Lakshmi Nivasa: ಭಾವನಾ ಮದುವೆ ಖುಷಿಯಲ್ಲಿದ್ದ ಲಕ್ಷ್ಮೀ-ಶ್ರೀನಿವಾಸ್‌ಗೆ ಬೀಗರಿಂದ ಅವಮಾನ !
ಮಧ್ಯಮ ವರ್ಗದವರಾದರೂ ಕೂಡ ಮಗಳ ಮದುವೆಗೆ ಯಾವುದೇ ಸಮಸ್ಯೆ ಬಾರದಂತೆ, ಕೊರತೆ ಕಾಣದಂತೆ ಮದುವೆ ಮಾಡುವುದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸಾಲ-ಸೋಲ ಮಾಡಿ ಮಗಳ ಮದುವೆ ಮಾಡುತ್ತಿದ್ದಾರೆ. ಭಾವನಾ ಮದುವೆಯಾಗುತ್ತಿರುವ ಸಂಬಂಧ ಶ್ರೀಮಂತರ ಮನೆಯದ್ದು. ಹೀಗಾಗಿ ಅದಕ್ಕೆ ಸಮನಾಗಿ ಮದುವೆ ಮಾಡಿಕೊಡುವುದಕ್ಕೆ ಆಗದೆ ಹೋದರೂ, ಇದ್ದ ಒಡವೆಯನ್ನೆಲ್ಲಾ ಮಾರಿ, ಒಂದು ರೇಂಜಿಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.
ಇದರ ನಡುವೆ ಯಾರನ್ನು ಕರೆಯಬೇಕು ಎಂಬುದನ್ನು ರೆಡಿ ಮಾಡಿಕೊಂಡು, ಮಗಳ ಮದುವೆಗಾಗಿ ಲಕ್ಷ್ಮೀ-ಶ್ರೀನಿವಾಸ ಓಡಾಡುತ್ತಿದ್ದಾರೆ. ಅದರಲ್ಲೂ ಶ್ರೀನಿವಾಸ ಮಗಳ ಮದುವೆಗೆಂದು ಬಡ್ಡಿ ಲೆಕ್ಕದಲ್ಲಿ ಸಾಲ ತಂದಿದ್ದಾನೆ. ಇದರಿಂದ ಮುಂದೆ ಯಾವೆಲ್ಲಾ ಸಮಸ್ಯೆಗಳು ಎದುರಾಗುತ್ತದೆಯೋ ಗೊತ್ತಿಲ್ಲ. ಆಗಲಾದರೂ ಮಕ್ಕಳು ಬರುತ್ತಾರಾ? ಇಲ್ವಾ? ಅದು ನೋಡಬೇಕಿದೆ.

ಮದುವೆ ಪತ್ರಿಕೆಗೆ ಪೂಜೆ
ಅಂತು ಭಾವನಾ ಮದುವೆಗೆ ಆಗಬೇಕಾದ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿದೆ. ಮನೆಯಲ್ಲಿ ಇಬ್ಬರು ಗಂಡು ಮಕ್ಕಳಿದ್ದರು ಕೂಡ ಭಾವನಾ ಮದುವೆಗೆ ಯಾವುದೇ ರೀತಿಯ ಸಹಾಯವನ್ನು ಮಾಡಿಲ್ಲ. ಶ್ರೀನಿವಾಸ್ ಕೂಡ ಮಕ್ಕಳ ಬಳಿ ಈ ಸಹಾಯವನ್ನು ಕೇಳುವುದು ಇಲ್ಲ. ಅದಕ್ಕೆ ಆಸ್ತಿ ಪತ್ರ ಅಡವಿಟ್ಟು ಸಾಲ ತಂದಿದ್ದಾನೆ. ಈಗಾಗಲೇ ಜವಳಿ ಖರೀದಿಯೂ ಆಗಿದೆ, ಒಡವೆ ಸಿದ್ಧತೆಗೂ ಹಣ ಕೊಟ್ಟಾಗಿದೆ. ಈಗ ಆಮಂತ್ರಣ ಪತ್ರಿಕೆಯೂ ಮನೆಗೆ ಬಂದಾಗಿದೆ. ಪೂಜೆಯನ್ನು ಮಾಡಿ, ಒಳ್ಳೆಯದಾಗಲಿ ಎಂದು ಅರಸಿದ್ದಾರೆ.
ಬೀಗರಿಗೆ ಕಾರ್ಡ್ ಕೊಡಲು ಹೊರಟ ಲಕ್ಷ್ಮೀ-ಶ್ರೀನಿವಾಸ
ನಾಲ್ಕನೇ ಮಗನ ಮದುವೆ ಅಂದುಕೊಂಡಂತೆ ನಡೆಯಲಿಲ್ಲ. ಶ್ರೀಮಂತ ಮನೆಯ ಹೆಣ್ಣು ಮಗಳನ್ನು ಯಾರ ಒಪ್ಪಿಗೆಯೂ ಇಲ್ಲದಂತೆ ಮದುವೆಯಾಗಿದ್ದಾನೆ. ಇದು ಜವರೇಗೌಡರಿಗೆ ಕೊಂಚವೂ ಇಷ್ವವಿಲ್ಲ. ಮಗಳನ್ನು ಮಾತ್ರ ಈಗಲೂ ಪ್ರೀತಿಸುತ್ತಾರೆ. ಆದರೆ, ಅಳಿಯ ಎಂದರೆ ಕಾಲು ಕಸದಂತೆ ಕಾಣುತ್ತಾರೆ. ಇಂಥ ಬೀಗರ ಮನೆಗೂ ಮಗಳ ಮದುವೆ ಪತ್ರಿಕೆಯನ್ನು ಕೊಡುವುದಕ್ಕೆ ಲಕ್ಷ್ಮೀ-ಶ್ರೀನಿವಾಸ ಹೊರಟಿದ್ದಾರೆ.

