ಕೇವಲ 24 ಘಂಟೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಟಿ, ಫ್ಯಾನ್ಸ್ ಗೆ ಶಾಕ್...!
ಬಿಗ್ ಬಾಸ್‌ನ ಭಜನೆ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ. ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಶುರುವಾಗಿದೆ. ಜನರಿಗೆ ಮನರಂಜನೆಯನ್ನು ನೀಡುತ್ತಾ ಅವರನ್ನು ಹಿಡಿದು ಕೂರಿಸುವ ಕಸರತ್ತು ಆರಂಭವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಬಿಗ್ ಬಾಸ್ ಪ್ರಾರಂಭವಾದ ಒಂದು ವಾರದಲ್ಲಿಯೇ ಲವ್ವು-ನೋವು ಎಂದು ಡ್ರಾಮಾ ಶುರುವಾಗಿದೆ. 17 ಜನರ ಪೈಕಿ ಆಗಲೇ ಒಬ್ಬರನ್ನು ಹೊರ ಕಳುಹಿಸಲಾಗಿದೆ.
ಇನ್ನೂ ಯಮುನಾ ಶ್ರೀನಿಧಿ ಹೊರ ಬಂದ ಬೆನ್ನಲ್ಲಿಯೇ ಕೇವಲ ಒಂದೇ ವಾರಕ್ಕೆ ಸ್ಫರ್ಧಿಯನ್ನು ಮನೆಯಾಚೆ ಕಳುಹಿಸಬಾರದಿತ್ತು ಎನ್ನುವ ಚರ್ಚೆ ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಮನೆಯ ಬಾಕಿ ಸದಸ್ಯರನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತೆ ಕೊನೆ ಪಕ್ಷ ಇನ್ನೊಂದು ವಾರವಾದರೂ ಮನೆಯಲ್ಲಿ ಯಮುನಾ ಶ್ರೀನಿಧಿ ಅವರನ್ನು ಉಳಿಸಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರ ನಡುವೆ ಕನ್ನಡದ ಬಿಗ್ ಬಾಸ್‌ಗೆ ಸೆಡ್ಡು ಹೊಡೆಯುವಂತೆ ತಮಿಳಿನಲ್ಲಿ ಕೇವಲ 24 ಘಂಟೆಯಲ್ಲಿಯೇ ಸ್ಫರ್ಧಿಯೊಬ್ಬರನ್ನೂ ಮನೆಯಾಚೆ ಕಳುಹಿಸಲಾಗಿದೆ.

ಹೌದು, ಸಚನಾ ನಮಿದಾಸ್.. ಈ ಬಾರಿ ಬಿಗ್ ಬಾಸ್‌ನ ನಿರೂಪಣೆಯ ಜವಾಬ್ಧಾರಿಯನ್ನೊತ್ತ ವಿಜಯ್ ಸೇತುಪತಿ ಜೊತೆ ಮಹಾರಾಜಾ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದ ನಟಿ. ಮಹಾರಾಜಾದಲ್ಲಿ ವಿಜಯ್ ಸೇತುಪತಿ ಮಗಳ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದ ಸಚನಾ ನಮಿದಾಸ್, ಈ ಬಾರಿ ಬಿಗ್ ಬಾಸ್ ಮನೆಯನ್ನು ಖುಷಿ ಖುಷಿಯಿಂದ ಪ್ರವೇಶಿಸಿದ್ದರು. ಬಿಗ್ ಬಾಸ್ ಮನೆಗೆ ಬಂದ ಅತ್ಯಂತ ಕಿರಿಯ ಸ್ಫರ್ಧಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇನ್ನೂ.. ಸಚನಾ ಅವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಿದ್ದ ಅನೇಕರು ಈ ಬಾರಿ ಬಿಗ್ ಬಾಸ್ ಗೆಲ್ಲುವ ಸ್ಫರ್ಧಿ ಇವರೇ ಎಂದು ಹೇಳಿದ್ದರು.
