ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!
ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಹೇಗೆ ಎಷ್ಟು ಕಲೆಕ್ಷನ್ ಮಾಡಿದವು, ಎಷ್ಟು ಜನರು ಚಿತ್ರ ವೀಕ್ಷಿಸಿದರು ಎಂದು ಲೆಕ್ಕಾಚಾರ ಹಾಕಿ ಚಿತ್ರದ ಸೋಲು ಗೆಲುವನ್ನು ನಿರ್ಧಿಸಲಾಗುತ್ತದೆಯೋ, ಅದೇ ರೀತಿ ಸಿನಿಮಾಗಳು ಕಿರುತೆರೆಗೆ ಬಂದಾಗ ಎಷ್ಟು ಟಿವಿಆರ್ ( ಟೆಲಿವಿಷನ್ ವ್ಯೂವರ್‌ಶಿಪ್ ರೇಟಿಂಗ್ಸ್ ) ಗಳಿಸಿದವು ಎಂಬುದರ ಮೂಲಕ ಆ ಚಿತ್ರಗಳು ಕಿರುತೆರೆಯಲ್ಲಿ ಗೆದ್ವಾ ಅಥವಾ ಸೋತ್ವಾ ಎಂಬುದನ್ನು ನಿರ್ಧರಿಸಲಾಗುತ್ತದೆ.
ಇನ್ನು ಹೆಚ್ಚು ಟಿವಿಆರ್ ಗಳಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಈಗಿನ ಓಟಿಟಿ ಯುಗದಲ್ಲಂತೂ ಒಳ್ಳೆಯ ಟಿವಿಆರ್ ಪಡೆದುಕೊಳ್ಳುವುದು ಅತಿ ಕಷ್ಟವೇ. ಇನ್ನು ಚಿತ್ರಮಂದಿರಗಳಲ್ಲಿ ಹೆಚ್ಚಾಗಿ ವೀಕ್ಷಿಸಲ್ಪಟ್ಟ ಚಿತ್ರಗಳು ಹಾಗೂ ಫ್ಯಾಮಿಲಿ ಎಂಟರ್‌ಟೈನರ್ ಅಲ್ಲದ ಚಿತ್ರಗಳು ಹೆಚ್ಚು ಟಿವಿಆರ್ ಪಡೆದುಕೊಳ್ಳುವುದು ತೀರಾ ಕಷ್ಟ.
ಚಿತ್ರಮಂದಿರಗಳಲ್ಲಿ ಹೆಚ್ಚು ಜನ ವೀಕ್ಷಿಸಿದ ಜನಪ್ರಿಯ ಚಿತ್ರಗಳು ಮೊದಲಿನ ಹಾಗೆ ನೇರವಾಗಿ ಟಿವಿಗೆ ಬರದೇ ಓಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಓಟಿಟಿಯಲ್ಲೂ ಚಿತ್ರ ವೀಕ್ಷಿಸುವ ಸಿನಿ ರಸಿಕರ ಸಂಖ್ಯೆ ಹೆಚ್ಚಿದೆ. ಅಲ್ಲದೇ ಟಿವಿಯಲ್ಲಿ ಸಾಲು ಸಾಲು ಜಾಹೀರಾತುಗಳ ಕಿರಿಕಿರಿ ನಡುವೆ ಸಿನಿಮಾವನ್ನು ವೀಕ್ಷಿಸಲೂ ಸಹ ಕೆಲವು ಇಷ್ಟಪಡದೇ ಓಟಿಟಿಯನ್ನೇ ಆಯ್ದುಕೊಳ್ತಾರೆ. ಇಷ್ಟೆಲ್ಲಾ ಅಂಶಗಳು ಪ್ರಭಾವ ಬೀರಿದರೂ ಸಹ ಇತ್ತೀಚೆಗೆ ತೆರೆಕಂಡ ಹಲವು ಕನ್ನಡ ಚಿತ್ರಗಳು ಒಳ್ಳೆಯ ಟಿವಿಆರ್‌ಗಳನ್ನೇ ಪಡೆದುಕೊಂಡು ಸಿನಿಮಾ ಮಂದಿಯ ಹುಬ್ಬೇರುವಂತೆ ಮಾಡಿವೆ. ಅದರಲ್ಲಿಯೂ ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡ ಕಾಂತಾರ ದಾಖಲೆಯ ಟಿವಿಆರ್ ಪಡೆದುಕೊಂಡು ಅತಿಹೆಚ್ಚು ಟಿವಿಆರ್ ಪಡೆದುಕೊಂಡ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ. ಹಾಗಿದ್ದರೆ ಅತಿಹೆಚ್ಚು ಟಿವಿಆರ್ ಪಡೆದುಕೊಂಡಿರುವ ಕನ್ನಡ ಚಿತ್ರಗಳ ಟಾಪ್ 14 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ...

