಾವಾಹಿಗೆ ತಾವು ಧರಿಸುವ ಸೀರೆ, ಆಭರಣಗಳ ಬಗ್ಗೆ ಸಾಕಷ್ಟು ಗಮನಹರಿಸುವ ಆಕೆ ಆಗಾಗ ಶಾಪಿಂಗ್‌ಗಳನ್ನು ಕೂಡಾ ಮಾಡುತ್ತಿರುತ್ತಾರೆ. ಆರಂಭದ ದಿನದಲ್ಲಿ ಮಕ್ಕಳನ್ನು ಬಿಟ್ಟು ಶೂಟಿಂಗ್‌ಗೆ ಹೋಗುವುದು ಹೇಗೆ ಎಂಬ ಭಯವೂ ದಿಶಾ ಅವರನ್ನು ಕಾಡಿತ್ತು. ಆದರೆ, ಆಕೆ ಶೂಟಿಂಗ್ ಹೋದಾಗ ಪತಿ ಶಶಾಂಕ್ ವಾಸುಕಿ ಹಾಗೂ ದಿಶಾ ಅವರ ಅಮ್ಮ ಮಕ್ಕಳನ್ನು ನೋಡಿಕೊಳ್ಳುವ ಕಾರಣ ದಿಶಾ ಅವರಿಗೆ ಯಾವುದೇ ರೀತಿಯ ಟೆನ್ಶನ್ ಇಲ್ಲ.


Click it and Unblock the Notifications