ಆದರೆ, ದುರಾದೃಷ್ಟಕ್ಕೆ.. ಸಚನಾ ಅವರನ್ನು ಕೇವಲ 24 ಘಂಟೆಯಲ್ಲಿ ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಅಂದ್ಹಾಗೇ ಮೊದಲ ದಿನ 18 ಜನರನ್ನು ಮನೆಯ ಒಳಗೆ ಕಳುಹಿಸಿದ ವಿಜಯ್ ಸೇತುಪತಿ, ಎಲ್ಲರ ಕೈಯಲ್ಲಿ ಒಂದೊಂದು ಟ್ರೋಫಿಯನ್ನು ಕೊಟ್ಟು ಕಳುಹಿಸಿದ್ದರು. ಇಷ್ಟೇ ಅಲ್ಲ ಮೊದಲನೇ ದಿನವೇ ಮನೆಯ ಸದಸ್ಯರಿಗೆ ಕಠಿಣ ಟಾಸ್ಕ್ ಒಂದನ್ನು ಕೂಡ ನೀಡಿದ್ದರು. ಎಲ್ಲರೂ ಸೇರಿ ಒಬ್ಬರನ್ನು ಮನೆಯ ಹೊರಗೆ ಕಳುಹಿಸಬೇಕು ಎಂದು ಹೇಳಿದ್ದರು. ಅದ್ರಂತೆ ಒಂದಾದ ಮನೆಯ ಎಲ್ಲ ಸದಸ್ಯರು ಸಚನಾ ಅವರನ್ನು ಮನೆಯ ಹೊರಗೆ ಕಳುಹಿಸಬೇಕೆಂದರು. ಮನೆಯವರ ಕೆಂಗಣ್ಣಿಗೆ ಗುರಿಯಾದ ಸಚನಾ ಹೊರ ಬಂದರು.
ಸಹಜವಾಗಿ ಮನೆಯ ಸದಸ್ಯರ ಈ ನಡೆಯಿಂದ ಬೇಸರಗೊಂಡ ಸಚನಾ ನಮಿದಾಸ್, ವಿಜಯ್ ಸೇತುಪತಿ ಅವರಿಗೆ ನೀಡಿದ್ದ ಮೂರ್ತಿಯನ್ನು ಅಲ್ಲಿಯೇ ಒಡೆದು ಹಾಕಿದ್ದಾರೆ. ಕಣ್ಣೀರು ಹಾಕುತ್ತಾ ಮನೆಯಾಚೆ ಬಂದಿದ್ದಾರೆ, ಇನ್ನೂ ಸಚನಾ ಅವರ ಕಣ್ಣೀರನ್ನು ಕಂಡು ಬಿಗ್ ಬಾಸ್ ಗೆ ಹಿಡಿ ಶಾಪ ಹಾಕುತ್ತಿರುವ ಅನೇಕರು, ಇದು ಸಚನಾಗೆ ಆದ ಅನ್ಯಾಯ ಎನ್ನುತ್ತಿದ್ದಾರೆ. 24 ಘಂಟೆಯಲ್ಲಿ ಮನೆಯ ಹೊರಗಡೆ ಕಳುಹಿಸುವುದೇ ಇದ್ದರೆ ಅವರನ್ನು ಮನೆಯ ಒಳಗೆ ಕರೆದುಕೊಂಡಿದ್ದಾರೂ ಯಾಕೆ ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪ್ರೇಕ್ಷಕರ ಈ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಮುಂದೆ ಮತ್ತೆ ಸಚನಾ ಅವರ ಕೈಗೆ ವೈಲ್ಡ್ ಕಾರ್ಡ್ ನೀಡಿ, ವಿಜಯ್ ಸೇತುಪತಿ ಮನೆಯೊಳಗೆ ಕಳುಹಿಸುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











