Lakshmi nivasa: 'ಲಕ್ಷ್ಮೀ ನಿವಾಸ'ದಲ್ಲಿ ಮೊದಲ ದಿನವೇ ಒಬ್ಬೊಬ್ಬರ ಒಳ್ಳೆಯತನವೂ ಬಯಲಾಗಿ ಹೋಯ್ತು..!
ಸಂಸಾರ ಅಂದ್ರೆನೇ ಹಾಗೇ ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲ. ಅದು ಇದ್ದಂತೆ ಸಂಭಾಳಿಸುತ್ತಾ ಸಾಗಬೇಕಾಗುತ್ತದೆ. ಅದರಲ್ಲೂ ಕೂಡು ಕುಟುಂಬವುದ್ದರಂತು ಮುಗಿದೇ ಹೋಯ್ತು. ಸ್ವಾರ್ಥವೇ ಇಲ್ಲದ ಅಪ್ಪ ಅಮ್ಮನ ಪ್ರೀತಿ ನಡುವೆ ಸ್ವಾರ್ಥ ತುಂಬಿರುವ ಮಕ್ಕಳೇ ಕಾಣಿಸುತ್ತಾರೆ. 'ಲಕ್ಷ್ಮೀ ನಿವಾಸ'ದಲ್ಲಿ ಕೇಳಬೇಕಾ..?
ಇಂದಿನಿಂದ ಜೀ ಕನ್ನಡದಲ್ಲಿ 'ಲಕ್ಷ್ಮೀ ನಿವಾಸ' ಧಾರಾವಾಹಿ ಆರಂಭವಾಗಿದೆ. ಈ ಧಾರಾವಾಹಿ ಕೂಡು ಕುಟುಂಬದ ಮಹತ್ವದ ಜೊತೆಗೆ, ಮಿಡಲ್ ಕ್ಲಾಸ್ ಮಂದಿಯ ಕನಸ್ಸನ್ನು ಹೊತ್ತು, ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸುವುದರ ಜೊತೆಗೆ, ಒಂದು ಮನೆಯನ್ನು ಕಟ್ಟಬೇಕೆಂದುಕೊಳ್ಳುವ ಅಪ್ಪ-ಅಮ್ಮನ ಕಥೆಯಾಗಿದೆ.

'ಲಕ್ಷ್ಮೀ ನಿವಾಸ'ವೆಂಬ ಕೂಡು ಕುಟುಂಬ
'ಲಕ್ಷ್ಮೀ ನಿವಾಸ' ಧಾರಾವಾಹಿ ಇಂದಿನಿಂದ ಆರಂಭವಾಗಿದ್ದು, ಸಾಕಷ್ಟು ವಿಚಾರಗಳಲ್ಲಿ ಗಮನ ಸೆಳೆಯುತ್ತಿದೆ. ಒಂದು ಕೂಡ ಕುಟುಂಬ ಎಂದರೆ ಹೇಗಿರಬೇಕು? ಕೂಡು ಕುಟುಂಬದಲ್ಲಿ ಹೇಗೆಲ್ಲ ಸಮಸ್ಯೆಗಳು ಬರುತ್ತವೆ..? ದೊಡ್ಡವರಾದವರು ಅದನ್ನ ಹೇಗೆ ಸಂಭಾಳಿಸಬೇಕು? ಎಂಬುವುದನ್ನು ತೋರಿಸಲಾಗಿದೆ. ಊಟ-ತಿಂಡಿಯಿಂದ ಹಿಡಿದು, ಎಲ್ಲಾ ವಿಚಾರದಲ್ಲೂ ಮನೆ ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ಒಬ್ಬಳು ಸೊಸೆ ಕೆಲಸಕ್ಕೆ ಹೋಗಿ, ಇನ್ನೊಬ್ಬಳು ಸೊಸೆ ಮನೆಯಲ್ಲಿಯೇ ಇದ್ದಾಗ ಏನೆಲ್ಲಾ ಮಾತುಗಳು ಬರುತ್ತವೆ, ಭಿನ್ನಾಭಿಪ್ರಾಯಗಳು ಹುಟ್ಟುತ್ತವೆ ಎಂಬುದೆಲ್ಲ ಇಂದಿನ ಸಂಚಿಕೆಯಲ್ಲಿ ಅನಾವರಣವಾಗಿದೆ.