ಅತಿಹೆಚ್ಚು ಟಿವಿಆರ್ ಪಡೆದುಕೊಂಡ ಚಿತ್ರಗಳು
ಟಿವಿಯಲ್ಲಿ ಪ್ರೀಮಿಯರ್ ಆದ ಕನ್ನಡ ಚಿತ್ರಗಳ ಪೈಕಿ ಅತಿಹೆಚ್ಚು ಟಿವಿಆರ್ ಪಡೆದುಕೊಂಡ 14 ಚಿತ್ರಗಳ ಪಟ್ಟಿ ಇಲ್ಲಿದೆ..
1. ದೊಡ್ಮನೆ ಹುಡ್ಗ - 20.7 ಟಿವಿಆರ್
2. ಕುರುಕ್ಷೇತ್ರ - 19.5 ಟಿವಿಆರ್
3. ರಾಜಕುಮಾರ - 18.9 ಟಿವಿಆರ್
4. ಪೈಲ್ವಾನ್ - 16.5 ಟಿವಿಆರ್
5. ನಟಸಾರ್ವಭೌಮ - 15.3 ಟಿವಿಆರ್
6. ಕಾಂತಾರ - 14.8 ಟಿವಿಆರ್
7. ಹೆಬ್ಬುಲಿ - 14.6 ಟಿವಿಆರ್
8. ಅಂಜನಿಪುತ್ರ - 14.3 ಟಿವಿಆರ್
9. ಮಾಸ್ಟರ್ ಪೀಸ್ - 13.8 ಟಿವಿಆರ್
10. ಪೊಗರು - 13.2 ಟಿವಿಆರ್
11. ಯುವರತ್ನ - 13.02 ಟಿವಿಆರ್
12. ಐರಾವತ - 12.7 ಟಿವಿಆರ್
13. ಯಜಮಾನ - 11.3 ಟಿವಿಆರ್
14. ಕೆಜಿಎಫ್ ಚಾಪ್ಟರ್ 2 - 10.2 ಟಿವಿಆರ್

ಪುನೀತ್ ರಾಜ್‌ಕುಮಾರ್ ಟಿವಿಆರ್ ಕಿಂಗ್
ಇನ್ನು ಮೇಲ್ಕಂಡ ಪಟ್ಟಿಯನ್ನು ನೋಡಿದರೆ ಪುನೀತ್ ರಾಜ್‌ಕುಮಾರ್ ಟಿವಿಆರ್ ಕಿಂಗ್ ಎಂಬುದು ಖಚಿತವಾಗಿಬಿಡುತ್ತೆ. ಪುನೀತ್ ನಟನೆಯ ಐದು ಚಿತ್ರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ ಹಾಗೂ ಅಪ್ಪು ನಟನೆಯ ದೊಡ್ಮನೆ ಹುಡ್ಗ ಚಿತ್ರ ಪಡೆದುಕೊಂಡಿದ್ದ ದಾಖಲೆಯ ಟಿವಿಆರ್ ಅನ್ನು ಹಿಂದಿಕ್ಕಿ ನಂಬರ್ ಒನ್ ಎನಿಸಿಕೊಳ್ಳಲು ಇಂದಿಗೂ ಸಹ ಯಾವ ಚಿತ್ರಕ್ಕೂ ಆಗಿಲ್ಲ. ಅಷ್ಟೇ ಅಲ್ಲದೇ ಎರಡನೇ ಬಾರಿಗೆ ಅಪ್ಪು ಅಭಿನಯದ ಚಿತ್ರಗಳು ಟಿವಿಯಲ್ಲಿ ಪ್ರದರ್ಶನಗೊಂಡಾಗಲೂ ಸಹ ಒಳ್ಳೆಯ ಟಿವಿಆರ್‌ಗಳನ್ನು ಪಡೆದುಕೊಂಡಿವೆ.

ಕಾಂತಾರ ಟಿವಿಆರ್ ದಾಖಲೆಯೇ ಸರಿ
ಇನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಟಿವಿಗೆ ಬಂದ ಕಾಂತಾರ ಚಿತ್ರ ಹಿರಿತೆರೆಯ ಹಾಗೆ ಕಿರುತೆರೆಯಲ್ಲೂ ಸಹ ಅಬ್ಬರಿಸಿದೆ. 14.8 ಟಿವಿಆರ್ ಪಡೆದುಕೊಂಡ ಕಾಂತಾರ ಓಟಿಟಿ ಯುಗದಲ್ಲಿ ಅತಿಹೆಚ್ಚು ಟಿವಿಆರ್ ಪಡೆದುಕೊಂಡ ಕನ್ನಡ ಚಿತ್ರ ಎಂಬ ದಾಖಲೆ ಬರೆದಿದೆ. ಚಿತ್ರಮಂದಿರದಲ್ಲಿ ಹಾಗೂ ಓಟಿಟಿಯಲ್ಲೂ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟರೂ ಸಹ ಕಾಂತಾರ ಚಿತ್ರ ಈ ಮಟ್ಟದ ಟಿವಿಆರ್ ಪಡೆದುಕೊಂಡಿರುವುದು ದಾಖಲೆಯೇ.


Click it and Unblock the Notifications











