ಕ್ರಿಮಿನಲ್ ಲಾಯರ್ ಸಿ.ಎಸ್.ಪಿ ತಲೆಯಲ್ಲಿ ಅನುಮಾನದ ಹುಳ ಹೊಕ್ಕಿದೆ.!
ಮನೆ ಬಾಡಿಗೆ ಕಟ್ಟುವ ಸಾಮರ್ಥ್ಯ ಇಲ್ಲದೆ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ ನಿರಂಜನ್ ಗೆ ಹೆಣ್ಣು ಕೊಡುತ್ತಿರುವ ಶ್ರೀಮಂತರು ಯಾರು.? ಖರ್ಚಿಗೆ ಕಾಸು ಇಲ್ಲದೆ ಸಿ.ಎಸ್.ಪಿ ರಿಂದಲೇ ಸಾಲ ಮಾಡಿದ್ದ ನಿರಂಜನ್, ಅದೇ ಸಿ.ಎಸ್.ಪಿಗೆ ಕರಿ ಕೋಟು ಉಡುಗೊರೆ ನೀಡುವ ಮಟ್ಟಕ್ಕೆ ದಿಢೀರ್ ಅಂತ ಬೆಳೆದಿದ್ದು ಹೇಗೆ.?
ಅಸಲಿಗೆ, ಈ ನಿರಂಜನ್ ಯಾರು.? ಆತನ ಪೂರ್ಣ ಹೆಸರೇನು.? ನಿರಂಜನ್ ತಂದೆ ಯಾರು.? 'ಮಗಳು' ಜಾನಕಿ ಮದುವೆ ಆಗುತ್ತಿರುವ ಗಂಡು ಇದೇ ನಿರಂಜನ್ ನಾ.? ಇಂತಹ ಹತ್ತು ಹಲವು ಪ್ರಶ್ನೆಗಳು ಸದ್ಯ ಪ್ರಖ್ಯಾತ ಕ್ರಿಮಿನಲ್ ಲಾಯರ್ ಸಿ.ಎಸ್.ಪಿಗೆ ಕಾಡುತ್ತಿದೆ.
ಮನೆಗೆ ಬಂದಿದ್ದ ಅತಿಥಿಯೊಬ್ಬರು ಬೈ ಮಿಸ್ ಆಗಿ ಬಿಟ್ಟು ಹೋಗಿದ್ದ ಲಗ್ನ ಪತ್ರಿಕೆ ಸಿ.ಎಸ್.ಪಿ ಸಹೋದರಿ ಶ್ಯಾಮಲ ಕೈಗೆ ಸಿಕ್ತು. ಲಗ್ನ ಪತ್ರಿಕೆಯಲ್ಲಿ ವಧು ಹೆಸರು 'ಜಾನಕಿ ಭಾರ್ಗಿ' ಅಂತ ಬರೆದಿದ್ದು ನೋಡಿ ''ಸಿ.ಎಸ್.ಪಿ ಪುತ್ರಿ ಜಾನಕಿಗೆ ಮದುವೆ ಫಿಕ್ಸ್ ಆಗಿದೆ'' ಎಂಬ ವಿಷಯ ಶ್ಯಾಮಲಗೆ ಖಾತ್ರಿ ಆಯ್ತು.
ಹುಡುಗ ನಿರಂಜನ್ ಧಾವಳಿ ಐ.ಎ.ಎಸ್ ಓದಿರುವಾತ ಅಂತ ಲಗ್ನ ಪತ್ರಿಕೆ ಓದಿದ ಶ್ಯಾಮಲಗೆ ಗೊತ್ತಾಯ್ತು. ಆದ್ರೆ, ಎಷ್ಟೇ ಆಗಲಿ ಸಿ.ಎಸ್.ಪಿ ಕ್ರಿಮಿನಲ್ ಲಾಯರ್. ವರನ ಹೆಸರು ನಿರಂಜನ್ ಅಂತ ಕೇಳಿದ ಕೂಡಲೆ ಸಿ.ಎಸ್.ಪಿ ತಲೆಯಲ್ಲಿ ಅನುಮಾನದ ಹುಳ ಹರಿದಾಡುತ್ತಿದೆ. ಮುಂದೆ ಓದಿರಿ....

ಸಿ.ಎಸ್.ಪಿಗೆ ಇರುವುದು ಒಂದೇ ಆಸೆ
'ಮಗಳು' ಜಾನಕಿ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟಿರುವ ಸಿ.ಎಸ್.ಪಿಗೆ ಇರುವುದು ಒಂದೇ ಆಸೆ. ಅದೇನಪ್ಪಾ ಅಂದ್ರೆ, ಒಳ್ಳೆಯ ಹುಡುಗನ ಜೊತೆಗೆ ಜಾನಕಿ ಮದುವೆ ಆಗಬೇಕು. ಆದ್ರೆ, ಸಿ.ಎಸ್.ಪಿ ರವರ ಈ ಆಸೆಗೆ ಜಾನಕಿ ಸಾಕು ತಂದೆ ಚಂದು ಭಾರ್ಗಿ ಅಡ್ಡಗಾಲು ಹಾಕಿದ್ದಾರೆ.

