'ಮಗಳು ಜಾನಕಿ' ಖ್ಯಾತಿಯ ಗಾನವಿ ಲಕ್ಷ್ಮಣ್ ಮುಂದಿನ ಸಿನಿಮಾ ಯಾವುದು ಗೊತ್ತೇ?
ಗಾನವಿ ಲಕ್ಷ್ಮಣ್.. ಕಿರುತೆರೆ ವೀಕ್ಷಕರಿಗೆ ಕೊಂಚ ಅಪರಿಚಿತ ಹೆಸರು ಎಂದೆನಿಸಿದರೂ ಪರಿಚಿತವಾಗಿರುವ ಮುಖ ಹೌದು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಟಿ.ಎನ್. ಸೀತಾರಾಮ್ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಾಯಕಿ ಜಾನಕಿಯಾಗಿ ನಟಿಸಿದ್ದ ಈಕೆ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಬೆಡಗಿ.
ಎರಡು ವರ್ಷಗಳ ಕಾಲ ಜಾನಕಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಗಾನವಿ ಲಕ್ಷ್ಮಣ್ ನಂತರ ಕಿರುತೆರೆಯಲ್ಲಿ ಕಾಣಿಸಿದ್ದು ಕಡಿಮೆ. ಕಡಿಮೆ ಅಲ್ಲ, ಕಾಣಿಸಿಕೊಂಡಿದ್ದೇ ಇಲ್ಲ ಎಂದರೂ ತಪ್ಪಾಗಲಾರದು. 'ಮಗಳು ಜಾನಕಿ' ಧಾರಾವಾಹಿ ಮುಕ್ತಾಯಗೊಂಡಿದ್ದೇ ಸಿನಿಮಾದ ಕಡೆಗೆ ಮುಖ ಮಾಡಿದ ಗಾನವಿ ಲಕ್ಷ್ಮಣ್ ರಿಷಬ್ ಶೆಟ್ಟಿ ಅಭಿನಯದ 'ಹೀರೋ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.

ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಗಾನವಿ ಲಕ್ಷ್ಮಣ್ ಮುಂದೆ ನಟಿಸಿದ್ದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಜೊತೆಗೆ. ಹೌದು, ಶಿವರಾಜ್ ಕುಮಾರ್ ಅಭಿನಯದ 'ವೇದ' ಸಿನಿಮಾದಲ್ಲಿ ಪುಷ್ಪ ಪಾತ್ರದ ಮೂಲಕ ಮೋಡಿ ಮಾಡಿದ ಗಾನವಿ ಲಕ್ಷ್ಮಣ್ ಸೆಂಚುರಿ ಸ್ಟಾರ್ ಹೆಂಡತಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.
'ವೇದ' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದು ಮಾತ್ರವಲ್ಲದೇ ಗಾನವಿ ಲಕ್ಷ್ಮಣ್ ಅವರ ಪುಷ್ಪಾ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿತು. ಜೊತೆಗೆ ಮೊದಲ ಬಾರಿಗೆ ರೆಬಲ್ ಆಗಿರುವಂತಹ ಹೆಣ್ಣು ಮಗಳ ಪಾತ್ರಕ್ಕೆ ಈಕೆ ಜೀವ ತುಂಬಿದ್ದರು. ಮಾತ್ರವಲ್ಲ ನಂತರ 'ಭಾವಚಿತ್ರ' ಎನ್ನುವ ಸಿನಿಮಾದಲ್ಲಿಯೂ ಈಕೆ ಬಣ್ಣ ಹಚ್ಚಿದ್ದರು.
ಅಂದ ಹಾಗೇ ಕನ್ನಡ ಕಿರುತೆರೆ ಜೊತೆಗೆ ಹಿರಿತೆರೆ ವೀಕ್ಷಕರ ಮನ ಸೆಳೆದಿರುವ ಗಾನವಿ ಲಕ್ಷ್ಮಣ್ ಈಗಾಗಲೇ ಪರಭಾಷೆಯ ಸಿನಿರಂಗದಲ್ಲಿ ಮೋಡಿ ಮಾಡಿದ್ದಾರೆ. ತೆಲುಗಿನ 'ರುದ್ರಾಂಗಿ' ಸಿನಿಮಾದಲ್ಲಿ ನಾಯಕಿ 'ರುದ್ರಾಂಗಿ' ಯಾಗಿ ಅಭಿನಯಿಸಿರುವ ಗಾನವಿ ಲಕ್ಷ್ಮಣ್ ಅಲ್ಲೂ ತಮ್ಮ ನಟನಾ ಕಂಪನ್ನು ಪಸರಿಸಿದ ಚೆಲುವೆ. ಟಾಲಿವುಡ್‌ನ ಜನಪ್ರಿಯ ನಟರಾದ ಜಗಪತಿ ಬಾಬು, ಆಶೀಶ್ ಗಾಂಧಿ, ಮಮ್ತಾ ಮೋಹನದಾಸ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ ಕೆ.ಶಂಕರ್ ಅವರ ನಿರ್ದೇಶನದ ಕನ್ನಡ ಸಿನಿಮಾ 'ನನಗೂ ಹೆಂಡ್ತಿ ಬೇಕು' ಎನ್ನುವ ಸಿನಿಮಾದಲ್ಲಿ ಈಕೆ ಬಣ್ಣ ಹಚ್ಚಲಿದ್ದಾರೆ. ತಬಲಾ ನಾಣಿ, ಬ್ಯಾಂಕ್ ಜನಾರ್ಧನ್, ಕಿಲ್ಲರ್ ವೆಂಕಟೇಶ್, ಚೈತ್ರಾ ಕೊಟ್ಟೂರು ಮುಂತಾದ ಕಲಾವಿದರುಗಳು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
ಅಂದ ಹಾಗೇ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಗಾನವಿ ಲಕ್ಷ್ಮಣ್ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇಂತಿಪ್ಪ ಈಕೆ ಮತ್ತೊಮ್ಮೆ ಕಿರುತೆರೆಗೆ ಕಾಲಿಡುತ್ತಾರಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











