ಪುಸ್ತಕ ರೂಪ ಪಡೆಯಲಿದೆ 'ವೀಕೆಂಡ್ ವಿತ್ ರಮೇಶ್'
ವಿಭಿನ್ನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ಪ್ರತಿ ದಿನ ರಂಜಿಸುತ್ತಿರುವ ಜೀ ಕನ್ನಡ ವಾಹಿನಿ, ತನ್ನ ವಿಶೇಷ ಕಾರ್ಯಕ್ರಮವನ್ನು ಎರೆಡೂವರೆ ವರ್ಷಗಳ ನಂತರ ಮತ್ತೆ ನಿಮ್ಮ ಮುಂದೆ ತರಲು ಪೂರ್ಣ ತಯಾರಿಯನ್ನು ನಡೆಸಿದೆ. ಹೌದು, ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೂಲಕ ಇಡೀ ಕಿರುತೆರೆಯಲ್ಲಿಯೇ ದೊಡ್ಡ ಛಾಪು ಮೂಡಿಸಿದ್ದ ಜೀ ವಾಹಿನಿ ಸೀಸನ್ 4 ಕಾರ್ಯಕ್ರಮವನ್ನು ಏಪ್ರಿಲ್ 20 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9:30ಕ್ಕೆ ನಿಮ್ಮ ಮುಂದೆ ಇಡಲಿದೆ.
ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೂರೂ ಸೀಸನ್ ಗೂ ಅತ್ಯದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮೂರು ಸೀಸನ್ ಗಳಲ್ಲಿ ಸಾಧಕರ ಸೀಟ್ ಮೇಲೆ ಕೂತಿದ್ದ ಅತಿಥಿಗಳ ಸಾಧನೆಯ ಹಾದಿಯನ್ನು ಕೇವಲ ಜನರ ಮುಂದೆ ಇಡುವುದಲ್ಲದೇ ಮತ್ತೊಮ್ಮೆ ಅತಿಥಿಗಳಿಗೆ ಅವರು ನಡೆದು ಬಂದ ಹಾದಿಯನ್ನು ತೋರಿಸಿ ಸಾಕಷ್ಟು ಅತ್ಯಮೂಲ್ಯ ಭಾವನೆಗಳನ್ನು ಕಲೆ ಹಾಕಿರುವ ಕಾರ್ಯಕ್ರಮ ವೀಕೆಂಡ್ ವಿಥ್ ರಮೇಶ್.
ಬಾಲ್ಯದಿಂದ ಅವರು ಅನುಭವಿಸಿದ ಕಷ್ಟ-ಸುಖಗಳು, ಕಲಿತ ಪಾಠಗಳು, ಕಲೆ ಹಾಕಿದ ಸ್ನೇಹ ಸಂಬಂಧಗಳು, ಖುಷಿಯ ಕ್ಷಣಗಳು, ಅವರ ಸಾಧನೆಗಳು ಹೀಗೆ ಅವರು ಸವಿಸಿದ ಹಾದಿಯಲ್ಲಿ ಅನುಭವಿಸಿದ ಪ್ರತಿಯೊಂದು ಅಮೂಲ್ಯವಾದ ಕ್ಷಣಗಳನ್ನು ಮತ್ತೊಮ್ಮೆ ಅವರ ಮುಂದೆ ತೆರೆದಿಟ್ಟು ಅತಿಥಿಗಳಿಗೆ, ವೀಕ್ಷಕರಿಗೆ ರಸದೌತಣವನ್ನು ನೀಡಿದೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ.

ಸಾಧಕರ ಸಾಧನೆಯೇ ಕಾರಣ
ಇನ್ನು ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಗಲು ಕಾರಣ ಸಾಧಕರು ನಡೆದು ಬಂದ ಹಾದಿ ವೀಕ್ಷಕರಿಗೆ ಒಂದು ರೀತಿ ಸ್ಪೂರ್ತಿಯಾಗಿರುವುದು. ತಮ್ಮ ನೆಚ್ಚಿನ ನಟ-ನಟಿ ಅಥವ ಅವರವರ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿರುವ ಈ ಅತಿಥಿಗಳು ಹೇಗೆ ಬೆಳೆದು ಬಂದಿದ್ದರು, ಅವರ ಜೀವನ ಹೇಗೆ ಕಷ್ಟ-ಸುಖ ಎರಡರಿಂದಲೂ ತುಂಬಿರುತ್ತದೆ. ಸಾಧನೆ ಮಾಡಬೇಕು ಅಂದ್ರೆ ಹೇಗೆ ಛಲ ಬಿಡದೆ, ಧೃತಿಗೆಡದೆ ಕೆಲಸ ಮಾಡಬೇಕು ಎನ್ನುವುದಕ್ಕೆ ಸಾಧಕರ ಸೀಟ್ ಮೇಲೆ ಕುಳಿತುಕೊಳ್ಳುವ ಅತಿಥಿಗಳು ಅತ್ಯುತ್ತಮ ನಿದರ್ಶನ. ಈ ಕಾರ್ಯಕ್ರಮದ ಮೂಲಕ ಸಾಧಕರು ವೀಕ್ಷಕರ ಮನಸ್ಸಿಗೆ ಹತ್ತಿರವಾಗಲು ಕಾರಣವಾಗಿದೆ.