ಸಿ.ಎಸ್.ಪಿ ಮೇಲೆ ದ್ವೇಷ
ಚಂದು ಭಾರ್ಗಿ ಎರಡು ಬಾರಿ ಜೈಲಿಗೆ ಹೋಗಲು ಸಿ.ಎಸ್.ಪಿ ಕಾರಣ. ಹೀಗಾಗಿ, ಸಿ.ಎಸ್.ಪಿ ವಿರುದ್ಧ ಸೇಡು ತೀರಿಸಿಕೊಳ್ಳಲು, ಅವರ ಪುತ್ರಿ ಜಾನಕಿ ಬದುಕಲ್ಲಿ ಚಂದು ಭಾರ್ಗಿ ಆಟವಾಡುತ್ತಿದ್ದಾರೆ.

ಜಾನಕಿಗೆ ಮಾನಸಿಕ ಹಿಂಸೆ
ಜಾನಕಿ ಇಷ್ಟ ಪಟ್ಟಿದ್ದ ಹುಡುಗ... ಐ.ಎ.ಎಸ್ ಪಾಸ್ ಮಾಡಿರುವ ಆನಂದ್ ಜೊತೆ ಮದುವೆ ಮಾಡದೆ, ಕೆಲಸ ಇಲ್ಲದೆ ಖಾಲಿ ಕೂತಿರುವ 'ನಕಲಿ' ಐ.ಎ.ಎಸ್ ಆಫೀಸರ್ ನಿರಂಜನ್ ಧಾವಳಿಗೆ ಜಾನಕಿಯನ್ನ ಕೊಟ್ಟು ಮದುವೆ ಮಾಡಲು ಚಂದು ಭಾರ್ಗಿ ಮುಂದಾಗಿದ್ದಾರೆ.

ಜಾಮೀನು ಪಡೆದು ಹೊರಬಂದ ಆನಂದ್
ಕಾತ್ಯಾಯಿನಿ ಮೆನನ್ ಆತ್ಮಹತ್ಯೆ ಪ್ರಕರಣದಲ್ಲಿ ತಪ್ಪಿಲ್ಲದಿದ್ದರೂ, ಆನಂದ್ ಬಂಧನಕ್ಕೊಳಗಾಗಿದ್ದು ಚಂದು ಭಾರ್ಗಿಯಿಂದ. ಇತ್ತ ಆನಂದ್ ಸುಳ್ಳು ಹೇಳಿ ಮೋಸ ಮಾಡಿದ್ದಾನೆ ಎಂಬ ಬೇಸರ ಜಾನಕಿಗೆ. ಆನಂದ್ ಮೇಲೆ ಮುನಿಸಿಕೊಂಡು ನಿರಂಜನ್ ಜೊತೆಗಿನ ಮದುವೆಗೆ ಜಾನಕಿ ಒಪ್ಪಿಗೆ ಕೊಟ್ಟುಬಿಟ್ಟಳು. ಆದ್ರೀಗ, ಆನಂದ್ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಜಾನಕಿ-ಆನಂದ್ ಮೀಟಿಂಗ್.!
ಬಿಡುಗಡೆ ಆದ್ಮೇಲೆ ಜಾನಕಿಯನ್ನ ಭೇಟಿ ಮಾಡಿ ಇರುವ ಸತ್ಯವನ್ನ ಹೇಳಲು ಆನಂದ್ ಸಿದ್ಧವಾಗಿದ್ದಾರೆ. ಆನಂದ್ ಮಾತನ್ನ ಜಾನಕಿ ಒಪ್ಪುತ್ತಾಳಾ.? ನಿರಂಜನ್ ಜೊತೆಗಿನ ಮೋಸದ ಮದುವೆಯಿಂದ ಜಾನಕಿ ಬಚಾವ್ ಆಗುತ್ತಾಳಾ.? ಎಂಬುದೇ ಸದ್ಯದ ಪ್ರಶ್ನೆ.

ಬಾಯ್ಬಿಡಿಸುತ್ತಾರಾ ಸಿ.ಎಸ್.ಪಿ.?
ನಿರಂಜನ್ ಹಿನ್ನಲೆಯನ್ನ ತಿಳಿದುಕೊಳ್ಳಲು ಸಿ.ಎಸ್.ಪಿ ತೀರ್ಮಾನಿಸಿದ್ದಾರೆ. ಸತ್ಯವನ್ನ ಸಿ.ಎಸ್.ಪಿ ಮುಂದೆ ಬಾಯ್ಬಿಡುತ್ತಾರಾ ನಿರಂಜನ್.? ಕಾದು ನೋಡಬೇಕು.


Click it and Unblock the Notifications











