ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಆಗಿದ್ದ ಮಧುಶ್ರೀಗೆ 'ಯಜಮಾನ' ಸೀರಿಯಲ್‌ಗೆ ಆಯ್ಕೆ ಆಗಿದ್ದೇಗೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಹೆಸರು 'ಯಜಮಾನ'. ಕಳೆದ ವರ್ಷವಷ್ಟೇ ಶುರುವಾಗಿರುವ ಈ ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 'ಯಜಮಾನ' ಧಾರಾವಾಹಿಯಲ್ಲಿ ನಾಯಕಿ ಝಾನ್ಸಿಯಾಗಿ ಅಭಿನಯಿಸುತ್ತಿದ್ದಾರೆ ಮಧುಶ್ರೀ ಭೈರಪ್ಪ.
ನಾಯಕಿ ಝಾನ್ಸಿಗೆ ಗಂಡಸರನ್ನು ಕಂಡರೆ ಇಷ್ಟವಿಲ್ಲ. ಇಷ್ಟವಿಲ್ಲ ಎನ್ನುವುದಕ್ಕಿಂತಲೂ ಹೆಚ್ಚು ಆಕೆ ಗಂಡಸರನ್ನು ದ್ವೇಷಿಸುತ್ತಾಳೆ. ಕೋಟ್ಯಾಂತರ ಆಸ್ತಿಯ ಒಡತಿ ಆಗಿರುವ ಝಾನ್ಸಿ ಆ ಆಸ್ತಿಯ ಒಡತಿ ಆಗಬೇಕಾದರೆ ಮದುವೆ ಆಗಲೇ ಬೇಕು. ಅದು ಆಕೆಯ ತಾತನ ಬಯಕೆ ಮಾತ್ರವಲ್ಲ ಅವರು ವಿಲ್‌ನಲ್ಲಿಯೂ ಹಾಗೇ ಬರೆದಿರುತ್ತಾರೆ. ಗಂಡಸರನ್ನೇ ಕಂಡರೆ ಆಗದ, ಸಿಡುಕುವ ಝಾನ್ಸಿಗೆ ಅಜ್ಜನ ನಿರ್ಧಾರದಿಂದ ಶಾಕ್ ಆದರೂ ಆಕೆ ಆಸ್ತಿ ಪಡೆಯುವ ಉದ್ದೇಶದಿಂದ ಮದುವೆಯಾಗುವ ನಿರ್ಧಾರ ಮಾಡುತ್ತಾಳೆ. ಅದು ಕಾಂಟ್ರಾಕ್ಟ್ ಮದುವೆ.

ಝಾನ್ಸಿ ಆಫೀಸಿಗೆ ಕೆಲಸ ಕೇಳಲು ಬಂದಿರುವ ನಾಯಕ ರಾಘವೇಂದ್ರನಿಗೆ ಆಕೆ ಕಾಂಟ್ರಾಕ್ಟ್ ಮದುವೆಯ ಬಗ್ಗೆ ತಿಳಿಸಿ ಆತನಿಗೆ ಸಹೊ ಹಾಕುವಂತೆ ಹೇಳುತ್ತಾಳೆ. ಆದರೆ ನಾಯಕ ರಾಘವೇಂದ್ರ ಇದನ್ನು ತಿರಸ್ಕರಿಸುತ್ತಾನೆ. ಆದರೆ ಝಾನ್ಸಿ ಅವನನ್ನು ಒಂದು ತಿಂಗಳ ಮಟ್ಟಿಗೆ ಗಂಡನನ್ನಾಗಿ ಮಾಡುವ ನಿರ್ಧಾರ ಮಾಡಿಯಾಗಿದೆ. ಇದೀಗ ನಾಯಕಿ ಅದು ಹೇಗೆ ನಾಯಕನನ್ನು ಮದುವೆಗೆ ಒಪ್ಪಿಸುತ್ತಾಳೆ. ಮದುವೆಯ ನಂತರ ಕಥೆಯಲ್ಲಿ ಯಾವ ರೀತಿ ಟ್ವಿಸ್ಟ್ ಸಿಗಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಅಂದ ಹಾಗೇ 'ಯಜಮಾನ' ಧಾರಾವಾಹಿಯಲ್ಲಿ ನಾಯಕಿ ಝಾನ್ಸಿಯಾಗಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಮಧುಶ್ರೀ ಭೈರಪ್ಪ. ಮೂಲತಃ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರುವ ಮಧುಶ್ರೀ ಅವರಿಗೆ ಇದು ಮೊದಲ ಧಾರಾವಾಹಿ ಹೌದು. ಸೋಶಿಯಲ್ ಮೀಡಿಯಾದಲ್ಲಿ ಕೊಂಚ ಮಟ್ಟಿಗೆ ಆ್ಯಕ್ಟೀವ್ ಆಗಿರುವ ಮಧುಶ್ರೀ ಭೈರಪ್ಪ ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಕೂಡ ಹೌದು. ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡುವ ಈಕೆ ಅವುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.

ಇನ್ನು ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿರುವ ಮಧುಶ್ರೀ ಆಗಾಗ ವ್ಲಾಗ್‌ಗಳನ್ನು ಕೂಡಾ ಮಾಡುತ್ತಿರುತ್ತಾರೆ. ಇನ್ನು ಎಂಕಾಂ ಪದವೀಧರೆಯಾಗಿರುವ ಮಧುಶ್ರೀ ಭೈರಪ್ಪ ಅವರು 'ಯಜಮಾನ' ಧಾರಾವಾಹಿಗಿಂತಲೂ ಮೊದಲು ಬೇರೊಂದು ಧಾರಾವಾಹಿಯಲ್ಲಿ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಇದೀಗ ಕನ್ನಡ ಕಿರುತೆರೆಯ ಜನಪ್ರಿಯ ನಿರ್ದೇಶಕ ರಾಮ್ ಜೀ ಅವರ ನಿರ್ದೇಶನದ 'ಯಜಮಾನ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಮಧುಶ್ರೀ ಅವರಿಗೆ ಖುಷಿ ನೀಡಿದೆ.
ತೆರೆಯ ಮೇಲೆ ಝಾನ್ಸಿ ಎನ್ನುವ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಸಕತ್ ಬೋಲ್ಡ್ ಆಗಿರುವ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ನಿಜವಾಗಿಯೂ ಖುಷಿಯಿದೆ. ಝಾನ್ಸಿ ಪಾತ್ರಕ್ಕೆ ಜೀವ ತುಂಬುತ್ತಿರುವುದಕ್ಕೂ ನನಗೆ ಖುಷಿಯಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಝಾನ್ಸಿ ಪಾತ್ರದ ಪರಿಚಯಕ್ಕೆ ಸ್ಯಾಂಡಲ್‌ವುಡ್ ನಟಿ ಶ್ರುತಿ, ಕಾಂತಾರ ನಟಿ ಸಪ್ತಮಿ ಗೌಡ ಕಿರುತೆರೆಗೆ ಬಂದಿರುವುದು ಖುಷಿ ನೀಡಿದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಧುಶ್ರೀ ಹೇಳಿಕೊಂಡಿದ್ದರು.
ಒಟ್ಟಿನಲ್ಲಿ ರೀಲ್ಸ್ ಮಾಡಿ ನೆಟ್ಟಿಗರ ಮನ ಸೆಳೆದಿದ್ದ ಬೆಡಗಿ ಇದೀಗ ನಟನೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಲು ತಯಾರಾಗಿದ್ದಾರೆ. ಇದೇ ಮೊದಲ ಬಾರಿಗೆ ನಟಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