ಸೊಸೆಯಂದಿರಲ್ಲೇ ಮನ:ಸ್ತಾಪ
ಲಕ್ಷ್ಮೀ ಮನೆಯಲ್ಲಿ ಇಬ್ವರು ಸೊಸೆಯಂದಿರು. ದೊಡ್ಡ ಸೊಸೆ ಅತ್ತೆಯ ರೀತಿಯೇ ಮನೆಯಲ್ಲಿಯೇ ಇದ್ದು ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಚಿಕ್ಕ ಸೊಸೆ ಕೆಲಸಕ್ಕೆ ಹೋಗುತ್ತಿದ್ದಾಳೆ. ಹೀಗಾಗಿ ಅಹಂಕಾರ ಚಿಕ್ಕ ಸೊಸೆಯ ಮೈಗೆಲ್ಲಾ ಅಂಟಿದೆ. ದೊಡ್ಡ ಸೊಸೆಯ ಮಾತುಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಾಳೆ. ಯಾವಾಗಲೂ ನಾನು ಹೊರಗಡೆ ಹೋಗಿ ದುಡಿಯುವವಳು ಎಂಬ ಮಾತನ್ನು ಹೇಳಿ, ನೋವು ನೀಡುತ್ತಾಳೆ. ಇದರಿಂದ ಇಬ್ಬರು ಸೊಸೆಯಂದಿರ ನಡುವೆ ಆಗಾಗ ಜಗಳ ಶುರುವಾಗುತ್ತಿರುತ್ತದೆ. ಆದರೆ ಅತ್ತೆಗೆ ಜವಾಬ್ದಾರಿ ಜಾಸ್ತಿ ಇದ್ದು, ಸೊಸೆಯಂದಿರ ಜಗಳ ಬಿಡಿಸುವುದರಲ್ಲೆ ಸಾಕಾಗಿ ಹೋಗಿರುತ್ತದೆ.
ಸ್ವಾರ್ಥ ತುಂಬಿದ ಮಕ್ಕಳೇ ಇಬ್ಬರು
ಮಕ್ಕಳನ್ನು ಸಾಕುವಾಗ ಅಪ್ಪ ಅಮ್ಮ ಸ್ವಾರ್ಥದಿಂದ ಯೋಚನೆ ಮಾಡುವುದೇ ಇಲ್ಲ. ಆದರೆ, ಮಕ್ಕಳು ದೊಡ್ಡವರಾದ ಮೇಲೆ ಅಪ್ಪ ಅಮ್ಮನ ಕಷ್ಟಕ್ಕೆ ಆಗುವುದು ಬಹಳ ಅಪರೂಪ. ಲಕ್ಷ್ಮೀ ನಿವಾಸದಲ್ಲೂ ಆ ದೃಶ್ಯಗಳಿಗೇನು ಕಡಿಮೆ ಇಲ್ಲ. ಇಬ್ಬರು ಗಂಡು ಮಕ್ಕಳು ಮೂವರು ಹೆಣ್ಣು ಮಕ್ಕಳು. ಗಂಡು ಮಕ್ಕಳು ದುಡಿಯುವುದಕ್ಕೆ ಹೋಗುತ್ತಾರೆ. ಆದರೂ ಕೇಬಲ್ ಬಿಲ್ ಕಟ್ಟುವುದಕ್ಕೂ ಅಪ್ಪನ ಜೇಬಿನಲ್ಲೇ ಹಣ ತೆಗೆಯುತ್ತಾರೆ. ಅಮ್ಮನಿಗೆ ಮಕ್ಕಳ ಸಂತೋಷವೇ ಮುಖ್ಯವಾದ ಕಾರಣ, ಗಂಡನ ಜೇಬಿನಿಂದಾನೇ ತೆಗೆದು ಕೊಡುತ್ತಾಳೆ. ಮಕ್ಕಳಿಗೂ ನೋವಾಗ ಬಾರದು, ಮನೆಯ ಜವಾಬ್ದಾರಿಯೂ ನಿಲ್ಲಬಾರದು. ಅಮ್ಮನ ಬುದ್ದಿವಂತಿಕೆ, ಅಪ್ಪನ ಶ್ರಮ, ಅಣ್ಣಂದಿರ ನಾಟಕಗಳನ್ನು ಹೆಣ್ಣು ಮಕ್ಕಳು ಚೆನ್ನಾಗಿಯೇ ಅರಿತಿದ್ದಾರೆ.
ಮೊದಲ ದಿನವೇ ಖುಷಿಕೊಟ್ಟ ಧಾರಾವಾಹಿ
ಈಗಾಗಲೇ ಜೀ ಕನ್ನಡದಲ್ಲಿ ಬರುತ್ತಿರುವ ಧಾರಾವಾಹಿಗಳು ಟಾಪ್ ಸೀರಿಯಲ್ ಗಳಾಗಿವೆ. ಅದರಲ್ಲಿ ಈಗ ಹೊಸದಾಗಿ ಇಂದಿನಿಂದ ಲಕ್ಷ್ಮೀ ನಿವಾಸ ಶುರುವಾಗಿದೆ. ಹಿರಿಯ ನಟಿ ಶ್ವೇತಾ, ಹಿರಿಯ ನಟಿ ಲಕ್ಷ್ಮೀ ದೇವಿ, ಚಂದನಾ ಸೇರಿದಂತೆ ಹಿರಿಯರನ್ನು ಕಂಡು ಪ್ರೇಕ್ಷಕರು ಖುಷಿಯಾಗಿದ್ದಾರೆ. ಇನ್ನು ಕೂಡು ಕುಟುಂಬದ ಕಥೆಗೆ ಖುಷಿಯಾಗಿದ್ದಾರೆ.


Click it and Unblock the Notifications











