Lakshmi Nivasa: 10 ಲಕ್ಷ ರೂಪಾಯಿ ಕೊಡಬೇಕಾದ ಸ್ನೇಹಿತನೇ ಇಲ್ಲ; ನಾಲ್ಕೇ ದಿನದಲ್ಲಿ ಮದ್ವೆ ನಡೆಯುತ್ತಾ?
ಮನೆಯಲ್ಲಿ ಅಣ್ಣನಿಗೂ ಮದುವೆಯಾಗಿದೆ. ತಮ್ಮನಿಗೂ ಮದುವೆಯಾಗಿದೆ. ಆದರೆ, ಮೂಲ ನಕ್ಷತ್ರದಲ್ಲಿ ಹುಟ್ಟಿದ್ದಾಳೆ ಎಂಬ ಕಾರಣಕ್ಕೆ ಭಾವನಾಗೆ ಮದುವೆ ಎಂಬುದೇ ಕಗ್ಗಂಟಾಗಿತ್ತು. ಭಾವನಾಳ ಗುಣ-ಸೌಂದರ್ಯಕ್ಕೆ ಒಪ್ಪಿಕೊಳ್ಳುತ್ತಿದ್ದ ಹಲವರು, ಜಾತಕ ನೋಡಿದ ಬಳಿಕ ಮದುವೆಯ ಮಾತುಕತೆಯನ್ನೇ ಆಡುತ್ತಿರಲಿಲ್ಲ. ಇದು ಮನೆಯವರಿಗೆ ತುಂಬಾನೇ ಬೇಸರ ತರಿಸಿತ್ತು.
ಲಕ್ಷ್ಮೀ ಅಂತು ಮಗಳಿಗೆ ಮದುವೆಯಾಗಲಿಲ್ಲ ಎಂಬ ನೋವಲ್ಲಿಯೇ ದಿನ ಕಳೆಯುತ್ತಿದ್ದಳು. ಊರಲ್ಲಿರುವ ದೇವರನ್ನೆಲ್ಲ ಬೇಡುತ್ತಿದ್ದಳು. ಕಡೆಗೂ ದೇವರು ಕಣ್ಣು ಬಿಟ್ಟಿದ್ದಾನೆ. ಭಾವನಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಸಂಬಂಧ ಕೂಡ ದೊಡ್ಡದೇ. ಭಾವನಾ ಬಾಸ್ ಈಗ ಗಂಡನಾಗುತ್ತಿದ್ದಾರೆ. ಭಾವನಾ ಕೂಡ ನಗುನಗುತ್ತಲೇ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ. ಆದರೆ, ಈಗ ಅಪ್ಪ-ಅಮ್ಮನಿಗೆ ಮದುವೆಯದ್ದೇ ಚಿಂತೆಯಾಗಿದೆ.

