Lakshmi Nivasa-Roopika:ಲಕ್ಷ್ಮಿ ನಿವಾಸದ ನಟಿ ರೂಪಿಕಾ ನಡೆಸುವ ನೃತ್ಯ ಶಾಲೆಯ ಬಗ್ಗೆ ನಿಮಗೆ ಗೊತ್ತೆ?
ಧಾರಾವಾಹಿ ಮತ್ತು ಸಿನಿಮಾ ಎರಡರಲ್ಲೂ ತೊಡಗಿಸಿಕೊಂಡಿರುವ ಕನ್ನಡದ ನಟಿಯರಲ್ಲಿ ರೂಪಿಕಾ ಕೂಡ ಒಬ್ಬರು. ಬಾಲ ಕಲಾವಿದೆಯಾಗಿ ನಟನಾ ಕ್ಷೇತ್ರಕ್ಕೆ ಇಳಿದ ರೂಪಿಕಾ ಇಂದು ವೃತ್ತಿ ರಂಗದಲ್ಲಿ ತಮ್ಮದೇ ಛಾಪನ್ನು ಮಾಡಿಸಿದ್ದಾರೆ. 'ತ್ರಿವೇಣಿ ಸಂಗಮ','ಬೆಳ್ಳಿಚುಕ್ಕಿ', 'ಅವಳ ಮನೆ', 'ಬದುಕು' ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ್ದಾರೆ.
ನಂತರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ದೊರೆಸಾನಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸಿಂಚನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಸಿಂಚನಾ ಪಾತ್ರದಲ್ಲಿ 'ನಾಗ ಪಂಚಮಿ' ಧಾರಾವಾಹಿ ಖ್ಯಾತಿಯ ದಿವ್ಯಶ್ರೀ ಅಭಿನಯಿಸುತ್ತಿದ್ದರು. ಈಗ ಆ ಪಾತ್ರವನ್ನು ಸುಂದರವಾಗಿ ನಿಭಾಯಿಸುತ್ತಿರುವ ರೂಪಿಕಾ ಧಾರಾವಾಹಿ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದಾರೆ.

ಧಾರಾವಾಹಿ ಕಲಾವಿದೆಯಾಗಿದ್ದ ರೂಪಿಕಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು 'ಚೆಲುವಿನ ಚಿಲಿಪಿಲಿ' ಸಿನಿಮಾ. ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ ಅವರು ನಂತರ 'ಥರ್ಡ್ ಕ್ಲಾಸ್', 'ಮಾಯದಂತ ಮಳೆ', 'ನವರಂಗಿ', 'ಮಂಜರಿ','ಬೀರ','ತೀರ್ಥರೂಪ', 'ಮಜ್ಜಿಗೆ ಹುಳಿ','ರಾಗ', 'ಡೈಮಂಡ್ ಕ್ರಾಸ್', 'ರುದ್ರಾಕ್ಷಿ ಪುರ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಅಭಿನಯದ ಅನುಭವವಿರುವ ಇವರು 'ಚಿಲ್ ಬ್ರೋ' ಹಾಗೂ 'ಜನ್ಮಸ್ಥಾನಂ' ಎನ್ನುವ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಸೀರಿಯಲ್ ಮತ್ತು ಸಿನಿಮಾ ಎರಡರಲ್ಲೂ ನಟನೆಗೆ ಸಮಾನ ಪ್ರಾಶಸ್ತ್ಯವನ್ನು ನೀಡುವ ನಟಿ ತಾನೊಬ್ಬ ಸ್ಟಾರ್ ನಟಿ ಆಗುವುದಕ್ಕಿಂತ ಕಲಾವಿದೆಯಾಗಿ ಬೆಳೆಯುವ ಆಶಯವನ್ನು ಹೊತ್ತಿದ್ದಾರೆ ಹಾಗೂ ರೂಪಿಕಾ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸಲು ಉತ್ಸುಕತೆಯನ್ನು ಹೊಂದಿರುವ ನಟಿ. ನಾವು ವಿಶಿಷ್ಟ ಪ್ರಯೋಗಗಳಿಗೆ ಒಡ್ಡಿಕೊಂಡಾಗ ಮಾತ್ರ ಬೇರೆ ಬೇರೆ ರೀತಿಯ ಫಲಿತಾಂಶಗಳನ್ನು ಪಡೆಯಲು ಸಾಧ್ಯ ಎಂಬುದು ಇವರ ಅಭಿಪ್ರಾಯ.
ಅಂದಹಾಗೆ ಇವರು ಬರೀ ನಟನೆಯಲ್ಲಿ ಮಾತ್ರ ಪ್ರವೀಣೆಯಲ್ಲ. ಬಾಲ್ಯದಿಂದಲೂ ರೂಪಿಕಾ ಉತ್ತಮ ನೃತ್ಯಗಾರ್ತಿಯೂ ಹೌದು. ಇವರದ್ದು ಮೂಲತಃ ಕಲಾವಿದರ ಕುಟುಂಬವೇ ಆಗಿತ್ತು. ಚಿತ್ರರಂಗದಲ್ಲಿ ಪರಿಚಿತರಲ್ಲದಿದ್ದರೂ ಇವರ ತಾಯಿ ಅಜ್ಜಿ ಸೇರಿದಂತೆ ಕುಟುಂಬಸ್ಥರು ಬೇರೆ ಬೇರೆ ರೀತಿಯ ಕಲೆಗಳಲ್ಲಿ ತೊಡಗಿಸಿಕೊಂಡಿದ್ದರು.
ಸಣ್ಣವರಿರುವಾಗಲೇ ನೃತ್ಯ ತರಬೇತಿಗೆ ಇವರನ್ನು ಸೇರಿಸಿದ್ದರೂ ಆಗ ಅಷ್ಟೊಂದು ಆಸಕ್ತರಾಗಿ ಕಲಿಯುತ್ತಿರಲಿಲ್ಲವಂತೆ. ಕ್ರಮೇಣ ನಾಟ್ಯ ಪ್ರಕಾರಗಳಲ್ಲಿ ವಿಶಿಷ್ಟ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಇಂದು ದೇಶದೊಳಗೆ ಮಾತ್ರವಲ್ಲದೆ ವಿದೇಶಗಳಲ್ಲಿ 5000ಕ್ಕೂ ಹೆಚ್ಚು ಪ್ರದರ್ಶನವನ್ನು ನೀಡಿ ಹೆಸರುವಾಸಿಯಾಗಿರುವ ಇವರು 'ಗೆಜ್ಜೆ ನೃತ್ಯ ಸ್ಟುಡಿಯೋ' ಎಂಬ ತಮ್ಮದೇ ನೃತ್ಯ ತರಗತಿಯನ್ನು ಕೂಡ ನಡೆಸುತ್ತಿದ್ದಾರೆ. ಅಲ್ಲದೆ ನಟನೆ, ನೃತ್ಯ ಇವುಗಳಲ್ಲೆಲ್ಲಾ ಬಿಡುವು ಸಿಕ್ಕಿದಾಗ ನಿರೂಪಣೆಯನ್ನೂ ಮಾಡುತ್ತಾರೆ.


Click it and Unblock the Notifications











