ಸಿ.ಎಸ್.ಪಿ ತಲೆಯಲ್ಲಿ ಕೊರೆಯುತ್ತಿದ್ದ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ತು.!
ಇತ್ತೀಚಿನ ದಿನಗಳಲ್ಲಿ ಮೆಗಾ ಧಾರಾವಾಹಿಗಳಿಗೆ ದೊಡ್ಡ ತಿರುವು ಸಿಗುವುದೇ ತೀರಾ ಅಪರೂಪ. ಅಂಥದ್ರಲ್ಲಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ದಿನೇ ದಿನೇ ರೋಚಕವಾಗುತ್ತಿದೆ.
ಒಂದು ಕಡೆ ಜಾನಕಿಗೆ ಆದ ಮೋಸದ ಮದುವೆ ಬಗ್ಗೆ ಆನಂದ್ ಬೆಳಗೂರು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದು ಕಡೆಗೆ ಜಾನಕಿಗೆ ನಿರಂಜನ್ ಹೇಳಿರುವ ಒಂದೊಂದೇ ಸುಳ್ಳುಗಳು ಅರಿವಿಗೆ ಬರುತ್ತಿದೆ.
ಜಾನಕಿ ಮದುವೆ ಆಗುತ್ತಿರುವ ಗಂಡಿನ ಹೆಸರು 'ನಿರಂಜನ್ ಧಾವಳಿ' ಅಂತ ಗೊತ್ತಾದಾಗ ಸಿ.ಎಸ್.ಪಿ ತಲೆಯಲ್ಲಿ ಅನುಮಾನದ ಹುಳ ಹೊಕ್ಕಿತ್ತು. ತಮ್ಮ ಮನೆಯಲ್ಲಿ ಬಾಡಿಗೆಗೆ ಇರುವ ನಿರಂಜನ್ ಏನಾದರೂ ಜಾನಕಿಯನ್ನ ಮದುವೆ ಆಗುತ್ತಿದ್ದಾನಾ ಎಂಬ ಸಂಶಯ ಅಂದು ಸಿ.ಎಸ್.ಪಿಗೆ ಕಾಡಿತ್ತು. ಈಗ ನೋಡಿದರೆ ಅದೇ ನಿಜವಾಗಿಬಿಟ್ಟಿದೆ. ಕಡೆಗೂ ಸಿ.ಎಸ್.ಪಿಗೆ ಸತ್ಯ ಗೊತ್ತಾಗಿದೆ. ಮುಂದೆ ಓದಿರಿ...

ಸಿ.ಎಸ್.ಪಿ ಮನೆಯಲ್ಲಿ ಜಾನಕಿ-ನಿರಂಜನ್
ಮೋಸದ ಮದುವೆ ಬಗ್ಗೆ ಆನಂದ್ ಬೆಳಗೂರು ತನಿಖೆ ಮಾಡುತ್ತಿರುವ ಕಾರಣ, ನಿರಂಜನ್ ಗೆ ಬಂಧನದ ಭೀತಿ ಕಾಡುತ್ತಿದೆ. ಆದ್ರೆ, ನಿರಂಜನ್ ಅರೆಸ್ಟ್ ಆಗುವುದು ಜಾನಕಿಗೆ ಇಷ್ಟವಿಲ್ಲ. ಹೀಗಾಗಿ, ಸಿ.ಎಸ್.ಪಿ ಮುಂದೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಜಾನಕಿ ಮತ್ತು ನಿರಂಜನ್ ಮುಂದಾಗಿದ್ದರು.

ಸಿ.ಎಸ್.ಪಿಗೆ ಡೌಟು
ದಿಢೀರ್ ಅಂತ ಮನೆಗೆ ಬಂದ ನಿರಂಜನ್ ಹಾಗೂ ಜಾನಕಿಯ ವರ್ತನೆ ನೋಡಿ ಸಿ.ಎಸ್.ಪಿಗೆ ಅನುಮಾನ ಮೂಡಿತು. ಜಾನಕಿಯ ಗಂಡ ಇದೇ ನಿರಂಜನ್ ಇರಬಹುದಾ ಅಂತ ಸಿ.ಎಸ್.ಪಿ ಯೋಚಿಸುತ್ತಿರುವಾಗಲೇ ಸತ್ಯ ಬಟಾ ಬಯಲಾಯಿತು.

ನಾನೇ ಜಾನಕಿ ಗಂಡ ಎಂದು ಒಪ್ಪಿಕೊಂಡ ನಿರಂಜನ್
ಸಿ.ಎಸ್.ಪಿ ಮುಂದೆ ''ನಾನೇ ಜಾನಕಿ ಗಂಡ'' ಎಂದು ನಿರಂಜನ್ ಒಪ್ಪಿಕೊಂಡರು. ಇದನ್ನು ಕೇಳಿ ಕೋಪಗೊಂಡ ಸಿ.ಎಸ್.ಪಿ, ನಿರಂಜನ್ ಗೆ ಛೀಮಾರಿ ಹಾಕಲು ಶುರು ಮಾಡಿದರು. ಅವಮಾನ ಸಹಿಸದ ಜಾನಕಿ-ನಿರಂಜನ್ ಹೆಚ್ಚು ಮಾತನಾಡದೆ ಹೊರಟರು.

ಮುಂದೇನಾಗುತ್ತೆ.?
ಮಗಳು ಜಾನಕಿಗೆ ಮೋಸ ಮಾಡಿದ ಗಂಡು ಯಾರು ಎಂಬುದು ಸಿ.ಎಸ್.ಪಿಗೆ ಗೊತ್ತಾಗಿದೆ. ಅವರ ಮುಂದಿನ ನಡೆ ಏನು ಎಂಬುದೇ ಸದ್ಯ ವೀಕ್ಷಕರಿಗೆ ಕಾಡುತ್ತಿರುವ ಕುತೂಹಲ.


Click it and Unblock the Notifications