ಮದುವೆ ಜವಾಬ್ದಾರಿ ಕೇಳಿ ಪಡೆದ ಶ್ರೀನಿವಾಸ್
ಶ್ರೀಕಾಂತ್‌ಗೆ ಮದುವೆ ಆಗುತ್ತಿರುವುದಕ್ಕೆ ವನಜಾ ಖುಷಿಯಲ್ಲಿ ಇದ್ದಾಳೆ. ಹೀಗಾಗಿ ಮದುವೆ ಖರ್ಚೆಲ್ಲಾ ನಾವೇ ನೋಡಿಕೊಳ್ಳುತ್ತೀವಿ ಎಂದೇ ಹೇಳಿದ್ದಾರೆ. ಬಡತನವಿದ್ದರು ಸ್ವಾಭಿಮಾನವನ್ನು ಎಂದು ಬಿಡದ ಶ್ರೀನಿವಾಸ್, ಇಲ್ಲ ಮಗಳ ಮದುವೆ ಮಾಡುವ ಅವಕಾಶ ನಮಗೆ ಇರಲಿ ಎಂದೇ ಕೇಳಿದ್ದಾನೆ. ಅವರ ಮನಸ್ಸಿಗೂ ನೋವು ಮಾಡಬಾರದು ಎಂಬ ಕಾರಣಕ್ಕೆ ವನಜಾ ಒಪ್ಪಿಕೊಂಡಿದ್ದಾರೆ.
ಶ್ರೀನಿವಾಸ್ ಸ್ನೇಹಿತ ಇನ್ನಿಲ್ಲ
ಶ್ರೀನಿವಾಸ್ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣವನ್ನು ಹೊಂದಿರುವ ಮನುಷ್ಯ. ಅದೇ ರೀತಿ ಸ್ನೇಹಿತ ಶಂಕರನಿಗೆ 10 ಲಕ್ಷ ರೂಪಾಯಿ ಸಹಾಯ ಮಾಡಿದ್ದ. ಇತ್ತೀಚೆಗೆ ಆ 10 ಲಕ್ಷ ರೂಪಾಯಿ ಹಣದ ಚೆಕ್ ಬರೆದುಕೊಡಲು ಹೊರಟಾಗ ಶಂಕರನಿಗೆ ಕೆಲಸ ಹೋಗಿತ್ತು. ಆ ಗಾಬರಿಯಲ್ಲಿಯೇ ಶಂಕರ ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆ ಸೇರಿದ. ಆದರೆ, ಬದುಕಿ ಬರಲೇ ಇಲ್ಲ. ಶಂಕರನ ಸ್ಥಿತಿ ಗಂಭೀರವಾಗಿ, ಸತ್ತೇ ಹೋಗಿದ್ದಾನೆ. ಈಗ ಹತ್ತು ಲಕ್ಷ ಹಣವೂ ಶಂಕರನ ಸಾವಿನ ಜೊತೆಗೆ ಹೋಗಿದೆ.
ಶ್ರೀನಿವಾಸ್ ಮುಚ್ಚಿಟ್ಟಿದ್ದ ಸತ್ಯ ಬಹಿರಂಗ
ಶ್ರೀನಿವಾಸ ಮಾಡುವ ಸಹಾಯ ಮನೆಯವರಿಗೆ ತಿಳಿದಿರಲಿಲ್ಲ. ಆಸ್ಪತ್ರೆಯಲ್ಲಿ ಶಂಕರನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು, ಹೆಂಡತಿ ಸಮೇತ ಶ್ರೀನಿವಾಸ ಆಸ್ಪತ್ರೆಗೆ ಬಂದ. ಅಷ್ಟರಲ್ಲಾಗಲೇ ಶಂಕರನ ಪ್ರಾಣ ಹೋಗಿತ್ತು. ಶ್ರೀನಿವಾಸ ಗಾಬರಿಯಾದ. ಇನ್ನೊಬ್ಬ ಸ್ನೇಹಿತ ಅದೇ ಸಮಯಕ್ಕೆ ಬಂದು, ಈಗ ಕೊಟ್ಟಿರುವ ಹತ್ತು ಲಕ್ಷ ಯಾರ ಬಳಿ ಕೇಳುತ್ತೀಯಾ? ಶಂಕರನೇ ಇಲ್ಲ. ಮಗಳ ಮದುವೆ ಹೇಗೆ ಮಾಡ್ತೀಯ? ಎಂದು ಪ್ರಶ್ನೆ ಮಾಡಿದಾಗ ಶ್ರೀನಿವಾಸನ ಬಳಿ ಉತ್ತರವಿರಲಿಲ್ಲ. ಯಾವ ಸತ್ಯ ಲಕ್ಷ್ಮೀಯಿಂದ ಮುಚ್ಚಿಟ್ಟಿದ್ದನೋ ಆ ಸತ್ಯ ಹೊರಬಿದ್ದಿದೆ. ಲಕ್ಷ್ಮೀ ಶಾಕ್ ಆಗಿದ್ದಾಳೆ.

ವನಜಾಳೇ ಸಹಾಯ ಮಾಡುತ್ತಾಳಾ ?
ಭಾವನಾಗೆ ಮೊದಲೇ ಮದುವೆಯೇ ಆಗುತ್ತಿರಲಿಲ್ಲ. ದೇವರ ದಯೆ ಮದುವೆಯೂ ಫಿಕ್ಸ್ ಆಗಿದೆ. ಅರ್ಚಕರು ಕೂಡ ಇನ್ನು ನಾಲ್ಕು ದಿನದಲ್ಲಿ ಮದುವೆ ಮಾಡಬೇಕು. ಇಲ್ಲ ಅಂದ್ರೆ ಆರು ತಿಂಗಳ ತನಕ ಗುರು ಬಲ ಇರುವುದಿಲ್ಲ ಎಂದಿದ್ದಾರೆ. ಹಣ ಇದ್ದರೆ ಬೇಗ ಮಾಡಿ ಮುಗಿಸಿ ಎಂದಿದ್ದಾರೆ. ಇತ್ತ ಹಣ ಕೊಡಬೇಕಾದ ಸ್ನೇಹಿತ ಕೂಡ ಸಾವನ್ನಪ್ಪಿದ್ದಾನೆ. ಖರ್ಚು ವೆಚ್ಚವಿಲ್ಲದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಡಿ ಎಂದಿದ್ದ ವನಜಾಗೆ ಇಲ್ಲ ಚೆನ್ನಾಗಿಯೇ ಮದುವೆ ಮಾಡಿಕೊಡುತ್ತೀನಿ ಅಂತ ಶ್ರೀನಿವಾಸ -ಲಕ್ಷ್ಮೀ ಹೇಳಿದ್ದರು. ಈಗ ಪರಿಸ್ಥಿತಿ ಹೀಗಾಗಿದೆ.


Click it and Unblock the Notifications