ಈ ಸಲ ಪ್ರೋಮೋ ಆಕರ್ಷಣೆ
ವೀಕೆಂಡ್ ವಿಥ್ ರಮೇಶ್ ಸೀಸನ್ 4 ಕಾರ್ಯಕ್ರಮದ ಮುಖ್ಯ ಆಕರ್ಷಣೆ, ಅದರ ಪ್ರೋಮೋ. ಸಾಕಷ್ಟು ವಿಭಿನ್ನತೆ ಮತ್ತು ವೈಶಿಷ್ಟತೆಯನ್ನು ಈ ಪ್ರೋಮೋ ಒಳಗೊಂಡಿದೆ. ಪ್ರೋಮೋ ತಯಾರಿಸಲು ಜೀ ಕನ್ನಡ ವಾಹಿನಿಯ ತಂಡ ತಲುಪಿದ್ದು ಬೆಂಗಳೂರಿನಿಂದ 258 ಕಿ.ಮಿ ದೂರದಲ್ಲಿ ಇರುವ ಮಡಿಕೇರಿಯ ಮಂದಾಲಪಟ್ಟಿಯ ತುತ್ತ ತುದಿಯನ್ನು.

ರಾಘವೇಂದ್ರ ಹುಣುಸೂರ್ ಸಂತಸ
ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರ ಸಾರಥ್ಯದಲ್ಲಿ ವಾಹಿನಿಯ ತಂತ್ರಜ್ಞರ ತಂಡ ಹಾಗೂ ಪ್ರೊಡಕ್ಷನ್ ತಂಡ ಸಾಕಷ್ಟು ಕಷ್ಟಪಟ್ಟು ಮಂದಾಲಪಟ್ಟಿಯ ತುತ್ತ ತುದಿಗೆ ಸೆಟ್ ಪ್ರಾಪರ್ಟಿಗಳನ್ನು ಸಾಗಿಸಿ ಅಲ್ಲಿ ಒಂದು ಸುಂದರ ಪ್ರೋಮೋ ಸೆಟ್‌ನ್ನು ನಿರ್ಮಿಸಿದ್ದು ಪ್ರೋಮೋ ಅದ್ಭುತವಾಗಿ ಮೂಡಿಬಂದಿದೆ. ಈಗಾಗಲೇ ಪ್ರೋಮೋಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಪುಸ್ತಕ ರೂಪದಲ್ಲಿ ವೀಕೆಂಡ್ ವಿತ್ ರಮೇಶ್
ವೀಕೆಂಡ್ ವಿಥ್ ರಮೇಶ್ ಸೀಸನ್ 4 ಕಾರ್ಯಕ್ರಮದ ಬಗ್ಗೆ ಮಾತನಾಡಿದ ರಾಘವೇಂದ್ರ ಹುಣಸೂರು "ಪ್ರತಿ ಸೀಸನ್ ನ ಹಾಗೇ ಈ ಸೀಸನ್ ನಲ್ಲೂ ವಿಶೇಷ ಸಾಧಕರನ್ನು ಸಾಧಕರ ಸೀಟ್ ಮೇಲೆ ಕೂರಿಸಲಿದ್ದೇವೆ. ಸಾಧಕರಿಗೆ ಗೌರವ ಸಲ್ಲಿಸುವುದರ ಜೊತೆಗೆ ಅವರ ಸಾಧನೆಯ ಹಾದಿ ಪ್ರೇಕ್ಷಕರಿಗೆ ಒಂದು ರೀತಿ ಸ್ಪೂರ್ತಿ ನೀಡಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶ. ಕಳೆದ ಮೂರು ಸೀಸನ್ ಗೆ ಕೊಟ್ಟ ಪ್ರೀತಿ ಈ ಸೀಸನ್ ಗೂ ನೀಡಿ. ಇನ್ನು ನಾಲ್ಕನೆ ಸೀಸನ್ ಮುಗಿದ ನಂತರ ನಾಲ್ಕು ಸೀಸನ್ ನಲ್ಲಿ ಸಾಧಕರ ಸೀಟ್ ಮೇಲೆ ಆಸೀನರಾಗಿದ್ದ ಅತಿಥಿಗಳನ್ನು ಕರೆಸಿ ಮತ್ತೊಂದು ಅದ್ಭುತ ಕಾರ್ಯಕ್ರಮ ಮಾಡಿ ನಾಲ್ಕು ಸೀಸನ್ ನ ಸಿ.ಡಿ ಹಾಗೂ ವೀಕೆಂಡ್ ವಿಥ್ ರಮೇಶ್ ಪುಸ್ತಕ ಬಿಡುಗಡೆ ಮಾಡಲಿದ್ದೇವೆ" ಎಂದರು.

ಹೆಮ್ಮೆ ಪಡುವಂತ ಸಾಧಕರು ಬರ್ತಾರೆ
ಪ್ರತಿ ಸೀಸನ್ ನ ಹಾಗೇ ಈ ಸೀಸನ್ ನಲ್ಲೂ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ, ನಮ್ಮ ನಾಡಿನ ಜನ ಹೆಮ್ಮೆ ಪಡುವಂತೆ ಮಾಡಿರುವ ಸಾಧಕರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬರಲಿದ್ದಾರೆ. ಅವರ ಲೈಫ್ ಜರ್ನಿಯನ್ನು ಅವರಿಗೆ ತೋರಿಸಿ ಮತ್ತೆ ಅವರನ್ನು ಹಿಂದಿನ ದಿನಗಳಿಗೆ ಕರೆದುಕೊಂಡು ಹೋಗಲು ಇದೇ ತಿಂಗಳು ಅಂದ್ರೆ ಏಪ್ರಿಲ್ 20 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 30ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿಥ್ ರಮೇಶ್ ಸೀಸನ್ 4 ಕಾರ್ಯಕ್ರಮ ಪ್ರಸಾರವಾಗಲಿದೆ.


Click it and Unblock the Notifications