ಬೀಗರನ್ನು ಕಂಡರೆ ಕೆಂಡಕಾರುವ ಗೌಡರು
ಬೀಗರ ಮನೆಯವರು ಬಂದಿದ್ದಾರೆ ಎಂದ ಕೂಡಲೇ ಜವರೇಗೌಡ ಕೆಂಡಾಮಂಡಲರಾಗಿದ್ದಾರೆ. ಅವರನ್ನು ಹೊರಗೆ ನಿಲ್ಲಿಸಿದ್ದಾರೆ. ಬಳಿಕ ಹೆಂಡತಿ ಮಾತು ಕೇಳಿ, ಮನೆಯೊಳಗೆ ಬಿಟ್ಟುಕೊಂಡಿದ್ದಾರೆ. ಆದರೆ ಆಗಲೂ ಅವಮಾನ ಮಾಡಿದ್ದಾರೆ. ಮಗಳ ಮದುವೆ ಬೇರೆ ಮಾಡುತ್ತಿದ್ದೀರಾ. ಮಗನನ್ನು ಶ್ರೀಮಂತ ಹುಡುಗಿಯ ಹಿಂದೆ ಬಿಟ್ಟಂತೆ, ಮಗಳನ್ನು ಯಾವನಾದರೂ ಶ್ರೀಮಂತ ಹುಡುಗನ ಹಿಂದೆ ಬಿಟ್ಟಿರುತ್ತೀರಾ ಎಂದುಕೊಂಡಿದ್ದೆ ಎಂದು ಮನಸ್ಸು ನೋಯಿಸುವ ಮಾತುಗಳನ್ನು ಆಡಿದ್ದಾರೆ. ಜವರೇಗೌಡನ ಹೆಂಡತಿ ಕಾಫಿ ತಂದುಕೊಡುವುದಕ್ಕೆ ಹೋದಾಗಲೂ ಕೊಡದಂತೆ ತಡೆಹಿಡಿದು ಅವಮಾನ ಮಾಡಿದ್ದಾನೆ.
ಲಕ್ಷ್ಮಕ್ಕನೇ ಬೀಗರು ಅಂತ ಗೊತ್ತಾದರೆ..?
ಸಿದ್ದೇಗೌಡನಿಗೆ ಲಕ್ಷ್ಮಕ್ಕ ಎಂದರೆ ಪ್ರೀತಿ ಜಾಸ್ತಿ. ಆದರೆ, ಅವರೆ ತಮ್ಮ ಅಕ್ಕನ ಅತ್ತೆ ಎಂಬುದು ಮಾತ್ರ ಗೊತ್ತಿಲ್ಲ. ದೇವಸ್ಥಾನದಲ್ಲಿ ಸಿಕ್ಕಾಗಲೂ ತಮ್ಮ ಸ್ವಂತ ಅಕ್ಕನಂತೆ ಕಂಡು ಕಳುಹಿಸಿದ್ದಾನೆ. ಎಳನೀರು ಕೊಡಿಸಿ, ಸಮಾಧಾನ ಮಾಡಿ ಕಳುಹಿಸಿದ್ದಾನೆ. ಆದರೆ, ಈಗ ಮನೆಗೆ ಬಂದ ಲಕ್ಷ್ಮಕ್ಕನನ್ನು ಮುಖವನ್ನು ನೋಡದೆ, ಕೋಪ ಬಂದರೆ ಏನಾದರೂ ಮಾಡಿಬಿಡುತ್ತೀನಿ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಹೊರಗೆ ಹೋಗುವಾಗಲೂ ತನ್ನಿಷ್ಟದ ಲಕ್ಷ್ಮಕ್ಕನನ್ನು ನೋಡಲೇ ಇಲ್ಲ. ಪ್ರೀತಿ-ಗೌರವ ಬೆರೆತ ಮೇಲೆ, ಲಕ್ಷ್ಮಕ್ಕ ನಿಜವಾಗಲೂ ಒಳ್ಳೆಯವರು ಎಂದು ತಿಳಿದಿರುವ ಸಿದ್ದೇಗೌಡ, ಅತ್ತೆ ಇವರೇ ಎಂದು ಗೊತ್ತಾದಾಗ ಕ್ಷಮಿಸುತ್ತಾನಾ? ದ್ವೇಷ ಸಾಧಿಸುತ್ತಾನಾ ನೋಡಬೇಕಿದೆ.


Click it and Unblock the Notifications











