ಮಗಳು ಜಾನಕಿ ಧಾರಾವಾಹಿ ಪ್ರಸಾರವಿಲ್ಲ: ನಿರ್ದೇಶಕ ಸೀತಾರಾಮ್
ಕನ್ನಡದಲ್ಲಿ ಪ್ರಸಾರಾಗುತ್ತಿರುವ ಕೆಲವೇ ಗುಣಮಟ್ಟದ ಧಾರಾವಾಹಿಗಳಲ್ಲಿ ಮಗಳು ಜಾನಕಿ ಒಂದು. ಈ ಧಾರವಾಹಿಗೆ ಅದರದ್ದೇ ಆದ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ.
Recommended Video
ಬೇಸರದ ಸಂಗತಿಯೆಂದರೆ 'ಮಗಳು ಜಾನಕಿ' ಧಾರಾವಾಹಿ ಇನ್ನುಮುಂದೆ ಪ್ರಸಾರವಾಗುವುದು ಅನುಮಾನ. ಈ ಬಗ್ಗೆ ಧಾರಾವಾಹಿಯ ನಿರ್ದೇಶಕ ಟಿ.ಎನ್.ಸೀತಾರಾಮ್ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.
ಮಗಳು ಜಾನಕಿ ಪ್ರಸಾರವಾಗುತ್ತಿದ್ದ ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಬಂದ್ ಆದ ಕಾರಣ ಧಾರಾವಾಹಿ ಪ್ರಸಾರ ಸಹ ಬಂದ್ ಆಗುತ್ತಿದೆ. ಚಾನೆಲ್ ಪುನಃ ಪ್ರಾರಂಭವಾದರೆ ಧಾರಾವಾಹಿ ಮುಂದುವರೆಯಬಹುದೇ ಎಂಬುದರ ಬಗ್ಗೆ ಸೀತಾರಾಮ್ ಸ್ಪಷ್ಟನೆಗಾಗಿ ನಿರೀಕ್ಷಿಸಲಾಗುತ್ತಿದೆ.

ಕಲರ್ಸ್ ಸೂಪರ್ ವಾಹಿನಿ ಬಂದ್
ಟಿ.ಎನ್.ಸೀತಾರಾಮ್ ಫೇಸ್‌ಬುಕ್‌ನಲ್ಲಿ ಹೇಳಿರುವಂತೆ, 'ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಅಕ್ಟೋಬರ್ ವರೆಗೆ ಸ್ಥಗಿತಗೊಳ್ಳುತ್ತಿದೆ. ಅದಕ್ಕೆ ಮುಂಚೆ ಜೂನ್ ಒಂದರಿಂದ ರಾತ್ರಿ 9.30 ಕ್ಕೆ ನಾವು ಹಿಂದೆ ಶೂಟಿಂಗ್ ಮುಗಿಸಿದ್ದ ಮಗಳು ಜಾನಕಿಯ ಹೊಸ ಎಪಿಸೋಡು ಗಳನ್ನು ಸುಮಾರು ಎರಡು ವಾರಗಳ ಕಾಲ ಪ್ರಸಾರ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.

ಪ್ರೇಕ್ಷಕರಿಗೆ ಧನ್ಯವಾದಗಳು: ಟಿ.ಎನ್.ಸೀತಾರಾಮ್
'ನೀವು ಮಗಳು ಜಾನಕಿಗೆ ತೋರಿದ ಪ್ರೀತಿ ಕಂಡು ನನ್ನ ಹೃದಯ ಆರ್ದ್ರ ಗೊಂಡಿದೆ. ನಿಮಗೆಲ್ಲ ಧನ್ಯವಾದಗಳು ಮತ್ತೊಮ್ಮೆ ನಿಮ್ಮ ಜತೆ ಮಾತನಾಡುತ್ತೇನೆ. ಪ್ರೀತಿ ತುಂಬಿದ ನಮನಗಳು' ಎಂದು ಸೀತಾರಾಮ್ ಭಾವುಕವಾಗಿ ಅಭಿನಂದನೆ ತಿಳಿಸಿದ್ದಾರೆ.

ಬೇರೆ ಚಾನಲ್ ನಲ್ಲಿ ಪ್ರಸಾರವಾಗುವುದಿಲ್ಲ
ಕಲರ್ಸ್ ಸೂಪರ್ ವಾಹಿನಿ ಸ್ಥಗಿತವಾದರೆ ಏನಂತೆ, ಬೇರೆ ಚಾನಲ್ ಗಳಲ್ಲಿ ಮುಂದುವರೆಸ ಬೇಕೆಂದು ಅನೇಕರು ಸೀತಾರಾಮ್ ಅವರನ್ನು ಕೇಳಿದ್ದಾರಂತೆ ಆದರೆ ಕಾರಣಾಂತರಗಳಿಂದ ಅದು ಸಾಧ್ಯವಿಲ್ಲ ಎಂದು ಸೀತಾರಾಮ್ ಹೇಳಿದ್ದಾರೆ.

ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಮಗಳು ಜಾನಕಿ
ಮಗಳು ಜಾನಕಿ ಧಾರಾವಾಹಿಯು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಉತ್ತಮ ಕಥಾಹಂದರ, ಅತ್ಯುತ್ತಮ ಸಂಭಾಷಣೆ ಇದ್ದ ಮಗಳು ಜಾನಕಿ ಧಾರಾವಾಹಿ ಟಿ.ಎನ್.ಸೀತಾರಾಮ್ ಅವರ ಹಿಂದಿನ ಧಾರಾವಾಹಿಗಳಂತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು..


Click it and Unblock the Notifications











